ಶಾಲಾ ಮಕ್ಕಳೊಂದಿಗೆ ಕಾಲ ಕಳೆದ ಸಚಿವ ಬೋಸರಾಜು

KannadaprabhaNewsNetwork |  
Published : Sep 04, 2024, 01:56 AM IST
5456 | Kannada Prabha

ಸಾರಾಂಶ

ಹೂಲಿಕೇರಿ ಇಂದಿರಮ್ಮನ ಕೆರೆಗೆ ಭೇಟಿ ನೀಡಿ ಮರಳಿ ಧಾರವಾಡದತ್ತ ಹೊರಟಾಗ ಮಧ್ಯಾಹ್ನ ಶಾಲಾ ಆವರಣದಲ್ಲಿ ಮಕ್ಕಳು ಬಿಸಿಯೂಟ ಸೇವಿಸುವುದನ್ನು ಗಮನಿಸಿದ ಸಚಿವರು, ಕಾರು ನಿಲ್ಲಿಸಿ ಶಾಲಾ ಆವರಣದೊಳಗೆ ಆಗಮಿಸಿ ಮಕ್ಕಳೊಂದಿಗೆ ಪಲಾವ್‌, ಶೇಂಗಾ ಚಟ್ನಿ, ಸಾಂಬಾರ ಸವಿದರು.

ಅಳ್ನಾವರ:

ಸಮೀಪದ ಕಡಬಗಟ್ಟಿ ಸರ್ಕಾರಿ ಶಾಲಾ ಆವರಣಕ್ಕೆ ಮಂಗಳವಾರ ಮಧ್ಯಾಹ್ನ ದಿಢೀರ್‌ ಭೇಟಿ ನೀಡಿದ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಮಕ್ಕಳೊಂದಿಗೆ ತುಸು ಹೊತ್ತು ಕಾಲ ಕಳೆದು ಬಿಸಿಯೂಟದ ರುಚಿ ಸವಿದು ಸಂತಸಪಟ್ಟರು.

ತಾಲೂಕಿನ ಹೂಲಿಕೇರಿ ಇಂದಿರಮ್ಮನ ಕೆರೆಗೆ ಭೇಟಿ ನೀಡಿ ಮರಳಿ ಧಾರವಾಡದತ್ತ ಹೊರಟಾಗ ಮಧ್ಯಾಹ್ನ ಶಾಲಾ ಆವರಣದಲ್ಲಿ ಮಕ್ಕಳು ಬಿಸಿಯೂಟ ಸೇವಿಸುವುದನ್ನು ಗಮನಿಸಿದ ಸಚಿವರು, ಕಾರು ನಿಲ್ಲಿಸಿ ಶಾಲಾ ಆವರಣದೊಳಗೆ ಆಗಮಿಸಿ ಮಕ್ಕಳೊಂದಿಗೆ ಪಲಾವ್‌, ಶೇಂಗಾ ಚಟ್ನಿ, ಸಾಂಬಾರ ಸವಿದರು. ಇವರೊಂದಿಗೆ ಬಂದಿದ್ದ ಅಧಿಕಾರಿಗಳು ಸಹ ಬಿಸಿಯೂಟ ರುಚಿ ಕಂಡರು.

ನಿಯಮಿತ ಆಹಾರ ಪೂರೈಕೆ, ಯಾವ ದಿನ ಯಾವ ಆಹಾರ ನೀಡಲಾಗುತ್ತದೆ. ಊಟ ನಿಮಗೆ ಹಿಡಿಸುತ್ತಿದೆಯೇ, ಶಿಕ್ಷಕರು ನಿಯಮಿತವಾಗಿ ಶಾಲೆಗೆ ಬರುತ್ತಾರೇಯೆ, ಪಠ್ಯದ ಜತೆಗೆ ಯಾವ ಚಟುವಟಿಕೆ ನಡೆಯುತ್ತಿವೆ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳಿಗೆ ಮಕ್ಕಳಿಂದ ಉತ್ತರ ಪಡೆದರು.

ಮಕ್ಕಳೊಂದಿಗೆ ಕಾಲ ಕಳೆದ ಸಚಿವರು ತಮ್ಮ ಶಾಲಾ ದಿನಗಳನ್ನು ನೆನೆದರು. ಮಕ್ಕಳಿಗೆ ಪೌಷ್ಟಿಕಾಂಶಯುಳ್ಳ ಆಹಾರ ಸರಿಯಾಗಿ ದೊರೆಯಬೇಕು. ಹಸಿದ ಹೊಟ್ಟೆಗೆ ಊಟ ದೊರೆತಾಗ ಪಾಠದ ಮೇಲೆ ಗಮನ ಹರಿಸಲು ಸಾಧ್ಯ, ಸರ್ಕಾರ ಮಕ್ಕಳ ಶಿಕ್ಷಣ ಹಾಗೂ ಬಿಸಿಯೂಟಕ್ಕೆ ಸಾಕಷ್ಟು ಹಣ ನೀಡುತ್ತಿದೆ. ಇದನ್ನು ಸರಿಯಾಗಿ ಬಳಸಿಕೊಂಡು ದೇಶದ ಉಜ್ವಲ ಭವಿಷ್ಯ ರೂಪಿಸುವ ಮಕ್ಕಳನ್ನು ತಯಾರಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಶಿಕ್ಷಕರ ಜತೆ ಸಂವಾದ ನಡೆಸಿದ ಸಚಿವರು, ಮಕ್ಕಳಿಗೆ ಶೈಕ್ಷಣಿಕ ಮೌಲ್ಯವನ್ನು ಧಾರೆ ಎರೆಯುವ ಜತೆಗೆ ಮಾನವೀಯ ಮೌಲ್ಯ ತಿಳಿಸಿಕೊಡುವಂತೆ ತಿಳಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ, ಶ್ರಿಕಾಂತ ಗಾಯಕವಾಡ, ಹರೀಶ, ವೀರಭದ್ರ ಹಂಚಿನಾಳ, ಸಾವಕ್ಕ ಹಿರೇಮಠ, ಡಾ. ನರಸಿಂಹಲು, ಚೆನ್ನಮ್ಮ ಹಿರೇಮಠ, ಚಂದ್ರವತಿ, ದಸಗೀರಸಾಬ ಹುನಸಿಕಟ್ಟಿ, ಪಿಎಸ್‌ಐ ಪ್ರವೀಣ ನೆಸರಗಿ ಇದ್ದರು.

PREV