ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆಗೆ ಸಚಿವ ಚಲುವರಾಯಸ್ವಾಮಿ ಚಾಲನೆ

KannadaprabhaNewsNetwork |  
Published : Aug 18, 2025, 12:00 AM IST
16ಕೆಎಂಎನ್ ಡಿ36  | Kannada Prabha

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಹಕಾರದಿಂದ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅನುದಾನದಡಿ 2200 ಮುಟ್ಟಿನ ಕಪ್ ಗಳು ದೊರೆತಿವೆ. ತಜ್ಞ ವೈದ್ಯರ ಸಲಹೆಯಂತೆ ಪ್ರಾಥಮಿಕ ಹಂತದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮುಟ್ಟು ಮುಜುಗರವಲ್ಲ; ಹೆಮ್ಮೆ ಎಂಬ ಘೋಷವಾಕ್ಯದಡಿ ಮುಟ್ಟಿನ ಕಪ್ ವಿತರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಪಂನಿಂದ ಸಖಿ ಸುರಕ್ಷಾ ವಿನೂತನ ಕಾರ್ಯಕ್ರಮದಡಿ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ 10 ಜನ ಆಶಾ ಕಾರ್ಯಕರ್ತೆಯರಿಗೆ ಸಾಂಕೇತಿಕವಾಗಿ ಮುಟ್ಟಿನ ಕಪ್ ವಿತರಿಸಿದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಹಕಾರದಿಂದ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅನುದಾನದಡಿ 2200 ಮುಟ್ಟಿನ ಕಪ್ ಗಳು ದೊರೆತಿವೆ. ತಜ್ಞ ವೈದ್ಯರ ಸಲಹೆಯಂತೆ ಪ್ರಾಥಮಿಕ ಹಂತದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮುಟ್ಟು ಮುಜುಗರವಲ್ಲ; ಹೆಮ್ಮೆ ಎಂಬ ಘೋಷವಾಕ್ಯದಡಿ ಮುಟ್ಟಿನ ಕಪ್ ವಿತರಿಸಲಾಗುತ್ತಿದೆ ಎಂದರು.

ಮುಟ್ಟಿನ ಕಪ್ ಬಳಕೆ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲು ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾಗುತ್ತಿದೆ. ನಂತರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಶಾಲೆಗಳಲ್ಲಿನ ಮಹಿಳಾ ಸಿಬ್ಬಂದಿ, ಗ್ರಾಪಂ ಮಹಿಳಾ ಸದಸ್ಯರು ಹಾಗೂ ಸಿಬ್ಬಂದಿ, ಎನ್.ಆರ್.ಎಲ್.ಎಂ.ಯೋಜನೆ ಕೃಷಿ ಹಾಗೂ ಪಶು ಸಖಿಯರು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಿಬ್ಬಂದಿ, ಶಾಲೆಗಳ, ಹಾಸ್ಟೆಲ್ ವಾರ್ಡನ್ ಗಳಿಗೆ ವಿತರಿಸಲು ಉದ್ದೇಶಿಸಲಾಗಿದೆ ಎಂದರು.

ಆ ನಂತರದ ದಿನಗಳಲ್ಲಿ ಪದವಿ, ಪಿಯು, ಐಟಿಐ ಕಾಲೇಜು ಹಾಗೂ ಎಸ್ಸೆಸ್ಸೆಲ್ಸಿ ಹೆಣ್ಣು ಮಕ್ಕಳಿಗೆ ವಿತರಿಸಲಾಗುವುದು. ಈ ಬಗ್ಗೆ ಜಿಲ್ಲಾ, ತಾಲೂಕು ಮತ್ತು ಗ್ರಾಪಂ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುತ್ತಿದೆ. ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಿತಿಯಲ್ಲಿದ್ದು, ಮುಟ್ಟಿನ ಕಪ್ ಬಳಕೆ ಕುರಿತು ಅರಿವು ಮೂಡಿಸುವುದು, ವಿತರಣೆ ಹಾಗೂ ಬಳಕೆ ಕುರಿತು ನಿರಂತರ ಅನುಸರಣೆಗೆ ಕ್ರಮವಹಿಸಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ಮುಟ್ಟಿನ ಕಪ್ ವಿತರಣೆಗೆ ಸಾಂಕೇತಿಕವಾಗಿ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಚಾಲನೆ ನೀಡಿದ್ದಾರೆ. ಮುಂದಿನ ಸ್ವಾತಂತ್ರ್ಯ ದಿನಾಚರಣೆಯ ಒಳಗೆ ಜಿಲ್ಲೆಯ ಎಲ್ಲಾ 25 ರಿಂದ 45 ವರ್ಷ ವಯೋಮಿತಿಯ ಮಹಿಳೆಯರಿಗೆ ಸಿ.ಎಸ್.ಆರ್.ಅನುದಾನದಲ್ಲಿ ಮುಟ್ಟಿನ ಕಪ್ ವಿತರಿಸುವ ಗುರಿ ಹೊಂದಲಾಗಿದೆ ಎಂದು ನಂದಿನಿ ತಿಳಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌