ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್ ರಾಜಕೀಯ ಪ್ರವೇಶ

KannadaprabhaNewsNetwork |  
Published : Apr 05, 2025, 12:49 AM ISTUpdated : Apr 05, 2025, 12:18 PM IST
ಸಚಿನ್ | Kannada Prabha

ಸಾರಾಂಶ

ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಪುತ್ರನನ್ನು ಅಖಾಡಕ್ಕೆ ಇಳಿಸಿದ್ದಾರೆ. ಸಂಘದ ಚುನಾವಣೆಗೆ ಶುಕ್ರವಾರ ಪತ್ನಿಯ ಜೊತೆ ತೆರಳಿ ಸಚಿನ್ ಉಮೇದುವಾರಿಕೆ ಸಲ್ಲಿಸಿದರು.

 ಮಂಡ್ಯ : ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಪುತ್ರ ಹಾಗೂ ನಟ ಸಚಿನ್ ರಾಜಕೀಯ ಅಖಾಡ ಪ್ರವೇಶಿಸಿದ್ದಾರೆ. ಸಹಕಾರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವುದರೊಂದಿಗೆ ರಾಜಕೀಯ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಸ್ಥಳೀಯ ಕಾಂಗ್ರೆಸ್ ನಾಯಕರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.

ತಾವು ಸಚಿವರಾಗಿರುವ ಸಮಯದಲ್ಲೇ ಪುತ್ರ ಸಚಿನ್ ಗೆ ರಾಜಕೀಯ ಕ್ಷೇತ್ರದಲ್ಲಿ ಸುಭದ್ರ ನೆಲೆಗಟ್ಟನ್ನು ಒದಗಿಸಬೇಕು ಎನ್ನುವುದು ಚಲುವರಾಯಸ್ವಾಮಿ ಅವರ ಹಂಬಲವಾಗಿದೆ. ಅದಕ್ಕಾಗಿ ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಪುತ್ರನನ್ನು ಅಖಾಡಕ್ಕೆ ಇಳಿಸಿದ್ದಾರೆ. ಸಂಘದ ಚುನಾವಣೆಗೆ ಶುಕ್ರವಾರ ಪತ್ನಿಯ ಜೊತೆ ತೆರಳಿ ಸಚಿನ್ ಉಮೇದುವಾರಿಕೆ ಸಲ್ಲಿಸಿದರು.

ಸಚಿನ್ ಗೆ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ ಮತ್ತಿತರರು ಸಾಥ್ ನೀಡಿದರು.

‘ಹ್ಯಾಪಿ ಬರ್ತ್ ಡೇ’ ಸಿನಿಮಾ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಸಚಿನ್ ಆನಂತರದಲ್ಲಿ ‘ಮಂಡ್ಯ ಬಾಯ್ಸ್’ ಚಿತ್ರದಲ್ಲೂ ನಟಿಸಿದ್ದರು. ಚಿತ್ರರಂಗದಲ್ಲಿ ನಿರೀಕ್ಷಿತ ಮಟ್ಟದ ಹೆಸರು, ಯಶಸ್ಸು ಸಿಗದ ಹಿನ್ನೆಲೆಯಲ್ಲಿ ನಟನೆಯಿಂದ ದೂರ ಉಳಿದಿದ್ದರು. ಕಳೆದ ಆರು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಚಿನ್ ಇದೀಗ ಸಕ್ರಿಯ ರಾಜಕಾರಣದತ್ತ ಮುಖ ಮಾಡಿದ್ದಾರೆ.

ಪುತ್ರ ಸಚಿನ್ ನನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲ್ಲಿಸುವುದರೊಂದಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸರ್ಕಾರದಿಂದ ನಾಮನಿರ್ದೇಶನ ಮಾಡಿ ಅಪೆಕ್ಸ್ ಬ್ಯಾಂಕಿಗೆ ಕಳುಹಿಸುವುದು ಚಲುವರಾಯಸ್ವಾಮಿ ಅವರ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ.

ಸಚಿನ್ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಿರುವುದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಮಾಜಿ ಶಾಸಕ ಕೆ. ಸುರೇಶ್ ಗೌಡ ಅವರು ಜೆಡಿಎಸ್ ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಸಚಿನ್ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲದಂತೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರರಂಗದಿಂದ ದೂರ ಉಳಿದ ಬಳಿಕ ಇಲ್ಲಿಯವರೆಗೆ ತಂದೆ ಚಲುವರಾಯಸ್ವಾಮಿ ಅವರೊಂದಿಗೆ ಹಲವು ರಾಜಕೀಯ ಸಭೆ, ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿದ್ದ ಸಚಿನ್ ಇದೀಗ ಚುನಾವಣೆಗೆ ಸ್ಪರ್ಧಿಸುವುದರೊಂದಿಗೆ ತಮ್ಮ ರಾಜಕೀಯ ಪ್ರವೇಶವನ್ನು ದೃಢಪಡಿಸಿದ್ದಾರೆ. ತಂದೆಯಂತೆ ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುವ ವಿಶ್ವಾಸವನ್ನು ಹೊಂದಿದ್ದಾರೆ. 

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌