ಸೊರಬ: ತಾಲೂಕಿನಲ್ಲಿ ಕಾಂಗ್ರೆಸ್ ಪುಂಡರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳಿಗೆ ಸಚಿವ ಮಧು ಬಂಗಾರಪ್ಪ ಅವರ ಕುಮ್ಮಕ್ಕು ಮತ್ತು ಶ್ರೀರಕ್ಷೆ ಇದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ ಆರೋಪಿಸಿದರು.
ಜಿಲ್ಲೆಯ ಉಸ್ತುವಾರಿ ಸಚಿವರು ಪೊಲೀಸ್ ಇಲಾಖೆಯ ಕೈ ಕಟ್ಟಿದ್ದಾರೆ. ಮಾ.೨೪ರಂದು ಸಹ ನಿಸರಾಣಿ ಗ್ರಾಪಂ ಸದಸ್ಯ ಚೀಲನೂರು ಸೋಮಪ್ಪ ಎಂಬ ಬಿಜೆಪಿ ಮುಖಂಡರ ಮೇಲೂ ಸಹ ಪುಂಡರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ ಅವರು, ಮುಂದಿನ ೨೪ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ತಾಲೂಕು ಬಿಜೆಪಿವತಿಯಿಂದ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ ೫ ವರ್ಷಗಳ ಹಿಂದೆ ಆಡಳಿತದಲ್ಲಿದ್ದ ತಾಲೂಕು ಬಿಜೆಪಿವತಿಯಿಂದ ಇಂತಹ ದೌರ್ಜನ್ಯ ಪ್ರಕರಣಗಳನ್ನು ನಡೆದ ದಾಖಲೆಗಳಿಲ್ಲ. ಆದರೆ 10 ತಿಂಗಳಿಂದ ಕಾಂಗ್ರೆಸ್ ಪಕ್ಷದಿಂದ ಜೀವನ ನಿರ್ವಹಣೆಗಾಗಿ ಬಗರ್‌ಹುಕುಂ ಸಾಗುವಳಿ ಮಾಡಿರುವ ಬಿಜೆಪಿ ಕಾರ್ಯಕರ್ತರಿಗೆ ವಿನಃ ಕಾರಣ ಬೆದರಿಕೆವೊಡ್ಡುವುದರ ಮೂಲಕ ದಂಡಾವರ್ತನೆ ಮಾಡುತ್ತಿದ್ದಾರೆ ಇದನ್ನು ತಕ್ಷಣ ನಿಲ್ಲಸಬೇಕು. ಇಲ್ಲದಿದ್ದರೆ ಬಿಜೆಪಿಯ ಶಕ್ತಿ ಪ್ರದರ್ಶನ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿ ನಾರಾಯಣಗುರು ವಸತಿ ಶಾಲೆಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕಾಲದಲ್ಲಿ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿದ್ದ ಪಟ್ಟಣದ ಸರ್ವೇ ನಂ.೧೧೩ರಲ್ಲಿ ಸುಮಾರು 20 ಎಕರೆ ಜಾಗವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಜೂರು ಮಾಡಿದ್ದರು. ಆದರೆ ಈಗಿನ ಶಾಸಕರು ಕುಪ್ಪೆ ಗ್ರಾಮಕ್ಕೆ ಸ್ಥಳಾಂತರ ಮಾಡಿದ್ದಾರೆ. ಪಟ್ಟಣದಲ್ಲಿರುವ ೨೦ ಎಕರೆ ಬೆಲೆವುಳ್ಳ ಜಾಗವನ್ನು ಭೂಗಳ್ಳರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ತಾಲೂಕಿನ ಸುಮಾರು ೧೦ ಕಿ.ಮೀ. ದೂರದಲ್ಲಿರುವ ಕುಪ್ಪೆಗೆ ಸ್ಥಳಾಂತರ ಮಾಡಿದ್ದಾರೆ. ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಜನರೆದುರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಮಡಿವಾಳ ಮಾಚಿದೇವ ನಿಗಮದ ಮಾಜಿ ಅಧ್ಯಕ್ಷ ರಾಜು ತಲ್ಲೂರು ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಗೀತಾ ಪರಾಜಿತರಾದ ನಂತರ ಎಷ್ಟು ಸಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ನಾಡಿ ಮಿಡಿತ ಅರಿತಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳಿವೆ, ಎಷ್ಟು ಬೂತ್‌ಗಳಿಗೆ, ಮತದಾರರ ಸಂಖ್ಯೆ ಎಷ್ಟಿದೆ ಎನ್ನುವ ಸಾಮಾನ್ಯ ಜ್ಞಾನ ಕೂಡಾ ಕಾಂಗ್ರೆಸ್ ಅಭ್ಯರ್ಥಿಗೆ ಇಲ್ಲ. ಯಾವುದೇ ಜನಪರ ವಿಚಾರಗಳ ಬಗ್ಗೆ ಧ್ವನಿ ಎತ್ತದ ಇವರು ಈಗ ಮತ್ತೊಮ್ಮೆ ಚುನಾವಣೆಗೆ ಬಂದಿದ್ದಾರೆ. ಈ ಬಾರಿ 3ರಿಂದ ೪ ಲಕ್ಷ ಮತಗಳ ಅಂತರದಲ್ಲಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ ಎಂದರು.ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರ್, ಮುಖಂಡರಾದ ಎ.ಎಲ್.ಅರವಿಂದ್, ದೇವೇಂದ್ರಪ್ಪ ಚನ್ನಾಪುರ, ಎಂ.ಡಿ.ಉಮೇಶ್, ಗುರುಪ್ರಸನ್ನ ಗೌಡ, ಗಜಾನನ ರಾವ್, ಆಶಿಕ್ ನಾಗಪ್ಪ, ವಿನಯ್ ಶೆರ್ವಿ, ವೈ.ಜಿ.ಗುರುಮೂರ್ತಿ, ವಿಜೇಂದ್ರಗೌಡ, ಜಾನಕಪ್ಪ, ವಿನಾಯಕ ತವನಂದಿ, ಗೌರಮ್ಮ ಭಂಡಾರಿ, ಡಿ.ಶಿವಯೋಗಿ, ಅಶೋಕ್ ಶೇಟ್, ಷಡಾಕ್ಷರಿ ಇದ್ದರು.