ಬ್ಯಾಂಕ್ ಹಣ ದರೋಡೆ ಸ್ಥಳಕ್ಕೆ ಪೌರಾಡಳಿತ ಸಚಿವ ರಹೀಮ್‌ ಖಾನ್‌ , ಸಚಿವ ಈಶ್ವರ ಖಂಡ್ರೆ ಭೇಟಿ

KannadaprabhaNewsNetwork | Updated : Jan 18 2025, 11:53 AM IST

ಸಾರಾಂಶ

ಬಳಿ ಗುಂಡಿನ ದಾಳಿ ನಡೆಸಿದ ಘಟನಾ ಸ್ಥಳಕ್ಕೆ ಪೌರಾಡಳಿತ ಸಚಿವ ರಹೀಮ್‌ ಖಾನ್‌ ಅವರೊಂದಿಗೆ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ಭೇಟಿ ನೀಡಿ, ಎಡಿಜಿಪಿ ಹರಿಶೇಖರನ್‌ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದುಕೊಂಡರು.

 ಬೀದರ್‌ : ನಗರದಲ್ಲಿ ಗುರುವಾರ ಬೆಳಿಗ್ಗೆ ಭಾರತೀಯ ಸ್ಟೇಟ್‌ ಬ್ಯಾಂಕ್ ಬಳಿ ಗುಂಡಿನ ದಾಳಿ ನಡೆಸಿ ಎಟಿಎಂಗಳಿಗೆ ಸಾಗಿಸಬೇಕಿದ್ದ ವಾಹನದಿಂದ 83 ಲಕ್ಷ ರು. ದೋಚಿ ಪರಾರಿಯಾದ ದುಷ್ಕರ್ಮಿಗಳನ್ನು ಯಾವುದೇ ಕಾರಣಕ್ಕೂ ಬಿಡೋಲ್ಲ. ಪೊಲೀಸರು ತನಿಖೆಯನ್ನು ತ್ವರಿತಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅವರು ಈ ಕುರಿತಂತೆ ಘಟನೆ ನಡೆದ ಸ್ಥಳಕ್ಕೆ ಪೌರಾಡಳಿತ ಸಚಿವ ರಹೀಮ್‌ ಖಾನ್‌ ಅವರೊಂದಿಗೆ ಭೇಟಿ ನೀಡಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹರಿಶೇಖರನ್‌ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದು, ತನಿಖೆಯನ್ನು ತ್ವರಿತಗೊಳಿಸುವಂತೆ ಸೂಚನೆ ನೀಡಿದರು. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ, ಮೃತ ಗಿರಿ ವೆಂಕಟೇಶ್ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ಅವರ ಕುಟುಂಬದ ನೋವಿ ನಲ್ಲಿ ನಾವೂ ಭಾಗಿಯಾಗಿದ್ದೇವೆ. ಮೃತರ ಕುಟುಂಬಕ್ಕೆ ವಿಶೇಷ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.ಗುರುವಾರ ರಾತ್ರಿ ಹೈದ್ರಾಬಾದ್‌ನ ಕೇರ್‌ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದು, ವೈದ್ಯರಿಗೆ ಉತ್ತಮ ಚಿಕಿತ್ಸೆ ನೀಡಲು ತಿಳಿಸಿದ್ದಾಗಿ ಹೇಳಿದರು. ಚಿಕಿತ್ಸೆ ವೆಚ್ಚವನ್ನು ಖಾಸಗಿ ಮತ್ತು ಸರ್ಕಾರದಿಂದ ಭರಿಸಲಾಗುವುದು ಎಂದೂ ಅವರು ತಿಳಿಸಿದರು.

ಬೀದರ್‌ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಮತ್ತು ಬೇಹುಗಾರಿಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಜಿಲ್ಲೆಯ ಜನತೆಗೆ ಸುರಕ್ಷತೆ ನೀಡಲು ಕ್ರಮ ವಹಿಸಲಾಗು ವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.ಹಾಡಹಗಲೇ ದರೋಡೆ ನಡೆದದ್ದು, ಬಹಳ‌ ಗಂಭೀರ ಪ್ರಕರಣವಾಗಿದೆ. ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಮುಖ್ಯ ಮಂತ್ರಿಗಳು, ಗೃಹ ಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಎಲ್ಲಿಯೇ ಅಡಗಿದ್ದರೂ ಅವರನ್ನು ಬಿಡೋದಿಲ್ಲ.ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಇದೆ ಎಂದರು.

ಖೂಬಾ ವಾಗ್ದಾಳಿ ವಿಚಾರ:ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಎಲ್ಲ ವಿಚಾರದಲ್ಲೂ ರಾಜಕೀಯ ಬೆರೆಸಿ ಮಾತನಾಡುವುದು ಸರಿಯಲ್ಲ. ಪೊಲೀಸರು ಆರೋಪಿಗಳನ್ನು ಬಂಧಿಸಲು ಶ್ರಮಿಸುತ್ತಿದ್ದಾರೆ. ಈಗಾಗಲೇ ದರೋಡೆಕೋರರ ಬಗ್ಗೆ ಸುಳಿವು ಸಿಕ್ಕಿದ್ದು ಶೀಘ್ರ ಬಂಧಿಸಲಾಗುವುದು ಎಂದೂ ತಿಳಿಸಿದರು.ಪ್ರತಿಪಕ್ಷದಲ್ಲಿ ಇರುವವರು ಆರೋಪಿಗಳನ್ನು ದಸ್ತಗಿರಿ ಮಾಡಲು, ವ್ಯವಸ್ಥೆ ಸುಧಾರಣೆ ಮಾಡಲು ಸಲಹೆ ಕೊಡಬೇಕು. ಅದು ಬಿಟ್ಟು ರಾಜಕೀಯ ಮಾಡುವುದು ಖಂಡನೀಯವಾಗಿದೆ. ದೆಹಲಿಯಲ್ಲಿ ನಿತ್ಯ ಸುಮಾರು ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ನಡೆಯುತ್ತಿದೆ ನೇರವಾಗಿ ಅಮಿತ್‌ ವ್ಯಾಪ್ತಿಯಲ್ಲಿ ದೆಹಲಿ ಪೊಲೀಸರು ಬರುತ್ತಾರೆ. ಹಾಗೆಂದ ಮಾತ್ರಕ್ಕೆ ಹೋಗಿ ಹೋಗಿ ಅಮಿತ್‌ ಶಾ ಅವರಿಗೆ ರಾಜೀನಾಮೆ ಕೊಡಲು ಕೇಳಲಿ ಎಂದು ಸಚಿವ ಖಂಡ್ರೆ ತಿರುಗೇಟು ಕೊಟ್ಟರು.

ದರೋಡೆಕೋರರಿಂದ ಹತ್ಯೆಯಾದ ಸಂತ್ರಸ್ತ ಕುಟುಂಬಕ್ಕೆ ಖಂಡ್ರೆ ಭೇಟಿ

ಬೀದರ್‌: ಲೂಟಿಕೋರರ ಗುಂಡೇಟಿಗೆ ಬಲಿಯಾದ ಬೆಮಳಖೇಡ ಗ್ರಾಮದ ಗಿರಿ ವೆಂಕಟೇಶ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸರ್ಕಾರದ ಬ್ಯಾಂಕ್‌ ಹಣವನ್ನು ಕಾಪಾಡುವ ನಿಟ್ಟಿನಲ್ಲಿ ಬಲಿಯಾದ ಗಿರಿ ವೆಂಕಟೇಶ ಕುಟುಂಬಕ್ಕೆ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ದೊರಕಬೇಕಾದ ಎಲ್ಲ ಸಹಾಯ ಸವಲತ್ತುಗಳನ್ನು ದೊರಕಿಸಿಕೊಡಲಾಗುವುದೆಂದು ಹೇಳಿದರು.ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿ ಕುಟುಂಬಕ್ಕೆ ಹೆಚ್ಚುವರಿಯಾಗಿ 10ಲಕ್ಷ ರು.ಗಳನ್ನು ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ಸಮಾಜ ಕಲ್ಯಾಣ ಇಲಾಖೆಯಿಂದ 8 ಲಕ್ಷ ರೂ. ಪರಿಹಾರ ಹಾಗೂ ಅವರ ತಾಯಿಗೆ 5 ಸಾವಿರ ಮಾಸಾಶನ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸಮಾಜ ಕಲ್ಯಾಣ ಇಲಾಖೆಯಡಿ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಲಾಗುವುದು ಈಗಾಗಲೇ ಹೈದ್ರಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಅವರ ಚಿಕಿತ್ಸೆ ವೆಚ್ಚ ಭರಿಸಲು ಸಹ ಕ್ರಮ ಕೈಗೊಳ್ಳಲಾಗುವುದೆಂದರು.

ಸಮಾಜ ಕಲ್ಯಾಣ ಇಲಾಖೆಯಿಂದ ದೊರಬೇಕಾದ ಪರಿಹಾರ ಸಹಾಯಗಳನ್ನು ತಕ್ಷಣವೇ ಒದಗಿಸುವಂತೆ ಸ್ಥಳದಲ್ಲೇ ಉಪಸ್ಥಿತರಿದ್ದ ಉಪ ನಿರ್ದೇಶಕರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ ಹಾಗೂ ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ನೆರೆರಾಜ್ಯ ಪೊಲೀಸ್‌ ಸಹಾಯ ಪಡೆದು ಕದೀಮರ ಶೀಘ್ರ ಪತ್ತೆ

ಬೀದರ್‌: ಮಹಾರಾಷ್ಟ್ರ, ತೆಲಂಗಾಣ ಪೊಲೀಸರ ಸಹಕಾರದಿಂದ ಶೀಘ್ರದಲ್ಲಿ ದುಷ್ಕರ್ಮಿಗಳನ್ನು ಬಂಧಿಸಲಾಗುವದು ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಅಪರಾಧ ವಿಭಾಗ) ಪಿ.ಹರಿಸೇಖರನ್‌ ತಿಳಿಸಿದರು.

ಅವರು ಅಪರಾಧ ನಡೆದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಗರದಲ್ಲಿ ಗುಂಡಿನ ದಾಳಿ ನಡೆಸಿ ಓರ್ವ ನನ್ನು ಕೊಲೆ ಮಾಡಿ ಲಕ್ಷಾಂತರ ರುಪಾಯಿ ದೋಚಿಪರಾರಿಯಾಗಿದ್ದ ಇಬ್ಬರು ಆರೋಪಿಗಳ ಗುರುತು ಪತ್ತೆಯಾಗಿದೆ. ಆರೋಪಿಗಳು ವೃತ್ತಿಪರ, ಅಪರಾಧಿಕ ಹಿನ್ನೆಲೆ ಯುಳ್ಳವರು ಅವರಾಗಿದ್ದು, ಸದ್ಯ ನಮ್ಮ ಪೊಲೀಸರು ಅವರ ಸನಿಹದಲ್ಲಿದ್ದಾರೆ ಎಂದರು.ಪ್ರಕರಣವನ್ನು ಭೇದಿಸಲು ಕಲಬುರಗಿ ಮತ್ತು ಹೈದ್ರಾಬಾದ್‌ ಪೊಲೀಸರ ಸಹಾಯದಿಂದ ಒಟ್ಟು 8 ವಿಶೇಷ ತಂಡಗಳನ್ನು ರಚಿಸಲಾಗಿದೆ, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಕಲಬುರಗಿ ವಲಯದ ಐಜಿಪಿ ಅಜಯ ಹಿಲೋರಿ ಮತ್ತು ಬೀದರ್‌ ಎಸ್‌ಪಿ ಪ್ರದೀಪ್ ಗುಂಟಿ ಉಪಸ್ಥಿತರಿದ್ದರು.

ಖಂಡ್ರೆ ರಾಜೀನಾಮೆಗೆ ಖೂಬಾ ಆಗ್ರಹ

ಬೀದರ್‌: ಜಿಲ್ಲೆಯಲ್ಲಿ ಕಳ್ಳತನ, ಕಾಳಸಂತೆಯಲ್ಲಿ ಪಡಿತರ ಅಕ್ಕಿ ಸಾಗಾಟ, ಇಸ್ಪೇಟ್‌ ಅಡ್ಡೆ, ವೇಶ್ಯಾವಾಟಿಕೆ ಆರಂಭವಾಗಿದೆ ಇದೀಗ ಹಾಡುಹಗಲೇ ಜನನಿಬಿಡ ಪ್ರದೇಶ ದಲ್ಲಿಯೇ ಶೂಟೌಟ್‌ ನಡೆದು ಹಣ ದೋಚಿಕೊಂಡು ಹೋಗಿರುವ ಘಟನೆಗಳು ಕಾನೂನು ಸುವ್ಯವಸ್ಥೆ ಹದೆಗೆಟ್ಟು ಹೋಗಿರುವುದನ್ನು ಸ್ಪಷ್ಟಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆಗ್ರಹಿಸಿದರು.ಅವರು ಈ ಕುರಿತಂತೆ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ದುಷ್ಕೃತ್ಯಗಳನ್ನು ನಡೆಸಲು ಪರವಾನಿಗೆ ನೀಡಿದಂತಿದೆ. ಆರೋಪಿ ಗಳನ್ನು ರಕ್ಷಿಸಲಾಗುತ್ತಿದೆ. ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಗಿರಿ ವೆಂಕಟೇಶ್‌ಗೆ ದುಷ್ಕರ್ಮಿಗಳು ಶೂಟೌಟ್‌ ಮಾಡಿದ್ದು ನಿಜಕ್ಕೂ ಖಂಡನೀಯ ಇದರ ನೈತಿಕ ಹೊಣೆಯನ್ನು ಸಚಿವರು ಹೊರಬೇಕು ಎಂದರು.

ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಮಾತನಾಡಿ, ಹಾಡುಹಗಲೇ ನಗರದಲ್ಲಿ ಎಟಿಎಂ ಹಣ ದರೋಡೆ ಮಾಡಿ, ಒಬ್ಬ ವ್ಯಕ್ತಿಯನ್ನು ಕೊಂದು ಪರಾರಿಯಾಗಿದ್ದು ನಿಜಕ್ಕೂ ಜಿಲ್ಲೆ ಬೆಚ್ಚಿ ಬೀಳುವ ಘಟನೆಯಾಗಿದೆ. ಗೃಹಸಚಿವರು ರಾಜ್ಯದಲ್ಲಿ ಇದ್ದಾರೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ ಎಂದು ಹರಿಹಾಯ್ದರು.

ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಮೃತರ ಕುಟುಂಬಕ್ಕೆ ಸರ್ಕಾರ 1ಕೋಟಿ ರು. ಪರಿಹಾರ ಕೊಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಿ ಸರ್ಕಾರದಿಂದ ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿಭಾಗೀಯ ಸಹಪ್ರಭಾರಿ ಈಶ್ವರಸಿಂಗ್‌ ಠಾಕೂರ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಗುರುನಾಥ ಜ್ಯಾಂತಿಕರ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article