ಉಸ್ತುವಾರಿ ಸಚಿವ ಬೋಸರಾಜು ಕುಶಾಲನಗರಕ್ಕೆ ಭೇಟಿ

KannadaprabhaNewsNetwork |  
Published : Jun 27, 2025, 12:49 AM IST
ಸಚಿವರು ಭೇಟಿ ನೀಡಿದ ಸಂದರ್ಭ | Kannada Prabha

ಸಾರಾಂಶ

ಉಸ್ತುವಾರಿ ಸಚಿವ ಎನ್‌ ಎಸ್‌ ಬೋಸರಾಜು ಕುಶಾಲನಗರಕ್ಕೆ ಭೇಟಿ ನೀಡಿ ಮಳೆ ಹಾನಿ ಒಳಗಾದ ಪ್ರದೇಶಗಳ ವೀಕ್ಷಣೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎನ್ ಬೋಸರಾಜು ಕುಶಾಲನಗರಕ್ಕೆ ಭೇಟಿ ನೀಡಿ ಮಳೆ ಹಾನಿಗೆ ಒಳಗಾದ ಪ್ರದೇಶಗಳ ವೀಕ್ಷಣೆ ನಡೆಸಿದರು. ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಿಗೆ ತೆರಳಿ ಹಾನಿ ಬಗ್ಗೆ ವೀಕ್ಷಣೆ ನಡೆಸಿದರು. ಕುಶಾಲನಗರ ಪುರಸಭೆ ವ್ಯಾಪ್ತಿಯ ಟೌನ್ ಕಾಲೋನಿಯಲ್ಲಿ ಮಳೆ ಹಾನಿಗೆ ಒಳಪಟ್ಟ ಜಯಪ್ರಕಾಶ್ ಅವರ ಮನೆಗೆ ತೆರಳಿ ವೀಕ್ಷಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ತೂಗು ಸೇತುವೆ ವೀಕ್ಷಣೆ

ಸಮೀಪದ ಕಣಿವೆಗೆ ತೆರಳಿ ತೂಗು ಸೇತುವೆ ವೀಕ್ಷಣೆ ಮಾಡಿ ಕೊಡಗು ಮೈಸೂರು ಗಡಿ ಭಾಗದ ಜನರಿಗೆ ಓಡಾಟ ಮಾಡಲು ಶಾಶ್ವತ ಸೇತುವೆ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಶಾಸಕರೊಂದಿಗೆ ಚರ್ಚಿಸಿದರು.ನಂತರ ಕುಶಾಲನಗರ ಸಮೀಪದ ರಂಗಸಮುದ್ರ ಬಳಿ ಮಳೆ ಹಾನಿಗೆ ಒಳಗಾದ ಸೇತುವೆಯ ಸ್ಥಳವನ್ನು ವೀಕ್ಷಿಸಿದ ಸಚಿವರು, ತಕ್ಷಣ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾರಂಗಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ:

ಹಾರಂಗಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಎಸ್ಎನ್ ಬೋಸರಾಜು, ಅಣೆಕಟ್ಟಿನ ನೀರಿನ ಸಂಗ್ರಹ ಮಟ್ಟ ಒಳಹರಿವು ಮತ್ತು ನದಿಗೆ ಬಿಡುಗಡೆ ಮಾಡಿದ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಕಲೆ ಹಾಕಿದರು. ಹೆಚ್ಚುವರಿ ನೀರನ್ನು ಹಂತಹಂತವಾಗಿ ನದಿಗೆ ಹರಿಸಿ ಯಾವುದೇ ರೀತಿಯ ಪ್ರವಾಹ, ಅನಾಹುತಗಳು ಉಂಟಾಗದಂತೆ ಎಚ್ಚರ ವಹಿಸಲು ಅಣೆಕಟ್ಟು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟರಾಜು, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಅಣೆಕಟ್ಟು ಅಧಿಕಾರಿ ಪುಟ್ಟಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳು, ಸ್ಥಳೀಯ ಆಡಳಿತದ ಅಧಿಕಾರಿಗಳು, ಜನಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಪ್ರಮುಖರು ಇದ್ದರು. ಮಳೆ ಮೇ ತಿಂಗಳಲ್ಲಿ ಆರಂಭ:

ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವರಾದ ಎಸ್ಎನ್ ಬೋಸರಾಜು ಈ ಬಾರಿ ಮಳೆ ಮೇ ತಿಂಗಳಲ್ಲಿ ಆರಂಭಗೊಂಡಿದ್ದು ಕಾವೇರಿ ನದಿ ತುಂಬಿ ಹರಿಯುತ್ತಿದೆ.

ಈ ಸಂದರ್ಭ ಕೆಲವೆಡೆ ಮಳೆ ಹಾನಿಯಾಗಿದ್ದು ಮನೆಗಳಿಗೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಾರ್ವಜನಿಕ ಸ್ವತ್ತುಗಳ, ಸೌಲಭ್ಯಗಳಿಗೆ ಕೂಡ ಹಾನಿ ಉಂಟಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಈಗಾಗಲೇ ವರದಿ ತರಿಸಲಾಗಿದೆ. ತಾತ್ಕಾಲಿಕ ಪರಿಹಾರ ಕೂಡ ಕಲ್ಪಿಸಲಾಗಿದ್ದು ಉಳಿದಂತೆ ಹಂತ ಹಂತವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.ಶಾಶ್ವತ ಪರಿಹಾರಗಳಿಗೆ ಯೋಜನೆ ರೂಪಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದ ಸಚಿವರು ರೈತರ ಕೃಷಿಗೆ ಹೆಚ್ಚಿನ ಹಾನಿ ಉಂಟಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಕುಶಾಲನಗರ ಗಡಿಭಾಗದ ಕೊಡಗು ಮೈಸೂರು ಜಿಲ್ಲೆಯ ಸಂಪರ್ಕ ಕೊಂಡಿಯಾಗಿರುವ ಸುಮಾರು 180 ವರ್ಷ ಪುರಾತನ ಸೇತುವೆ ವೀಕ್ಷಿಸಿದ ಉಸ್ತುವಾರಿ ಸಚಿವರು ಈ ಬಗ್ಗೆ ಶಾಸಕ ಡಾ ಮಂತರ್ ಗೌಡ ಅವರೊಂದಿಗೆ ಚರ್ಚಿಸಿ ಪುರಾತನ ಸೇತುವೆಗೆ ಕಾಯಕಲ್ಪ ನೀಡಲು ಕ್ರಿಯಾ ಯೋಜನೆ ಯನ್ನು ರೂಪಿಸಲು ಸಲಹೆ ನೀಡಿದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು