ಹಾವೇರಿ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಜತೆಗೆ ಪ್ರತಿ ಕ್ವಿಂಟಲ್‌ಗೆ ₹3000 ದರ ನಿಗದಿ ಮಾಡುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಮುಖಂಡರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ನಾಲ್ಕನೇ ದಿನ ಪೂರೈಸಿತು. ಸಚಿವ ಶಿವಾನಂದ ಪಾಟೀಲ, ಶಾಸಕ ರುದ್ರಪ್ಪ ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯಲ್ಲಿ ಶೇ. 70ರಷ್ಟು ಮೆಕ್ಕೆಜೋಳ ಬೆಳೆಯನ್ನು ಬೆಳೆಯಲಾಗಿದೆ. ಅತಿವೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆನಾಶವಾಗಿದೆ. ಆದರೂ ಪರಿಹಾರವಿಲ್ಲ. ಬೆಳೆದ ಮೆಕ್ಕೆಜೋಳ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸರ್ಕಾರ ಖರೀದಿ ಕೇಂದ್ರ ಪ್ರಾರಂಭ ಮಾಡುತ್ತಿಲ್ಲ. ಕೇಂದ್ರ ₹2400 ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ಕೂಡ ₹600 ಪ್ರೋತ್ಸಾಹಧನದೊಂದಿಗೆ ಕ್ವಿಂಟಲ್‌ಗೆ ₹3000 ನೀಡಬೇಕು. ಇಲ್ಲದಿದ್ದರೆ ಸಾಲಸೋಲ ಮಾಡಿಕೊಂಡು ಬೆಳೆ ಬೆಳೆದ ರೈತ ಸಂಕಷ್ಟಕ್ಕೆ ಸಿಲುಕುತ್ತಾನೆ ಎಂದು ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.
ರೈತರ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದ ಸಚಿವ ಶಿವಾನಂದ ಪಾಟೀಲ, ಪ್ರತಿ ವರ್ಷಕ್ಕಿಂತ ಈ ವರ್ಷವೂ ಮೆಕ್ಕೆಜೋಳ ಹೆಚ್ಚು ಉತ್ಪಾದನೆಯಾಗಿದೆ. ಬೆಳೆ ಹೆಚ್ಚಾದಾಗ ಬೆಲೆ ಕಡಿಮೆ ಆಗುತ್ತದೆ. ರೈತರು ಸಂಯಮದಿಂದ ಇದ್ದಾಗ ಸರಿಯಾದ ಬೆಲೆ ಕೊಡಲಿಕ್ಕೆ ಸಾಧ್ಯವಾಗುತ್ತದೆ. ಒಂದೆ ಬೆಳೆಯನ್ನು ನೆಚ್ಚಿಕೊಳ್ಳದೇ ರೇಷ್ಮೆ, ದ್ರಾಕ್ಷಿ, ದಾಳಿಂಬೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಮೆಕ್ಕೆಜೋಳವನ್ನು ಎಂಎಸ್‌ಪಿಯಲ್ಲಿ ಖರೀದಿ ಮಾಡಿ ಮಾರಾಟ ಮಾಡಬೇಕು. ಆದರೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ನಾನು ಕೂಡ ಅಕ್ಟೋಬರ್‌ನಲ್ಲಿ ಪತ್ರ ಬರೆದಿದ್ದೇನೆ. ನವೆಂಬರ್‌ನಲ್ಲಿ ವಾಪಾಸ್ ಪತ್ರ ಬಂದಿದೆ. ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಕೇಂದ್ರ ನಿಗದಿ ಮಾಡಿದೆ. ಜಿಲ್ಲೆಯಲ್ಲಿ ಮೂರು ಕಾರ್ಖಾನೆ ಡಿಜಿಟಲರಿ ಕಾರ್ಖಾನೆ ಇವೆ. ಅವರು ಕಡಿಮೆಯಲ್ಲಿ ಖರೀದಿ ಮಾಡಿದ್ದೇವೆ, ಸ್ಟಾಕ್ ಇದೆ ಅಂತ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದರು.
ಎಥೆನಾಲ್ ಕಾರ್ಖಾನೆಗಳು ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಎಥೆನಾಲ್ ಉತ್ಪಾದನೆ ಮಾಡಿ ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡುವುದರಿಂದ ನಮ್ಮ ವ್ಯಾಪ್ತಿಗೆ ಬರಲ್ಲ. ಕೋಳಿ ಫಾರ್ಮ್‌ನವರು 2-3 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡುತ್ತಾರೆ. ಅವರನ್ನು ನಿಯಂತ್ರಣ ಮಾಡಿದ್ದೇವೆ ಎಂದ ಅವರು, ರಾಜ್ಯ ಸರ್ಕಾರದ ಪ್ರೋತ್ಸಾಹಧನ ನೀಡುವ ಬಗ್ಗೆ ನಾನೊಬ್ಬನೇ ತೀರ್ಮಾನ ಮಾಡಲು ಬರುವುದಿಲ್ಲ. ಈ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ. ಸರ್ಕಾರಕ್ಕೂ ಸಮಯಾವಕಾಶ ಕೊಡಬೇಕು. ಬೆಲೆ ಸ್ಥಿರೀಕರಣ ಮಾಡಿ ರೈತರಿಗೆ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡುತ್ತದೆ. ಸಂಘರ್ಷ ಬೇಡ. ಸಾಮರಸ್ಯದಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದರು.ಈ ವೇಳೆ ಶಾಸಕ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ, ರೈತ ಮುಖಂಡರಾದ ಮಾಲತೇಶ ಪೂಜಾರ, ಎಚ್.ಎಚ್. ಮುಲ್ಲಾ, ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ಶಂಕರಪ್ಪ ಶಿರಗಂಬಿ, ದಿಳ್ಳೆಪ್ಪ ಮಣ್ಣೂರ, ಸುರೇಶ ಛಲವಾದಿ, ಮುತ್ತಪ್ಪ ಗುಡಗೇರಿ, ಶಿವಯೋಗಿ ಹೊಸಗೌಡ್ರ, ಅಡಿವೆಪ್ಪ ಆಲದಕಟ್ಟಿ, ರಾಜು ತರ್ಲಘಟ್ಟ, ಪ್ರಭುಗೌಡ ಪ್ಯಾಟಿ, ರುದ್ರಗೌಡ ಕಾಡನಗೌಡ್ರ, ಈರಣ್ಣ ಚಕ್ರಸಾಲಿ ಇದ್ದರು. ಸಂಸದರು ನಿಯೋಗ ಕೊಂಡೊಯ್ಯಲಿ: ರೈತರ ಬಗ್ಗೆ ಯಾವುದೇ ವಿಷಯವನ್ನು ಬೀದಿಯಲ್ಲಿ ಚರ್ಚೆ ಮಾಡಲಿಕ್ಕೆ ಆಗುವುದಿಲ್ಲ. ಸಮಯ ಸಿಕ್ಕರೆ ನಾವು ಕೂಡ ಕೇಂದ್ರ ಸರ್ಕಾರದ ಜತೆಗೆ ಚರ್ಚೆ ಮಾಡಬೇಕು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ರೈತ ಸಂಘದ ಜಿಲ್ಲಾಧ್ಯಕ್ಷರು, ರೈತ ಮುಖಂಡರ ನೇತೃತ್ವದಲ್ಲಿ ನಿಯೋಗ ರಚನೆ ಮಾಡಿಕೊಂಡು ಕರೆದುಕೊಂಡು ಹೋದರೆ ಚರ್ಚೆ ಮಾಡಲಿಕ್ಕೆ ಅನುಕೂಲ ಆಗುತ್ತದೆ. ಈ ಬಗ್ಗೆ ಸಂಸದರು ಹಾಗೂ ಕೇಂದ್ರ ಸಚಿವರು ಚಿಂತಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ಪರಿಹಾರ ಕೊಡಲಾಗಿದೆ: ಎಸ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಾದ ಬೆಳೆ ಹಾನಿಯನ್ನು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಮಾಡಿದೆ. 18,221 ಹೆಕ್ಟೇರ್ ಹಾನಿ ವರದಿ ನೀಡಲಾಗಿದೆ. ₹18 ಕೋಟಿ ಹಣ ಜಮೆ ಆಗುತ್ತಿದೆ. ಸರ್ಕಾರದಿಂದ ಹೆಚ್ಚುವರಿ ಪರಿಹಾರ ಜಮೆ ಆಗುತ್ತದೆ. ಎಷ್ಟೇ ಜಮೀನಿದ್ದರೂ ಎರಡು ಹೆಕ್ಟೇರ್ ಸೀಮಿತಗೊಳಿಸಿ ಪರಿಹಾರ ಕೊಡಲಾಗಿದೆ. ಪ್ರತಿ ಹೆಕ್ಟೇರ್‌ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ₹17,000 ಸಾವಿರ ಜಮೆ ಆಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.