ಮಳೆ ಆರಂಭಕ್ಕೂ ಮೊದಲು ತ್ವರಿತ ಕಾಮಗಾರಿಗೆ ಸಚಿವ ಸೂಚನೆ

KannadaprabhaNewsNetwork |  
Published : May 06, 2026, 02:30 AM IST
sÀð ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬದವರಿಗೆ ಹಕ್ಕುಪತ್ರ ವಿತರಿಸಲಾಯಿತು.  | Kannada Prabha

ಸಾರಾಂಶ

ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ತಾಕೀತು ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ತಾಕೀತು ಮಾಡಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಾದ್ಯಂತ ಲೋಕೋಪಯೋಗಿ, ಪಂಚಾಯತ್ ರಾಜ್ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವುದು ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು. ಈ ಕುರಿತು ಮಾತನಾಡಿದ ಶಾಸಕ ಡಾ.ಮಂತರ್‌ಗೌಡ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಜೊತೆಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು. ರಾಜ್ಯದಲ್ಲಿ ರಸ್ತೆ ನಿರ್ವಹಣೆಗಾಗಿ ಸರ್ಕಾರ ನೂರಾರು ಕೋಟಿ ರು.. ನೀಡಿದೆ. ಆದರೆ ಎಂಜಿನಿಯರ್‌ಗಳು ಸರಿಯಾದ ಸಮಯಕ್ಕೆ ಕೆಲಸ ಮಾಡದೆ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವುದು ಸರಿಯಲ್ಲ. ಸರ್ಕಾರ ಅಭಿವೃದ್ಧಿಗಾಗಿ ಹಣ ನೀಡಿದರೂ ಸಹ ಬಳಸದಿರುವುದು ಬೇಸರ ತರುತ್ತದೆ ಎಂದು ಹೇಳಿದರು. ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್.ಅರುಣ್ ಮಾಚಯ್ಯ ಅವರು ಕರಿಕೆ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳ ಕಾಮಗಾರಿ ಬಾಕಿ ಇದ್ದು, ಕಾಮಗಾರಿ ತುರ್ತಾಗಿ ಕೈಗೊಳ್ಳಬೇಕು ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಬಿಟ್ಟಂಗಾಲ, ತಿತಿಮತಿ, ಬಾಳುಗೋಡು ಸೇರಿದಂತೆ ಹಲವು ರಸ್ತೆ ಸರಿಪಡಿಸಬೇಕು ಎಂದು ಹೇಳಿದರು. ಸಮಿತಿ ಸದಸ್ಯರಾದ ಅಬ್ದುಲ್ ರೆಹಮಾನ್ ಅವರು ನಾಪೋಕ್ಲು ಕ್ರೀಡಾ ಮೈದಾನದಲ್ಲಿ ಮಳೆಗಾಲದ ಅವಧಿಯಲ್ಲಿ ಮಕ್ಕಳು ಓಡಾಡಲು ತೊಂದರೆಯಾಗಲಿದೆ. ಆದ್ದರಿಂದ ಮಕ್ಕಳ ಓಡಾಟಕ್ಕೆ ಅನುಕೂಲ ಮಾಡಬೇಕು ಎಂದರು. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕಟ್ಟಡಕ್ಕೆ ಸಂಬಂಧಿಸಿದಂತೆ ಶಾಸಕರು ಮಾಹಿತಿ ಪಡೆದರು. ಧರ್ಮಜ ಉತ್ತಪ್ಪ ಅವರು ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಕೊಠಡಿ ಶುಚಿತ್ವವಾಗಿಲ್ಲ. ಸರಿಯಾದ ನಿರ್ವಹಣೆ ಆಗಬೇಕು ಎಂದು ಸಲಹೆ ಮಾಡಿದರು. ಸೆಸ್ಕ್ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಎರಡು ವಿಧಾನಸಭಾ ಕ್ಷೇತ್ರಕ್ಕೆ ತಲಾ 110 ಕೋಟಿ ರು..ವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಆ ನಿಟ್ಟಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಗಮನಹರಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೆಸ್ಕ್ ಇಇ ರಾಮಚಂದ್ರ ಅವರು 70 ಮಂದಿ ಗ್ಯಾಂಗ್‌ಮೆನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯುಂಟಾಗದಂತೆ ಗಮನಹರಿಸಲಾಗಿದೆ ಎಂದರು. ಶಾಸಕ ಡಾ.ಮಂತರ್‌ಗೌಡ ಮಾತನಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ನಿರ್ವಹಿಸಬೇಕು. ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.ಜಲಜೀವನ್ ಮಿಷನ್ ಯೋಜನೆ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಶೇ.50 ರಷ್ಟು ಕಾಮಗಾರಿ ತೃಪ್ತಿದಾಯಕವಾಗಿಲ್ಲ. ನೀರಿನ ಸಂಪನ್ಮೂಲ ಪಡೆಯುವ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದರು. ಶಾಸಕ ಡಾ.ಮಂತರ್‌ಗೌಡ ಅವರು 450 ಕೋಟಿ ರು. ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದು ಎಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ತಲುಪಿದೆ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಸಲಹೆ ಮಾಡಿದರು. ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಮಾಡಲಾಗಿದ್ದು, ಇದರಿಂದ ಬಡವರಿಗೆ ತೊಂದರೆಯಾಗಲಿದೆ ಎಂದು ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಗಮನ ಸೆಳೆದರು.

ಬಿಪಿಎಲ್ ಕಾರ್ಡ್ ಇದ್ದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸಹಕಾರಿಯಾಗಲಿದೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಅದನ್ನು ಬಿಟ್ಟು ಎಪಿಎಲ್ ಮಾಡಿರುವುದು ಸರಿಯಲ್ಲ ಎಂದು ಅವರು ಸಿಟ್ಟಾದರು. ಆಹಾರ ಇಲಾಖೆ ಉಪ ನಿರ್ದೇಶಕರಾದ ಎಂ.ಭೀಮರಾಯ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 8,670 ಎಎವೈ, 97,046 ಬಿಪಿಎಲ್ ಚೀಟಿ ಹಾಗೂ 42,260 ಎಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ 8,459 ಅರ್ಜಿಗಳು ಸಲ್ಲಿಕೆಯಾಗಿದ್ದು, 7,350 ಅರ್ಜಿಗಳನ್ನು ವಿಲೇವಾರಿಗೊಳಿಸಲಾಗಿದೆ. 782 ಅರ್ಜಿಗಳು ತಿರಸ್ಕೃತಗೊಂಡಿದ್ದು, 327 ಅರ್ಜಿಗಳು ಬಾಕಿ ಇದೆ ಎಂದು ವಿವರಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಹಾಯಕ ಕೃಷಿ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು. ಈ ಕುರಿತು ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಇದ್ದು, ರಸಗೊಬ್ಬರ ಪೂರೈಸಲಾಗುತ್ತಿದೆ ಎಂದು ಹೇಳಿದರು. ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ಗಮನಹರಿಸಬೇಕು ಎಂದು ಸಚಿವರು ಹೇಳಿದರು. ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಬಾರದು. ಮೂಲ ಸೌಲಭ್ಯಕ್ಕೆ ಒತ್ತು ನೀಡುಂತೆ ಸಚಿವರು ಸೂಚಿಸಿದರು. ಹೋಂ ಸ್ಟೇ ಸಂಬಂಧಿಸಿದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಒಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಮಿತಿ ಸದಸ್ಯರಾದ ಸುನಿತಾ ಮಂಜುನಾಥ್, ಅವರು ಹಲವು ವಿಚಾರಗಳ ಕುರಿತು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೈರಿಂಗ್ ರೇಂಜ್ ಎನ್‌ಸಿಸಿಗೆ ಅತ್ಯುಪಯುಕ್ತ: ಪ್ರೊ.ಅಶೋಕ್ ಸಂಗಪ್ಪ
ಕನ್ನಡದ ಸೊಗಸು, ಸೊಗಡು ಶ್ರೀಮಂತವಾದದ್ದು: ರತ್ನಾ ಬದಿ