ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಮೂಲಕ 5.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾರ್ಟ್ ರೇಂಜ್ ರೈಫಲ್ ಫೈರಿಂಗ್ ರೇಂಜ್ ಅನ್ನು 19ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ರೆಜಿತ್ ಮುಕುಂದನ್ ಮತ್ತು ಕೊಡಗು ವಿ.ವಿ ಉಪ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಅವರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಮೂಲಕ 5.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾರ್ಟ್ ರೇಂಜ್ ರೈಫಲ್ ಫೈರಿಂಗ್ ರೇಂಜ್ ಅನ್ನು 19ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ರೆಜಿತ್ ಮುಕುಂದನ್ ಮತ್ತು ಕೊಡಗು ವಿ.ವಿ ಉಪ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಕರ್ನಲ್ ರೆಜಿತ್ ಮುಕುಂದನ್ ಮಡಿಕೇರಿ ಮುತ್ತ ಮುತ್ತಲಿನ ಪ್ರದೇಶದಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ಫೈರಿಂಗ್ ರೇಂಜ್ ಇಲ್ಲದಾಗಿತ್ತು. 19ನೇ ಕರ್ನಾಟಕ ಎನ್‌ಸಿಸಿ ಬೆಟಾಲಿಯನ್‌ಗೆ ಈ ರೈಫಲ್ ಫೈರಿಂಗ್ ರೇಂಜ್ ಅಮೂಲ್ಯವಾಗಿದ್ದು, ಕೆಡೆಟ್‌ಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಫೈರಿಂಗ್ ರೇಂಜ್‌ನ ಅಗತ್ಯತೆಯನ್ನು ಮನಗಂಡು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಕಾಲೇಜು ಮೈದಾನದ ಪಕ್ಕದಲ್ಲೇ ಎನ್‌ಸಿಸಿಗೆ ಕೊಡುಗೆಯಾಗಿ ನೀಡಿರುವುದಕ್ಕೆ ಕರ್ನಲ್ ರೆಜಿತ್ ಮುಕುಂದನ್ ಶ್ಲಾಘನೆ ವ್ಯಕ್ತಪಡಿಸಿದರು.ಸಭಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಕೊಡಗು ವಿ.ವಿ ಉಪ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಕಾಲೇಜಿಗೆ ಹತ್ತಾರು ಕೊಡುಗೆಗಳನ್ನು ನೀಡಿದೆ. ಇದೇ ರೀತಿಯ ಸಹಕಾರ ಮುಂದೆಯೂ ಇರಲಿ ಎಂದು ಆಶಿಸಿದರು. ಬಂದೂಕಿನಿಂದ ಹಾರಿದ ಗುಂಡು ಯಾವ ರೀತಿ ತನ್ನ ಗುರಿಯನ್ನು ತಲುಪುತ್ತದೆಯೋ ಅದೇ ರೀತಿಯಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳು ತಮ್ಮ ಬದುಕಿನ ಗುರಿಯನ್ನೂ ಹೊಂದಬೇಕು ಎಂದು ಅವರು ಸಲಹೆ ನೀಡಿದರು. ಎನ್‌ಸಿಸಿ ಕೆಡೆಟ್‌ಗಳಾಗಿ ಶಿಸ್ತು ಮತ್ತು ದೇಶ ಭಕ್ತಿಯನ್ನೂ ಮೈಗೂಡಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಎನ್‌ಸಿಸಿ ಸೇರ್ಪಡೆಯಾಗಬೇಕು. ದೇಶದ ರಕ್ಷಣೆಗೆ ಅಗತ್ಯವಾದಾಗ ದೇಶ ಸೇವೆಗೂ ಮುಂದಾಗಬೇಕು ಎಂದು ಪ್ರೊ.ಅಶೋಕ್ ಸಂಗಪ್ಪ ಕರೆ ನೀಡಿದರು.ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮುಕ್ಕಾಟಿರ ಎ.ಅಪ್ಪಯ್ಯ, ವಿದ್ಯಾರ್ಥಿ ಜೀವನದಲ್ಲಿ ತಾವು ಎನ್‌ಸಿಸಿ ಮೂಲಕ ಪಡೆದ ತರಬೇತಿ, ವಿವಿಧ ಕ್ಯಾಂಪ್‌ಗಳಲ್ಲಿ ಪಡೆದ ಅನುಭವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಎನ್‌ಸಿಸಿ ‘ಸಿ’ ಸರ್ಟಿಫಿಕೇಟ್ ಮೂಲಕ ತಾವು ಪೊಲೀಸ್ ಇಲಾಖೆಗೆ ಭರ್ತಿಯಾಗಿ ಕೊಡಗು ಜಿಲ್ಲೆ ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ಸಲ್ಲಿಸಿದ ಸೇವೆಗಳನ್ನು ವಿವರಿಸಿದರು. ವಿದ್ಯಾರ್ಥಿ ಜೀವನದಲ್ಲಿಯೇ ಭವಿಷ್ಯದ ಬಗ್ಗೆ ನಿಖರ ಗುರಿ ಹೊಂದಬೇಕೆಂದು ಅವರು ಸಲಹೆ ನೀಡಿದರು. ಈ ಹಿಂದೆ ಜಿಲ್ಲೆಯಲ್ಲಿದ್ದ ಫೈರಿಂಗ್ ರೇಂಜ್‌ಗಳು ಪ್ರಸ್ತುತ ಒತ್ತುವರಿಗೆ ತುತ್ತಾಗಿರುವ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು. ಇದೀಗ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿಯೇ ಫೈರಿಂಗ್ ರೇಂಜ್ ನಿರ್ಮಿಸಿರುವುದಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘವನ್ನು ಅಭಿನಂದಿಸಿದರು.ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜ್ಜಿರ ಅಪ್ಪಯ್ಯ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಭಾರತೀಯ ಸೇನೆ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶ್ರೀಲಂಕಾದಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ ಇದೇ ಕಾಲೇಜಿನ ಮಾಜಿ ವಿದ್ಯಾರ್ಥಿ, ಸೇನಾಧಿಕಾರಿ ಪುಟ್ಟಿಚಂಡ ಎಸ್.ಗಣಪತಿ ಅವರು ಮೊದಲ ವೀರ ಚಕ್ರ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಇಂತಹ ಹತ್ತಾರು ಅಮೂಲ್ಯ ಸೇನಾಧಿಕಾರಿಗಳ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ದೇಶಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಹಳೇ ವಿದ್ಯಾರ್ಥಿ ಸಂಘದ ಸಹಕಾರ, ಬೆಂಬಲ ಸದಾ ಇರಲಿದೆ ಎಂದು ಅಭಯ ನೀಡಿದರು.ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಫ್ರೋ. ಬಿ.ರಾಘವ, ಕಾಲೇಜಿನ ಮಾಜಿ ವಿದ್ಯಾರ್ಥಿ, ವಕೀಲರಾದ ಮುಂಡಂಡ ಸುದೈಯ್ ನಾಣಯ್ಯ ಮಾತನಾಡಿದರು. 19ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ರೆಜಿತ್ ಮುಕುಂದನ್, ಕೊಡಗು ವಿ.ವಿ ಉಪ ಕುಲಪತಿ ಫ್ರೋ.ಅಶೋಕ್ ಸಂಗಪ್ಪ ಆಲೂರು, ಪ್ರಾಂಶುಪಾಲರಾದ ಮೇಜರ್ ಫ್ರೋ. ಬಿ.ರಾಘವ, ನಿವೃತ್ತ ಎಸ್.ಪಿ. ಮುಕ್ಕಾಟಿರ ಎ.ಅಪ್ಪಯ್ಯ, ವಕೀಲರಾದ ಮುಂಡಂಡ ಸುದೈಯ್ ನಾಣಯ್ಯ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜ್ಜಿರ ಅಪ್ಪಯ್ಯ, ರೈಫಲ್ ರೇಂಜ್ ಗುತ್ತಿಗೆದಾರ ಪರಮೇಶ್, ಎನ್‌ಸಿಸಿ ಅಧಿಕಾರಿಗಳು ಮತ್ತು ಸೇನಾ ಸಿಬ್ಬಂದಿಗಳನ್ನು ಇದೇ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.ಹಳೇ ವಿದ್ಯಾರ್ಥಿ ಸಂಘದ ಪ್ರಮುಖರಾದ ಬೊಟ್ಟಂಗಡ ಗಣಪತಿ, ಶ್ಯಾಮ್, ಪತ್ರಕರ್ತ ಚಂದನ್ ನಂದರಬೆಟ್ಟು, ಸಾಹಿತಿ ರಶ್ಮಿ ಮೇದಪ್ಪ, ಉದ್ಯಮಿ ದಮಯಂತಿ, ಕಾಲೇಜಿನ ಉಪನ್ಯಾಸಕರಾದ ರವಿಶಂಕರ್, ಕೃಷ್ಣ, ಕಾಲೇಜು ಸಿಬ್ಬಂದಿ, ಎನ್‌ಸಿಸಿ ಕೆಡೆಟ್‌ಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.