ಲಕ್ಷ್ಮೇಶ್ವರ: ಕನ್ನಡ ಕೇವಲ ಒಂದು ಭಾಷೆಯಲ್ಲ. ಕನ್ನಡಿಗರ ಅಸ್ಮಿತೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡದ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗರಿಂದಲೂ ಆಗಬೇಕು ಎಂದು ಡಾ. ಪಿ.ಡಿ. ತೋಟದ ತಿಳಿಸಿದರು.
ಉಪನ್ಯಾಸಕ ರವಿ ನೀರಲಗಿ ಮಾತನಾಡಿ, ಕನ್ನಡ ಕನ್ನಡಿಗರ ಪಾಲಿಗೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಅಸ್ಮಿತೆಯ ತಳಹದಿಯಾಗಿದೆ. ಸುದೀರ್ಘ, ಶ್ರೀಮಂತ ಇತಿಹಾಸ ಹೊಂದಿರುವ ಕನ್ನಡವು ಕನ್ನಡಿಗರನ್ನು ಭಾವನಾತ್ಮಕವಾಗಿ ಒಂದುಗೂಡಿಸುವ ಮಹತ್ವದ ಶಕ್ತಿಯಾಗಿದೆ ಎಂದರು.
ಶಿಕ್ಷಕ ಸಾಹಿತಿ ಆರ್.ಎಸ್. ಪಾಟೀಲ ಮಾತನಾಡಿ, ನಮ್ಮ ಆಚಾರ- ವಿಚಾರ, ಹಬ್ಬ- ಹರಿದಿನ ಮತ್ತು ಮಾನವೀಯ ಸಂಬಂಧಗಳ ಮಹತ್ವವನ್ನು ಜಾನಪದ ಸಾಹಿತ್ಯ ಕಲಿಸುತ್ತದೆ. ಜನಪದ ಪರಂಪರೆ ಮತ್ತು ಸಂಸ್ಕೃತಿಯ ಮಾರ್ಗವಾಗಿದೆ ಎಂದರು.ಮುಖ್ಯೋಪಾಧ್ಯಾಯ ಅರವಿಂದ ದೇಶಪಾಂಡೆ ಮಾತನಾಡಿ, ವ್ಯವಹಾರಿಕವಾಗಿ ಬೇರೆ ಭಾಷೆ ಬಳಸಿದರೂ ಅಂತರಂಗದ ಭಾಷೆಯಾಗಿ ಕನ್ನಡ ಬೇಕು ಎಂದರು.
ದತ್ತಿದಾನಿಗಳು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಕಸಾಪ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಸಲಹಾ ಸಮಿತಿಯ ಈರಣ್ಣ ಗಾಣಿಗೇರ ನಿರೂಪಿಸಿದರು. ಗೌರವ ಕಾರ್ಯದರ್ಶಿ ವೀರಣ್ಣ ಅಕ್ಕೂರ ವಂದಿಸಿದರು. ಸಲಹಾ ಸಮಿತಿಯ ಎಸ್.ಬಿ. ಅಣ್ಣಿಗೇರಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಶಶಿಕಾಂತ ಕುಂಬಾರ, ಸಿ.ಎಫ್. ಪಾಟೀಲ, ಎಲ್.ಆರ್. ಮಲಸಮುದ್ರ, ಪ್ರವೀಣ ಕುಂಬಾರ ಇದ್ದರು.