ಹರಪನಹಳ್ಳಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಗತಿಪರ ಶಿಕ್ಷಕರ ವೇದಿಕೆಯ ಎಲ್ಲ ಶಿಕ್ಷಕರು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್ ಹೇಳಿದರು.ಶಿಕ್ಷಕರ ಸಂಘದ ಚುನಾವಣೆಯಲ್ಲಿ ಜಯಶೀಲರಾದ ಪ್ರಗತಿಪರ ಶಿಕ್ಷಕರ ವೇದಿಕೆಯ ಶಿಕ್ಷಕರಿಗೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ, ಚುನಾವಣೆ ಎನ್ನುವುದು ಸಂವಿಧಾನದಲ್ಲಿನ ಒಂದು ಭಾಗ. ಗೆದ್ದವರು ಪ್ರಗತಿಗೆ ಶ್ರಮಿಸಿದರೆ, ಸೋತವರು ಮುಂದೆ ಹೇಗೆ ಗೆಲ್ಲಬೇಕು ಎನ್ನುವ ಕುರಿತು ತಂತ್ರಗಾರಿಕೆ ನಡೆಸಬೇಕೇ ಹೊರತು ಅಪಪ್ರಚಾರಕ್ಕೆ ಇಳಿಯಬಾರದು ಎಂದರು.
ಸಮಾಜದಲ್ಲಿ ಶಿಕ್ಷಕರ ಮೇಲೆ ಗುರುತರ ಜವಾಬ್ದಾರಿಗಳಿರುತ್ತವೆ. ಈ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ಮಾಡಬೇಕು. ಚುನಾವಣೆಗಳಲ್ಲಿ ರಾಜಕಾರಣಿಗಳು ಗೆದ್ದ ಬಳಿಕ ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ಆದರೆ ಸಂಘ ಸಂಸ್ಥೆಗಳ ಮೂಲಕ ಗೆದ್ದ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿನ ಕೆಲಸ ಕಾರ್ಯಗಳಲ್ಲಿ ರಾಜಕೀಯ ಮಾಡದೇ ಆದರ್ಶವಾಗಿರಬೇಕು ಎಂದು ಕಿವಿಮಾತು ಹೇಳಿದರು.ಪ್ರಗತಿಪರ ವೇದಿಕೆಯ ಮುಖಂಡ ಬಸವರಾಜ್ ಸಂಗಪ್ಪನವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ ಸಂಘದ ಚುನಾವಣೆಯಲ್ಲಿ ಕಳೆದ 30 ವರ್ಷಗಳಿಂದ ನಮ್ಮ ಪ್ರಗತಿಪರ ವೇದಿಕೆಯ ತಂಡ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದೆ. ಪ್ರತಿ ಬಾರಿಯೂ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿಯೇ ಚುನಾವಣೆ ಮಾಡಿದ್ದೇವೆ. ಈ ಬಾರಿಯೂ ನಮ್ಮ ತಂಡ ನ್ಯಾಯಸಮ್ಮತವಾಗಿ ಗೆಲುವು ಸಾಧಿಸಿದೆ ಎಂದರು.
ಪುರಸಭೆ ಮಾಜಿ ಉಪಾಧ್ಯಕ್ಷ ಎಚ್.ವಸಂತಪ್ಪ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪ್ರಭು, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್.ರಾಮಪ್ಪ, ಬಿ.ರಾಜಶೇಖರ್, ಎಂ.ಚಂದ್ರಮೌಳಿ, ಪದ್ಮರಾಜ್ ಜೈನ್, ಜಿ.ಪದ್ಮಲತಾ, ದಾದಾ ಕಲಂದರ್, ಸೊಪ್ಪಿನ ಹನುಮಂತಪ್ಪ, ಸಾರಥಿ ಹನುಮಂತಪ್ಪ, ಬಂಡಿ ಬಸವರಾಜ, ಗುರುಪ್ರಸಾದ್, ಹರೀಶ್, ಕೊಟ್ರೇಶಪ್ಪ, ಬಡಗಿ ಮೊಹಬುಬ್ ಸಾಹೇಬ್, ಮನ್ಸೂರ್ ಅಹಮ್ಮದ್, ಎಂ.ರಮೇಶ್, ಎಸ್.ಶಿವಯೋಗಿ, ಜಿ.ಬಂದಮ್ಮ, ಎಂ.ಗಿರಿಜಾ, ಹೇಮಾವತಿ, ಕೊಟ್ರಮ್ಮ, ಎಸ್,ಶಾಂತಮ್ಮ, ಎಚ್.ವಿಜಯಲಕ್ಷ್ಮಿ, ಎಲ್.ಮಜ್ಯಾನಾಯ್ಕ್ ಇದ್ದರು.