ಕನ್ನಡ ನುಡಿ ಮತ್ತು ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ಕನ್ನಡಿಗರ ಅಸ್ಮಿತೆ, ಸಂಸ್ಕೃತಿ ಮತ್ತು ಹೆಮ್ಮೆಯಾಗಿದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಕನ್ನಡ ಭಾಷೆಯು 2000 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಹೊಂದಿರುವ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿರುವುದು ನಮಗೆಲ್ಲಾ ಹೆಮ್ಮೆಯ, ಅಭಿಮಾನದ ವಿಷಯವಾಗಿದೆ ಎಂದು ಕೆ.ಎಲ್.ಎಸ್. ಪಿಯು ಮತ್ತು ಪದವಿ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ ಪ್ರಭು ಹೇಳಿದರು.
ಮಂಗಳವಾರ ಪಟ್ಟಣದ ಕೆ.ಎಲ್.ಎಸ್. ಪದವಿ ಕಾಲೇಜಿನಲ್ಲಿ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನೆಯ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ನುಡಿ ಮತ್ತು ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ಕನ್ನಡಿಗರ ಅಸ್ಮಿತೆ, ಸಂಸ್ಕೃತಿ ಮತ್ತು ಹೆಮ್ಮೆಯಾಗಿದೆ. ಹಳಗನ್ನಡದಿಂದ ನವ್ಯ ಸಾಹಿತ್ಯದವರೆಗೆ, ವಚನ, ತತ್ವಪದ, ದಾಸ ಸಾಹಿತ್ಯದ ಮೂಲಕ ಕನ್ನಡ ಭಾಷೆ ಕನ್ನಡಿಗರ ಜೀವನದ ಅವಿಭಾಜ್ಯ ಅಂಗವಾಗಿ ನಿಂತಿದೆ ಎಂದರು.
ಜಾನಪದ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ ಮಾತನಾಡಿ, ಕನ್ನಡ ನಮ್ಮ ಜೀವ, ಭಾವ ಸಂವೇದನೆಯ ಭಾಷೆಯಾಗಿದೆ ಎಂದರು.
ವಿಶೇಷ ಉಪನ್ಯಾಸಕ ನೀಡಿದ ವಾಗ್ಮಿ ವಿಠ್ಠಲ ಕೊರ್ವೆಕರ, ಕನ್ನಡದ ಸ್ವಾಯತ್ತ ಸಂಸ್ಥೆ ಕಸಾಪ ಇಂದು ಹೆಮ್ಮೆರವಾಗಿ ಬೆಳೆದು ನಿಂತಿದೆ. ಕನ್ನಡಕ್ಕೆ ಸಮಸ್ಯೆ ಎದುರಾದಾಗ ಸಂಘ ಸಂಸ್ಥೆಗಳನ್ನು ಮತ್ತು ಕನ್ನಡಿಗರನ್ನು ಕನ್ನಡ ಸಂರಕ್ಷಣೆಗೆ ಮುಂದಾಗುವಂತೆ ಪ್ರೇರೇಪಿಸಿ ಕನ್ನಡದ ಅಭಿವೃದ್ಧಿಗೆ ಸಹಕರಿಸುತ್ತಿದೆ. ಗಡಿಭಾಗದಲ್ಲಿ ಕನ್ನಡವನ್ನು ಕಟ್ಟುವ ಬೆಳೆಸುವ ಕಾರ್ಯವನ್ನು ಅವಿರತವಾಗಿ ಮಾಡುತ್ತಾ ಕನ್ನಡದ ಭದ್ರಕೋಟೆಯನ್ನು ನಿರ್ಮಿಸಿದೆ ಎಂದರು. ಇಂದಿನ ಯುವಜನತೆಯು ಕನ್ನಡದ ರಕ್ಷಣೆಗೆ ಹಾಗೂ ಬೆಳವಣಿಗೆಗೆ ಕಂಕಣ ಬದ್ಧರಾಗಬೇಕು ಎಂದು ಕರೆ ಕೊಟ್ಟರು.
ತಾಲೂಕು ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಹಳಿಯಾಳ ಘಟಕದ ಕಸಾಪ ಕಾರ್ಯದರ್ಶಿ ಶಾಂತಾರಾಮ ಮಾ. ಚಿಬುಲಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕಾರ್ಯದರ್ಶಿ ಬಸವರಾಜ ಇಟಗಿ ಹಾಗೂ ಕಲ್ಪನಾ ಹುದ್ದಾರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಜಾನಪದ ಸಂಶೋಧನಾ ಕೇಂದ್ರ ತಂಡದವರಿಂದ ಕನ್ನಡ ಹಾಡುಗಳ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಹನುಮಂತಿ ಮೋರೆ, ಪೂಜಾ ಪೇಡ್ನೆಕರ ಹಾಗೂ ಸಿಬ್ಬಂದಿಗಳಾದ ಅಲ್ತಾಫ ನರಗುಂದ, ನಾಗೇಂದ್ರ ಖಂಡೇಕರ, ಹರ್ಷದ ಮಿಂಡೋಳ್ಕರ್, ಆದರ್ಶ ಕಲ್ಲೂರ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.