ಕನ್ನಡಪ್ರಭ ವಾರ್ತೆ ಹಾಸನ
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ಭೇಟಿ ನೀಡಿರುವುದನ್ನು ಸಿಎಂ ಬದಲಾವಣೆಯೊಂದಿಗೆ ಸಂಪರ್ಕಿಸುವುದು ಸರಿಯಲ್ಲ. ನೀವೆಲ್ಲಾ ಕನ್ಫ್ಯೂಸ್ ಆಗಿದ್ದೀರಾ. ಈಗ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಸಮೀಪದಲ್ಲಿದೆ. ಆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದನ್ನು ಬಿಟ್ಟು ಬೇರೆ ಯಾವುದೇ ರೀತಿಯ ಚರ್ಚೆ ಇವತ್ತಿನ ಪರಿಸ್ಥಿತಿಯಲ್ಲಿ ಅನಾವಶ್ಯಕ ಎಂದರು. ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಕಾಂಗ್ರೆಸ್ ಒಳಗೆ ಚರ್ಚೆಗಳು ನಡೆಯುತ್ತಿವೆ ಎಂಬ ರಾಜಕೀಯ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಬಹಳ ಗಟ್ಟಿಯಾಗಿದೆ. ನಾವು ಉತ್ತಮ ಆಡಳಿತ ನೀಡುತ್ತಿದ್ದೇವೆ. ಅಭಿವೃದ್ಧಿ ಹಾಗೂ ಪ್ರಗತಿ ಕೆಲಸಗಳ ಬಗ್ಗೆ ಮಾತನಾಡಿ. ಸರ್ಕಾರ ಮಾಡಿರುವ ಸಾಧನೆಗಳ ಬಗ್ಗೆ ಪ್ರಶ್ನೆ ಕೇಳಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಪ್ರತ್ಯೇಕವಾಗಿ ಭೇಟಿಯಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, ನಾವು ಎಲ್ಲರೂ ಸ್ನೇಹಿತರು. ಕೆಲವೊಮ್ಮೆ ಟೀ ಕುಡಿಯಲು, ಊಟಕ್ಕೆ ಅಥವಾ ವೈಯಕ್ತಿಕವಾಗಿ ಮಾತನಾಡಲು ಪ್ರತ್ಯೇಕವಾಗಿ ಭೇಟಿ ಆಗಬಹುದು. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು. ಪ್ರತ್ಯೇಕವಾಗಿ ಮಾತನಾಡುವುದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪ್ರತಿಯೊಂದು ಭೇಟಿಯನ್ನೂ ರಾಜಕೀಯ ಸಂಕಷ್ಟ ಅಥವಾ ಅಧಿಕಾರ ಬದಲಾವಣೆಯೊಂದಿಗೆ ಜೋಡಿಸುವುದು ಸರಿಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಕೆಲ ಶಾಸಕರೇ ಬಹಿರಂಗವಾಗಿ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಅದನ್ನು ಅವರನ್ನೇ ಕೇಳಿ ಎಂದು ಸಚಿವರು ಪ್ರತಿಕ್ರಿಯಿಸಿದರು. ನಾನು ಸರ್ಕಾರದ ಒಂದು ಭಾಗವಾಗಿ ಮಾತನಾಡುತ್ತಿದ್ದೇನೆ. ಸರ್ಕಾರ ಸುಭದ್ರವಾಗಿದೆ. ಯಾವುದೇ ರೀತಿಯ ಅಸ್ಥಿರತೆ ಇಲ್ಲ. ಜನಪರ ಆಡಳಿತವನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ ಎಂದು ಹೇಳಿದರು. ಇದೇ ವೇಳೆ ಸಚಿವ ಕೆ.ಎನ್. ರಾಜಣ್ಣ ಅವರು ‘ಸಿಎಂ ಬದಲಾವಣೆ ಆದರೆ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖಂಡ್ರೆ, ಆ ವಿಚಾರವನ್ನು ರಾಜಣ್ಣನವರಿಗೇ ಕೇಳಿ. ನಾನು ಈಗಾಗಲೇ ಹೇಳಿದ್ದೇನೆ, ಈ ಚರ್ಚೆ ಅನಾವಶ್ಯಕ ಮತ್ತು ಅಪ್ರಸ್ತುತ ಎಂದು ಪುನರುಚ್ಚರಿಸಿದರು. ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಮಾತನಾಡಿದ ಖಂಡ್ರೆ, “ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ. ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಜನರಿಗೆ ಸರ್ಕಾರದ ಮೇಲಿನ ವಿಶ್ವಾಸ ಇದೆ” ಎಂದು ಹೇಳಿದರು. ರಾಜಕೀಯ ಊಹಾಪೋಹಗಳಿಗೆ ಮಹತ್ವ ನೀಡುವ ಬದಲು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ರೈತರ ಪರ ಯೋಜನೆಗಳು, ಅರಣ್ಯ ಸಂರಕ್ಷಣೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನಪರ ಆಡಳಿತದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್‌ನ ಕೆಲ ಶಾಸಕರ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಸಚಿವ ಈಶ್ವರ್ ಖಂಡ್ರೆ ನೀಡಿರುವ ಈ ಸ್ಪಷ್ಟನೆ ಕಾಂಗ್ರೆಸ್ ಒಳಗಿನ ರಾಜಕೀಯ ಚಟುವಟಿಕೆಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ.