ಸಿಎಂ ಕುರ್ಚಿ ಕಿತ್ತಾಟದಲ್ಲಿ ರಾಜ್ಯ ಸರ್ಕಾರ ಕೋಮಾದಲ್ಲಿದೆ

KannadaprabhaNewsNetwork |  
Published : May 27, 2026, 01:45 AM IST
26ಎಚ್ಎಸ್ಎನ್12 : ವಿಪಕ್ಷ ನಾಯಕ ಆರ್‌.ಅಶೋಕ್ ಅವರನ್ನು ಮಾಜಿ ಶಾಸಕ ಪ್ರೀತಂ ಗೌಡ ಹಾಗೂ ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್‌ ಮಂಜು ಹೂಗುಚ್ಛ ನೀಡಿ ಸ್ವಾಗತಿಸಿದರು. | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅಶೋಕ್, ನಾವು ಗ್ಯಾರಂಟಿ ವಿರೋಧಿಗಳಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮೀ ಯೋಜನೆ, ಸೈಕಲ್ ಯೋಜನೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ನಾವು ಅದನ್ನು ಗ್ಯಾರಂಟಿ ಎಂದು ಹೇಳಿಕೊಂಡಿರಲಿಲ್ಲ. ಸರ್ಕಾರದ ಆದಾಯಕ್ಕೆ ಅನುಗುಣವಾಗಿ ಯೋಜನೆ ರೂಪಿಸಿ ರೈತರು ಹಾಗೂ ಬಡವರಿಗೆ ಸಹಾಯಧನ ನೀಡಿದ್ದೆವು ಎಂದರು. ಆದರೆ ಕಾಂಗ್ರೆಸ್ ಚುನಾವಣೆ ಗೆಲ್ಲಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಈಗ ಒಂದೊಂದಾಗಿ ಕತ್ತರಿ ಹಾಕುತ್ತಿದೆ. ಸರ್ಕಾರದ ಬಳಿ ಹಣ ಇಲ್ಲದ ಕಾರಣ ದೊಡ್ಡ ಮಟ್ಟದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯ ಅಂಚಿಗೆ ತಳ್ಳಿದೆ. ಸರ್ಕಾರದ ಆಡಳಿತ ಸಂಪೂರ್ಣ ಕುಸಿದು ಬಿದ್ದಿದ್ದು, ಅಧಿಕಾರ ಹಂಚಿಕೆ ಕಿತ್ತಾಟದಲ್ಲಿ ಸರ್ಕಾರ ಕೋಮಾದಲ್ಲಿದೆ, ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಾಲದ ಪ್ರಮಾಣ ಕುರಿತು ಗಂಭೀರ ಆರೋಪ ಮಾಡಿದರು. ರಾಜ್ಯದ ಒಟ್ಟು ಸಾಲ ಈಗಾಗಲೇ ೭ ಲಕ್ಷ ಕೋಟಿ ರುಪಾಯಿ ದಾಟಿದೆ. ಇದೇ ವೇಗ ಮುಂದುವರಿದರೆ ಮುಂದಿನ ವರ್ಷ ಅದು ₹೮.೫ ಲಕ್ಷ ಕೋಟಿ ತಲುಪಲಿದೆ. ಸಿದ್ದರಾಮಯ್ಯ ಅವರು ಅಧಿಕಾರ ತೊರೆಯುವ ವೇಳೆಗೆ ರಾಜ್ಯದ ಸಾಲ ೧೦ ಲಕ್ಷ ಕೋಟಿ ರುಪಾಯಿ ದಾಟಲಿದೆ. ಇದುವರೆಗೆ ರಾಜ್ಯದ ಎಲ್ಲ ಮುಖ್ಯಮಂತ್ರಿಗಳು ಸೇರಿ ಮಾಡಿರುವ ಸಾಲಕ್ಕಿಂತ ಹೆಚ್ಚು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಒಟ್ಟು ಸಾಲದ ಶೇಕಡಾ ೫೩ರಷ್ಟು ಇವರ ಆಡಳಿತದಲ್ಲೇ ಆಗಿದೆ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.ನಾವು ಗ್ಯಾರಂಟಿ ವಿರೋಧಿಗಳಲ್ಲ:ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅಶೋಕ್, ನಾವು ಗ್ಯಾರಂಟಿ ವಿರೋಧಿಗಳಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮೀ ಯೋಜನೆ, ಸೈಕಲ್ ಯೋಜನೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ನಾವು ಅದನ್ನು ಗ್ಯಾರಂಟಿ ಎಂದು ಹೇಳಿಕೊಂಡಿರಲಿಲ್ಲ. ಸರ್ಕಾರದ ಆದಾಯಕ್ಕೆ ಅನುಗುಣವಾಗಿ ಯೋಜನೆ ರೂಪಿಸಿ ರೈತರು ಹಾಗೂ ಬಡವರಿಗೆ ಸಹಾಯಧನ ನೀಡಿದ್ದೆವು ಎಂದರು. ಆದರೆ ಕಾಂಗ್ರೆಸ್ ಚುನಾವಣೆ ಗೆಲ್ಲಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಈಗ ಒಂದೊಂದಾಗಿ ಕತ್ತರಿ ಹಾಕುತ್ತಿದೆ. ಸರ್ಕಾರದ ಬಳಿ ಹಣ ಇಲ್ಲದ ಕಾರಣ ದೊಡ್ಡ ಮಟ್ಟದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಬಡವರ ಆಹಾರ ಭದ್ರತೆಯ ಮೇಲೆಯೇ ಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿದ ಅವರು, “ಬಹುತೇಕ ಪಡಿತರ ಅಂಗಡಿಗಳಲ್ಲಿ ಅಕ್ಕಿ ಸಿಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ಒಂದೇ ಒಂದು ತಿಂಗಳ ಅಕ್ಕಿಯೂ ಬಾಕಿ ಇಲ್ಲ. ಆದರೆ ರಾಜ್ಯ ಸರ್ಕಾರ ಸಮರ್ಪಕ ವಿತರಣೆ ಮಾಡುತ್ತಿಲ್ಲ. ಮೂರು ತಿಂಗಳಿಂದ ಪಿಂಚಣಿಯನ್ನೂ ಸರಿಯಾಗಿ ನೀಡಲಾಗುತ್ತಿಲ್ಲ ಎಂದು ಕಿಡಿಕಾರಿದರು. ಮೃತರ ಹೆಸರು ಡಿಲೀಟ್ ಆಗುವುದು ಸಹಜ ಪ್ರಕ್ರಿಯೆ. ಆದರೆ ಈಗ ಸರ್ಕಾರ ಉದ್ದೇಶಪೂರ್ವಕವಾಗಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಕಾರಣ ಸರ್ಕಾರದ ಬಳಿ ಹಣ ಇಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ಮಳೆ ಕೊರತೆ ಗಂಭೀರವಾಗಿದ್ದರೂ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಟೀಕಿಸಿದ ಅಶೋಕ್, ಹಾಸನ ಜಿಲ್ಲೆಯಲ್ಲಿ ಶೇಕಡಾ ೩೦ರಷ್ಟು ಮಳೆ ಕೊರತೆ ಇದೆ. ರೈತರು ಬಿತ್ತನೆ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ ಸಚಿವರು ಜಿಲ್ಲಾ ಪ್ರವಾಸ ಮಾಡುವ ಬದಲು ದೆಹಲಿ ಪ್ರವಾಸದಲ್ಲಿ ತೊಡಗಿದ್ದಾರೆ ಎಂದು ವ್ಯಂಗ್ಯವಾಡಿದರು. ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರದ ಗಮನ ರಾಜಕೀಯ ಕಿತ್ತಾಟದ ಮೇಲೆ ಇದೆ. ಜನರಿಗೆ ಸೇವೆ ಮಾಡುವ ಬದಲು ಅಧಿಕಾರ ಉಳಿಸಿಕೊಳ್ಳುವ ರಾಜಕಾರಣ ನಡೆಯುತ್ತಿದೆ ಎಂದರು.ಸರ್ಕಾರ ಕೋಮಾದಲ್ಲಿದೆಕಾಂಗ್ರೆಸ್ ಒಳಜಗಳ ಕುರಿತು ತೀವ್ರ ಟೀಕೆ ಮಾಡಿದ ಅವರು, ಯಾರು ಮುಖ್ಯಮಂತ್ರಿ ಆಗುತ್ತಾರೆ, ಯಾರು ಹೋಗುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ನಡೆಯುತ್ತಿರುವ ಕಿತ್ತಾಟದಿಂದ ಆಡಳಿತ ಕುಸಿದು ಬಿದ್ದಿದೆ. ಈಗ ಅಧಿಕಾರಿಗಳು ಆಡಿದ್ದೇ ಆಟವಾಗಿದೆ ಎಂದು ಆರೋಪಿಸಿದರು. ಅಬಕಾರಿ ಆದಾಯ ಹೆಚ್ಚಳ ಕುರಿತು ವ್ಯಂಗ್ಯವಾಡಿದ ಅಶೋಕ್, “ಮಹಾತ್ಮ ಗಾಂಧಿಯ ಆದರ್ಶಗಳನ್ನು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ ಅಬಕಾರಿ ಆದಾಯವನ್ನು ೨೫ ಸಾವಿರ ಕೋಟಿಯಿಂದ ೪೫ ಸಾವಿರ ಕೋಟಿಗೆ ಹೆಚ್ಚಿಸಿದೆ. ಕಿಕ್ ಮೇಲಿನ ಟ್ಯಾಕ್ಸ್‌ನಿಂದಲೇ ಸರ್ಕಾರ ಬದುಕುತ್ತಿದೆ ಎಂದು ಲೇವಡಿ ಮಾಡಿದರು.ಭಟ್ಕಳ್ ಚಲೊ ನಡೆಸುತ್ತೇವೆಅಳಂದ ಮತ್ತು ಭಟ್ಕಳ ಘಟನೆಗಳನ್ನು ಉಲ್ಲೇಖಿಸಿದ ಅವರು, ಅಳಂದದಲ್ಲಿ ಪೊಲೀಸರ ಮೇಲೆ ದಾಳಿ ಹಾಗೂ ಕಲ್ಲು ತೂರಾಟ ಮಾಡಿದವರ ವಿರುದ್ಧದ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿದೆ. ಅದರ ಪರಿಣಾಮವಾಗಿ ಭಟ್ಕಳದಲ್ಲಿ ಸಾವಿರಾರು ಜನ ಸೇರಿ ಹಲ್ಲೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಹಿಂದೂಗಳ ರಕ್ಷಣೆ ಮಾಡಲು ಸರ್ಕಾರ ವಿಫಲವಾಗಿದೆ. ಓಟ್ ಬ್ಯಾಂಕ್ ರಾಜಕಾರಣದ ವಿರುದ್ಧ ಬಿಜೆಪಿ ವತಿಯಿಂದ ಮೇ ೨೯ರಂದು ‘ಭಟ್ಕಳ್ ಚಲೊ’ ಹಮ್ಮಿಕೊಳ್ಳಲಾಗುತ್ತಿದೆ ಎಂದು ಘೋಷಿಸಿದರು. ಇಂಧನ ದರ ಏರಿಕೆ ವಿಚಾರದಲ್ಲೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, “ಲೂಟಿ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರವೇ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಿ ೬ ಸಾವಿರ ಕೋಟಿ ರುಪಾಯಿ ಆದಾಯ ಬರುತ್ತಿದೆ” ಎಂದು ಆರೋಪಿಸಿದರು. ದೆಹಲಿ ಮತ್ತು ಗುಜರಾತ್‌ನಲ್ಲಿ ಪೆಟ್ರೋಲ್ ೯೯ ರುಪಾಯಿ ಇದ್ದರೆ ಕರ್ನಾಟಕದಲ್ಲಿ ೧೧೦ ರೂಪಾಯಿ ಇದೆ. ಈ ಹೆಚ್ಚುವರಿ ಹಣ ಯಾರ ಖಾತೆಗೆ ಹೋಗುತ್ತಿದೆ? ಸಿದ್ದರಾಮಯ್ಯ ಅವರಿಗೆ ಮಾನ-ಮರ್ಯಾದೆ ಇದ್ದರೆ ಈ ಹೆಚ್ಚುವರಿ ತೆರಿಗೆ ಬೇಡ ಎಂದು ಹೇಳಲಿ” ಎಂದು ಸವಾಲು ಹಾಕಿದರು.“ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಹಿಂದೆ ಕಮಿಷನ್ ರಾಜಕಾರಣ”ಹೊಸ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕುರಿತು ಮಾತನಾಡಿದ ಅಶೋಕ್, ಸ್ಟೇಡಿಯಂ ನಿರ್ಮಾಣದ ಹಿಂದೆ ದೊಡ್ಡ ಮಟ್ಟದ ಕಮಿಷನ್ ರಾಜಕಾರಣ ಇದೆ. ಈಗಾಗಲೇ ಕಮಿಷನ್ ಹಣವನ್ನು ಕೇರಳ ಹಾಗೂ ತಮಿಳುನಾಡು ಚುನಾವಣೆಗೆ ಕಳುಹಿಸಲಾಗಿದೆ ಎಂದು ಆರೋಪಿಸಿದರು. ಸ್ಟೇಡಿಯಂ ನಿರ್ಮಾಣ ಕೆಲಸ ಕ್ರೀಡಾ ಇಲಾಖೆಯದ್ದು. ಹೌಸಿಂಗ್ ಬೋರ್ಡ್ ಯಾಕೆ ಮಾಡಬೇಕು? ಇದರಲ್ಲಿ ಕುತಂತ್ರ ಇದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಎನ್. ರವಿಕುಮಾರ್ ಇತರರು ಉಪಸ್ಥಿತರಿದ್ದರು.*ಬಾಕ್ಸ್‌: ಡಿ.ಕೆ. ಶಿವಕುಮಾರ್‌ಗೆ ಸಿಎಂ ಯೋಗ ಕಾಣುತ್ತಿಲ್ಲ ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ಆಗಬಹುದು ಎಂದು ಹೇಳಿದ್ದೇನೆ. ಆದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾನು ಎಲ್ಲೂ ಹೇಳಿಲ್ಲ ಎಂದರು. ಎಲ್ಲ ಸಚಿವರನ್ನೂ ದೆಹಲಿಗೆ ಕರೆದುಕೊಂಡು ಹೋಗಿ ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿದ್ದಾರೆ. ಒಬ್ಬರು ಮತ್ತೊಬ್ಬರನ್ನು ಭೇಟಿಯಾಗದಂತೆ ಮಾಡಿದ್ದಾರೆ. ರಾಜಕೀಯವಾಗಿ ಯಾರನ್ನು ಎಲ್ಲಿ ಇಡಬೇಕು ಎಂಬುದು ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಡಿ.ಕೆ. ಶಿವಕುಮಾರ್‌ಗೆ ಸಿಎಂ ಯೋಗ ಕಾಣುತ್ತಿಲ್ಲ ಖಾಲಿ ತಟ್ಟೆ ಎಂದು ವ್ಯಂಗ್ಯವಾಡಿದರು. ವಿಪಕ್ಷ ನಾಯಕನಿಗೆ ಸರ್ಕಾರಿ ನಿವಾಸ ನೀಡದ ವಿಚಾರವಾಗಿ ಮಾತನಾಡಿದ ಅಶೋಕ್, ನಾನೇ ಸರ್ಕಾರಿ ಮನೆ ಬೇಡ ಎಂದು ತಿರಸ್ಕರಿಸಿದ್ದೇನೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ವಿಪಕ್ಷ ನಾಯಕರಿಗೂ ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಕ್ರೀದ್ ವೇಳೆ ಅಕ್ರಮ ಗೋಸಾಗಾಟ ತಡೆಗೆ ಒತ್ತಾಯ
ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ ಎಂದ ಸಚಿವ ಈಶ್ವರ್ ಖಂಡ್ರೆ