ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿ ಇರುವ ಸರ್ಕಾರಿ ಶುಶ್ರೂಷಕ ಮಹಾವಿದ್ಯಾಲಯದ ಫ್ಲೋರೆನ್ಸ್ ನೈಟಿಂಗೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಶುಶ್ರೂಷಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಶೃಶ್ರೂಷಕ ವೃತ್ತಿಯಲ್ಲಿ ವಿಫುಲ ಅವಕಾಶಗಳು ಇದ್ದು, ಹಲವಾರು ವಿಭಾಗಗಳಲ್ಲಿ ಶೃಶ್ರೂಷಕರ ಸೇವೆ ಅಗತ್ಯವಾಗಿದ್ದು, ಇವುಗಳಲ್ಲಿ ತೊಡಗಿಸಿಕೊಳ್ಳಲು ಕಲಿಕೆಯಲ್ಲಿ ನೀವು ತೋರುವ ತುಡಿತ ಮತ್ತು ಸಿಕ್ಕ ಅವಕಾಶದಲ್ಲಿ ನಿಮ್ಮ ಜ್ಞಾನದ ಅನಾವರಣ ಪ್ರಮುಖವಾಗಿರುತ್ತದೆ ಎಂದರು. ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರಿದ್ದ ಬ್ಯಾರಕ್‌ಗಳಲ್ಲಿ ಕಲುಷಿತ ನೀರು ಮತ್ತು ಕಾಲರಾದಂತಹ ಕಾಯಿಲೆಗಳಿಂದಾಗಿ ಯುದ್ಧಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸುತ್ತಿದ್ದವು. ಒಬ್ಬ ನರ್ಸ್ ಹಾಗೂ ಸಂಖ್ಯಾಶಾಸ್ತ್ರಜ್ಞೆಯಾಗಿದ್ದ ಫ್ಲೋರೆನ್ಸ್ ನೈಟಿಂಗೆಲ್, ಅಲ್ಲಿನ ನೈರ್ಮಲ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆಗಳನ್ನು ತರುವ ಮೂಲಕ ನೂರಾರು ಜೀವಗಳನ್ನು ಉಳಿಸಿದರು. ಅವರ ಈ ಮಹತ್ತರ ಕೊಡುಗೆಯಿಂದಾಗಿಯೇ ಅವರನ್ನು ಆಧುನಿಕ ಶುಶ್ರೂಷಕ ವೃತ್ತಿಯ ತಾಯಿ ಎಂದು ಕರೆಯಲಾಗುತ್ತದೆ. ರಾತ್ರಿಯ ವೇಳೆಯಲ್ಲೂ ಕೈಯಲ್ಲಿ ದೀಪ ಹಿಡಿದು ರೋಗಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದ ಅವರಿಗೆ ಲೇಡಿ ‘ವಿಥ್ ದಿ ಲ್ಯಾಂಪ್’ ಎಂಬ ಗೌರವ ಲಭಿಸಿತು. ಅವರ ನಂತರವೇ ಈ ನರ್ಸಿಂಗ್ ಕ್ಷೇತ್ರಕ್ಕೆ ಒಂದು ಉನ್ನತ ಗೌರವ ಹಾಗೂ ಮನ್ನಣೆ ದೊರೆಯಿತು ಎಂದು ಅವರ ಸೇವೆಯನ್ನು ಸ್ಮರಿಸಿದರು. ವೈದ್ಯರು ಬಂದು ತಪಾಸಣೆ ನಡೆಸಿ ಹೋದ ನಂತರ, ರೋಗಿಯ ಸಂಪೂರ್ಣ ಜವಾಬ್ದಾರಿ ಮತ್ತು ೨೪ ಗಂಟೆಗಳ ಕಾಲ ಅವರ ಆರೈಕೆ ಮಾಡುವುದು ಶುಶ್ರೂಷಕರೇ ಆಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಒಬ್ಬ ನರ್ಸ್, ವೈದ್ಯರಿಗಿಂತಲೂ ಹೆಚ್ಚಿನ ಜೀವಗಳನ್ನು ಉಳಿಸುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ರೋಗಿಯಲ್ಲಿನ ಸಣ್ಣ ಬದಲಾವಣೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು ಇವರ ಕೈಯಲ್ಲೇ ಇರುತ್ತದೆ ಎಂದು ವೃತ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನರ್ಸಿಂಗ್ ಎನ್ನುವುದು ಕೇವಲ ಜೀವನೋಪಾಯಕ್ಕಾಗಿ ಮಾಡುವ ವೃತ್ತಿಯಲ್ಲ, ಅದು ಅದಕ್ಕೂ ಮಿಗಿಲಾದ ಒಂದು ಪವಿತ್ರ ಸೇವೆ. ರೋಗಿಗಳಿಗೆ ಕೇವಲ ದೈಹಿಕ ಚಿಕಿತ್ಸೆಯಷ್ಟೇ ಅಲ್ಲದೆ, ಅವರೊಂದಿಗೆ ಭಾವನಾತ್ಮಕವಾಗಿ ಮಾತನಾಡಿ, ಗೌರವದಿಂದ ಕಾಣುವ ಮೂಲಕ ಅವರ ಅರ್ಧದಷ್ಟು ಕಾಯಿಲೆಯನ್ನು ವಾಸಿ ಮಾಡಬಹುದು. ತಮ್ಮ ಸ್ವಂತ ಹಿತಾಸಕ್ತಿಗಿಂತ ಇತರರ ಸೇವೆಗೆ ಆದ್ಯತೆ ನೀಡುವ ಈ ವೃತ್ತಿ ನಿಜಕ್ಕೂ ಶ್ಲಾಘನೀಯ ಎಂದರು.ಸರ್ಕಾರಿ ಶ್ರುಶೂಷಕ ಕಾಲೇಜಿನ ಪ್ರಾಂಶುಪಾಲರಾದ ಶೈಲಜಾ ಕೆ.ಜೆ. ಅಧ್ಯಕ್ಷತೆ ವಹಿಸಿದ್ದರು. ಅನುಷಾ ಎಂ.ಎಸ್. ಪ್ರಾರ್ಥಿಸಿದರು, ಮಹಾಂತೇಶ್ ಸ್ವಾಗತಿಸಿದರು, ರಶ್ಮಿ ಹಾಗೂ ವಿದ್ಯಾ ನಿರೂಪಿಸಿದರು ಮತ್ತು ಹೇಮಂತ್ ಕುಮಾರ್ ಪ್ರಾಸ್ತವಿಕ ನುಡಿಗಳನ್ನಾಡಿದರು. ನಿ. ಪ್ರಾಂಶುಪಾಲ ಚಂದ್ರಶೇಖರ್ ಹಡಪದ, ಸರ್ಕಾರಿ ಶೃಶೂಷಕ ಮಹಾವಿದ್ಯಾಲಯದ ಎಸ್‌ಎನ್‌ಎ ಸಂಯೋಜಕ ರಾಮು ವಿ.ಎಂ, ವಿದ್ಯಾರ್ಥಿಗಳಾದ ರಂಜಿತ, ಅಕ್ಷತಾ, ಸುಮಾ, ಶ್ವೇತ, ಬಸವನಗೌಡ ಪಾಟೀಲ್ ಇತರರು ಇದ್ದರು..