ಬೆಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮ ಮತ್ತು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು, ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಇದರೊಂದಿಗೆ ದೆಹಲಿಯಲ್ಲಿನ ವಿದ್ಯಾರ್ಥಿಗಳ ಹೋರಾಟ ರಾಜ್ಯಕ್ಕೂ ವ್ಯಾಪಿಸಿದೆ.
ವಿದ್ಯಾರ್ಥಿ ಸಂಘಟನೆಗಳಾದ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ, ಎಸ್ಎಫ್‌ಐ ವಿಶ್ವವಿದ್ಯಾಲಯ ಘಟಕ ಹಾಗೂ ಬೆಳಗಾವಿಯಲ್ಲಿ ವಿದ್ಯಾರ್ಥಿಗಳು, ಧಾರವಾಡದಲ್ಲಿ ‘ವಿದ್ಯಾರ್ಥಿಗಳ ಧ್ವನಿ’ ಸಂಘಟನೆ ಹೋರಾಟ ನಡೆಸಿತು. ವಿವಿಧೆಡೆ ಬೇರೆ ಬೇರೆ ಸಂಘಟನೆಗಳ ಹೋರಾಟಕ್ಕೆ ವಿದ್ಯಾರ್ಥಿಗಳು ಬೆಂಬಲ ನೀಡಿ ಪ್ರತಿಭಟನೆ, ಧರಣಿಯಲ್ಲಿ ಭಾಗವಹಿಸಿದರು. ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿ ಆದರು. ಈ ವೇಳೆ ಅವರನ್ನು ನಿಗದಿತ ಸಮಯ ಮೀರುತ್ತಿದ್ದಂತೆ ಪೊಲೀಸರು ಸ್ಥಳದಿಂದ ತೆರವುಗೊಳಿಸಿದ ಘಟನೆಯೂ ನಡೆಯಿತು. ಬೆಳಗಾವಿಯಲ್ಲಿ ವಿದ್ಯಾರ್ಥಿಗಳು ಕೈಯಲ್ಲಿ ಮಹಾತ್ಮಾ ಗಾಂಧೀಜಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್ ಅವರ ಭಾವಚಿತ್ರ ಹಾಗೂ ತ್ರಿವರ್ಣ ಧ್ವಜವನ್ನು ಹಿಡಿದು ಪ್ರತಿಭಟಿಸಿದರು.
ವಿವಿಧೆಡೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ನಾಯಕರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಹಗರಣಗಳ ಸಂಪೂರ್ಣ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು ಹಾಗೂ ಹಗರಣದ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿರುವುದು ಅನುಮಾನಾಸ್ಪದವಾಗಿದೆ. ಉಪವಾಸ ಸತ್ಯಾಗ್ರಹ ನಿರತ ವಿದ್ಯಾರ್ಥಿಗಳ ಮೇಲೆಯೇ ದಾಳಿ ಮಾಡಿಸುತ್ತಿರುವುದನ್ನು ನೋಡಿದರೆ ಹಗರಣದಲ್ಲಿ ಸರ್ಕಾರದ ಕೈವಾಡ ಸ್ಪಷ್ಟವಾಗುತ್ತದೆ. ಗೊಂದಲದಿಂದ ಬೇಸತ್ತು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ₹ ೫ ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪೀಪಿ ಊದಿ ಪ್ರತಿಭಟನಾಕಾರರ ತೆರವು ಮಾಡಿಸಿದ ಪೊಲೀಸರು!
ಸಂಯುಕ್ತ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಗುರುವಾರ ಸಂಜೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೇಣದ ಬತ್ತಿ ಪ್ರದರ್ಶನ ನಡೆಸಿ ಪ್ರತಿಭಟನೆ ನಡೆಸಿದರು. ಹೋರಾಟಗಾರರು ಸಂಜೆ 5ರಿಂದ 7ಗಂಟೆಯವರೆಗೆ ಮೇಣದಬತ್ತಿ ಪ್ರದರ್ಶನಕ್ಕೆ ಅನುಮತಿ ಪಡೆದಿದ್ದರಿಂದ ಅಷ್ಟರೊಳಗೆ ಅಲ್ಲಿಂದ ತೆರಳಬೇಕಾಗಿತ್ತು. ಆದರೆ, ವಿದ್ಯಾರ್ಥಿಗಳು ಅಲ್ಲಿಂದ ತೆರಳುವ ಲಕ್ಷಣಗಳು ಕಾಣುತ್ತಿರಲಿಲ್ಲ. ಮತ್ತಷ್ಟು ವಿದ್ಯಾರ್ಥಿಗಳು ಸೇರಿಕೊಳ್ಳುವ ಮುನ್ಸೂಚನೆ ಕಂಡು ಬಂತು. ಕೂಡಲೇ ಎಚ್ಚೆತ್ತ ಪೊಲೀಸರು 6.50ಕ್ಕೆ ಯಾವುದೇ ಲಾಠಿ ಅಥವಾ ಆಯುಧ ಬಳಸದೇ ಕೇವಲ ಪೀಪಿಯನ್ನು ಸಾಮೂಹಿಕವಾಗಿ ಊದಲು ಆರಂಭಿಸಿದರು. ಇದು ವಿದ್ಯಾರ್ಥಿಗಳ ಘೋಷಣೆಗಳಿಗಿಂತ ಪೊಲೀಸರ ಪೀಪಿ ಶಬ್ದವೇ ಹೆಚ್ಚಾಗಿತ್ತು. ಆ ಮೂಲಕ ಪೊಲೀಸರು ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರನ್ನು ಸ್ವಾತಂತ್ರ್ಯ ಉದ್ಯಾನವನದಿಂದ ಹೊರಗೆ ಕಳುಹಿಸಿದರು.
ಹಾಸನದಲ್ಲಿ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ, ಹಾವೇರಿಯಲ್ಲಿ ಎಸ್‌ಎಫ್‌ಐ ಸಂಘಟನೆಯು ಧರಣಿ ಆಯೋಜಿಸಿತ್ತು. ಧಾರವಾಡದಲ್ಲಿ ಜಾಗೃತ ಕರ್ನಾಟಕ ಸಂಘಟನೆಯ ಹೋರಾಟದಲ್ಲಿ ‘ಧಾರವಾಡ ವಿದ್ಯಾರ್ಥಿ ಧ್ವನಿ’ ಸಂಘವು ಭಾಗವಹಿಸಿತ್ತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯಕ್ಕೆ ಕಾರಣರಾದವರ ಮೇಲೆ ಕ್ರಮವಾಗಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕೇಂದ್ರ ಸರ್ಕಾರ ಎಚ್ಚರ ವಹಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕು. ವಿದ್ಯಾರ್ಥಿಗಳಿಗೆ ನ್ಯಾಯ ದೊರಕಬೇಕೆಂದು ಉಪವಾಸ ಕುಳಿತ ಪ್ರಮುಖರು ಆಗ್ರಹಿಸಿದರು.
