ಕನ್ನಡಪ್ರಭ ವಾರ್ತೆ ರಾಮನಾಥಪುರ
ರಾಮನಾಥಪುರ ಹೋಬಳಿ ಸಂಗೀತ ಗ್ರಾಮವೆಂದೇ ಖ್ಯಾತಿ ಪಡೆದಿರುವ ರುದ್ರಪಟ್ಟಣವು ಕಳೆದ ೫ ದಿನಗಳಿಂದ ಹತ್ತಾರು ಸಂಗೀತ ಕಲಾವಿದರ ಕಾರ್ಯಕ್ರಮಗಳಿಂದ ಮಿಂದೆದ್ದಿತು. ಜಿಲ್ಲೆ, ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಗೀತಪ್ರಿಯರು ಕಾರ್ಯಕ್ರಮಗಳನ್ನು ಆಲಿಸಿ ಸಂತೃಪ್ತಿಗೊಂಡರು. ವಿಶ್ವವಿಖ್ಯಾತ ತಂಬೂರಿಯಾಕಾರದ ಸಪ್ತ ಸ್ವರದೇವಾಲಯ ಮತ್ತು ದ್ವಾದಶ ಸ್ವರಸ್ಥಂಭ ಮಂಟಪಗಳು ವಿಶೇಷವಾದ ವಿದ್ಯುದ್ದೀಪಾಲಂಕಾರಗಳಿಂದ ಆಕರ್ಷಿಸಿದವು. ಸಂಗೀತೋತ್ಸವದ ಕೊನೆಯ ದಿನವಾದ ಭಾನುವಾರ ಬೆಳಿಗ್ಗೆ ಶ್ರೀ ಚನ್ನಕೇಶವಸ್ವಾಮಿಗೆ ರಥೋತ್ಸವ ಜರುಗಿತು. ದೇವಾಲಯದಿಂದ ಹೊರಟ ರಥವು ರಥಬೀದಿಯಲ್ಲಿ ಸಾಗಿ ಸ್ವಸ್ಥಾನ ತಲುಪಿತು. ರಥದ ಮುಂದೆ ವಿ: ಆರ್. ಕೆ.ಪದ್ಮನಾಭ ಸೇರಿದಂತೆ ಅನೇಕ ಕಲಾವಿದರು ಮತ್ತು ಸ್ಥಳೀಯರು ಭಜನೆ ಮತ್ತು ಕೀರ್ತನೆಗಳನ್ನು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಸಾಗಿದ್ದು ವಿಶೇಷವಾಗಿತ್ತು.ವಾರ್ಷಿಕ ಸಂಗೀತೋತ್ಸವ ೨೦೨೬ರ ಕೊನೆಯ ಕಾರ್ಯಕ್ರಮವಾಗಿ ವಿ: ಮೈಸೂರು ಮಂಜುನಾಥ್ ಮತ್ತು ಮಾಳವಿ ಮಂಜುನಾಥ್ ಅವರ ಯುಗಳ ವಯಲಿನ್ ವಾದನವು ಪ್ರೇಕ್ಷಕರಿಗೆ ಅಚ್ಚುಮೆಚ್ಚಾಯಿತು.
ಮುತ್ತುಸ್ವಾಮಿ ದೀಕ್ಷಿತರ ಮಹಾಗಣಪತಿಂ ಕೃತಿಯನ್ನು, ಸ್ವಾತಿ ತಿರುನಾಳ್‌ರ ಮಾಮವ ಸದಾ ರಚನೆಯನ್ನು, ಶಾಮಾಶಾಸ್ತ್ರಿಯವರ ಸರೋಜದಳ ಕೃತಿ ಮತ್ತು ಎಂತ ಮುದ್ದೋ ಮುಂತಾದ ಪ್ರಸಿದ್ಧ ಕೃತಿಗಳನ್ನು ಪ್ರೇಕ್ಷಕರ ತಟ್ಟುವಂತೆ ನುಡಿಸಿದರು.ಇದೇ ಮೊದಲ ಬಾರಿಗೆ ಸಂಗೀತೋತ್ಸವದಲ್ಲಿ ಸಂಗೀತ ಕಾರ್ಯಕ್ರಮಗಳ ಜೊತೆಗೆ ಹಾಸ್ಯ ಹರಟೆ, ಸಂದರ್ಶನ ಮುಂತಾದ ಕಾರ್ಯಕ್ರಮ ವೈವಿಧ್ಯಗಳನ್ನು ಆಯೋಜಿಸಿದ್ದು ವಿಶೇಷತೆಯಾಗಿತ್ತು.