ಸ್ಕೂಟಿ, ಲ್ಯಾಪ್‌ಟಾಪ್, ನಗದು ಬಹುಮಾನ ವಿತರಿಸಿದ ಸಚಿವ
ಕನ್ನಡಪ್ರಭ ವಾರ್ತೆ ಹೊಸಪೇಟೆವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಿದರೆ, ತಂದೆ-ತಾಯಿಗಳನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತಿರಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಜಯನಗರ ಜಿಲ್ಲೆಗೆ ಆರು ಜನ ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. ಇವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಹಾಗಾಗಿ ಅವರಿಗೆ ಪ್ರೋತ್ಸಾಹಿಸಲು ಧನ ಸಹಾಯ ಮಾಡಿರುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಲಾ ಒಂದು ಸ್ಕೂಟಿ, ಲ್ಯಾಪ್‍ಟಾಪ್ ಹಾಗೂ ನಗದು ಬಹುಮಾನ ವಿತರಿಸಿ ಮಾತನಾಡಿದ ಅವರು, ಯಶವಂತ್ 624 ಅಂಕ ಗಳಿಸಿದ್ದು ಕೊಟ್ಟ ಮಾತಿನಂತೆ ₹1 ಲಕ್ಷ ಬಹುಮಾನ ನೀಡಿರುವೆ. ನಿಹಾರ್ (622 ಅಂಕಗಳು), ಲಕ್ಷ್ಮಿ, ಅಭಿಷೇಕ, ಹೇಮಂತ್, ಉಮೇಶ್ ತಲಾ 621 ಅಂಕಗಳನ್ನು ಗಳಿಸಿದ್ದು, ತಲಾ ₹50 ಸಾವಿರ ಬಹುಮಾನ ಕೂಡ ನೀಡಿರುವೆ ಎಂದರು.ಮಕ್ಕಳಿಗೆ ನೀಡಿರುವ ಸ್ಕೂಟಿಯನ್ನು ತಂದೆ-ತಾಯಿಗಳು ಓಡಿಸಬೇಕು. ಅವರು ಲೈಸೆನ್ಸ್ ಪಡೆಯುವವರೆಗೆ ತಾಯಿ, ತಂದೆ ಚಲಾಯಿಸಬೇಕು. ಮಕ್ಕಳ ಓದಿಗೆ ಅನುಕೂಲ ಆಗಲಿ ಎಂದು ಸ್ಕೂಟಿ ನೀಡಲಾಗಿದೆ. ಪಿಯುಸಿಯಲ್ಲಿ ಇನ್ನಷ್ಟು ಸಾಧನೆ ಮಾಡಿ ತಮ್ಮ ಕನಸು ಈಡೇರಿಸಿಕೊಳ್ಳಬೇಕು ಎಂದರು.
ಬಾಲಕಿ ಲಕ್ಷ್ಮೀ 621 ಅಂಕ ಗಳಿಸಿದ್ದು, ಮರು ಎಣಿಕೆಗೆ ಅರ್ಜಿ ಸಲ್ಲಿಸುತ್ತಿದ್ದಾಳೆ. ಇದರಲ್ಲೂ 624 ಅಂಕಗಳನ್ನು ಬಾರದೇ ಇದ್ದಲ್ಲಿ, ಮರು ಪರೀಕ್ಷೆ ಬರೆಯುವೆ ಎಂದಿದ್ದಾಳೆ. ಒಂದು ವೇಳೆ 624 ಅಂಕ ಗಳಿಸಿದರೆ, ₹5 ಲಕ್ಷ ಬಹುಮಾನ ನೀಡುವೆ ಎಂದು ಘೋಷಿಸಿದರು.ವಿಜಯನಗರ ಜಿಲ್ಲೆ ರಾಜ್ಯದಲ್ಲಿ 18ನೇ ಸ್ಥಾನ ಪಡೆದಿದೆ. ಈ ಹಿಂದೆ ಕಳಪೆ ಸಾಧನೆ ಮಾಡಿತ್ತು. ಈ ವರ್ಷ ಇನ್ನಷ್ಟು ಸಾಧನೆ ಮಾಡಬೇಕಿದೆ. ಈ ಭಾಗದ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಬೇಕು ಎಂದು ಕರೆನೀಡಿದರು.
ಇದೇ ವೇಳೆ ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ಅವರಿಗೆ ವಾಚ್‌ನ್ನು ಬಹುಮಾನವಾಗಿ ನೀಡಿದರು. ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ, ಶಾಸಕ ಜೆ.ಎನ್. ಗಣೇಶ, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿಪಂ ಸಿಇಒ ಅಕ್ರಂ ಶಾ, ಎಸ್ಪಿ ಶ್ರೀಹರಿಬಾಬು, ಮುಖಂಡರಾದ ದಾದಾಪೀರ್, ಸಿ.ಎ. ಗಾಳೆಪ್ಪ, ಬಿಇಒ ಶೇಖರ ಹೊರಪೇಟೆ, ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ಹುಲಿಬಂಡಿ ಮತ್ತಿತರರಿದ್ದರು.