ಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಜಾರಕಿಹೊಳಿ, ಗುತ್ತಿಗೆದಾರರ ಸಂಘದಿಂದ ಅಭಿನಂದನೆ

KannadaprabhaNewsNetwork |  
Published : Apr 14, 2025, 01:17 AM IST
13ಎಚ್‌ವಿಆರ್‌1 | Kannada Prabha

ಸಾರಾಂಶ

ಸಣ್ಣ ಗುತ್ತಿಗೆದಾರರಿಗೆ ಶೇ. ೫೦ರಷ್ಟು ಹಾಗೂ ದೊಡ್ಡ ಗುತ್ತಿಗೆದಾರರ ಬಾಕಿಯನ್ನು ಶೇಕಡಾವಾರು ನಿಗದಿ ಮಾಡಿ ಪಾರದರ್ಶಕವಾಗಿ ಬಿಡುಗಡೆ ಮಾಡಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರನ್ನು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಶ್ಲಾಘಿಸಿದರು.

ಹಾವೇರಿ: ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಪ್ರತಿಭಟನಾ ನಿರತ ಗುತ್ತಿಗೆದಾರರಿಗೆ ನೀಡಿದ ಭರವಸೆಯಂತೆ ಸಚಿವ ಸತೀಶ ಜಾರಕಿಹೊಳಿ ಲೋಕೋಪಯೋಗಿ ಇಲಾಖೆಯ ಜಿಲ್ಲೆಯ ಗುತ್ತಿಗೆದಾರರ ಸುಮಾರು ₹೩೩ ಕೋಟಿ ಬಾಕಿ ಬಿಲ್‌ ಪೈಕಿ ಸುಮಾರು ₹೧೬ ಕೋಟಿ ಬಿಡುಗಡೆಗೊಳಿಸಿ ಮಾತು ಉಳಿಸಿಕೊಂಡಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಹಾವೇರಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಈ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷಗಳ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಪಾರದರ್ಶಕತೆ ಕೊರತೆಯಿಂದ ಕೆಲ ಗುತ್ತಿಗೆದಾರರು ಆತ್ಮಹತ್ಯೆ ದಾರಿ ಹಿಡಿದಿದ್ದರು. ಇದೀಗ ಸಣ್ಣ ಗುತ್ತಿಗೆದಾರರಿಗೆ ಶೇ. ೫೦ರಷ್ಟು ಹಾಗೂ ದೊಡ್ಡ ಗುತ್ತಿಗೆದಾರರ ಬಾಕಿಯನ್ನು ಶೇಕಡಾವಾರು ನಿಗದಿ ಮಾಡಿ ಪಾರದರ್ಶಕವಾಗಿ ಬಿಡುಗಡೆ ಮಾಡಿದ್ದಾರೆ ಎಂದರು.

ಈ ಹಿಂದೆ ಸಚಿವರು, ಹಿರಿಯ ಅಧಿಕಾರಿಗಳನ್ನು ಪದೇ ಪದೇ ಭೇಟಿ ಮಾಡಿ ಹಣ ಬಿಡುಗಡೆಗೆ ಒತ್ತಾಯಿಸಬೇಕಾಗಿತ್ತು. ಆದರೆ ಈ ಬಾರಿ ಸಚಿವ ಸತೀಶ ಜಾರಕಿಹೊಳಿ ಸ್ವತಃ ಮುತುವರ್ಜಿ ವಹಿಸಿ ಗುತ್ತಿಗೆದಾರರ ಬಾಕಿ ಬಿಡುಗಡೆಗೆ ಕ್ರಮ ವಹಿಸಿರುವುದು ಸಂತಸ ನೀಡಿದೆ ಎಂದರು.

ಇನ್ನು ಆರ್‌ಡಿಪಿಆರ್, ನೀರಾವರಿ ನಿಗಮದಲ್ಲಿ ನೂರಾರು ಕೋಟಿ ಮೊತ್ತದ ಬಿಲ್‌ ಬಾಕಿ ಉಳಿದುಕೊಂಡಿದ್ದು, ಇದರಿಂದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಎಸ್‌ಡಿಪಿ, ಟಿಎಸ್‌ಪಿಗಳ ಅನುದಾನದಲ್ಲಿ ಸಾಕಷ್ಟು ಬಾಕಿ ಉಳಿದುಕೊಂಡಿದ್ದು, ಈ ಮೊತ್ತ ಪಾವತಿಗೆ ಮುಖ್ಯ ಎಂಜಿನಿಯರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಮನವಿಗೆ ತೆರಳಿದಾಗ ಅವರು ಈ ಎಸ್‌ಡಿಪಿ, ಟಿಎಸ್‌ಪಿಗಳ ಅನುದಾನದ ಹೆಡ್ ಬಂದ್ ಆಗಿದೆ ಎಂಬ ಆಘಾತಕಾರಿ ಸಂಗತಿ ತಿಳಿಸಿದ್ದು, ಇದರಿಂದ ಸಣ್ಣ ಗುತ್ತಿಗೆದಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮಾರ್ಚ್ ಅಂತ್ಯಕ್ಕೆ ಲೋಕೋಪಯೋಗಿ ಇಲಾಖೆಯಲ್ಲಿ ಅಂದಾಜು ₹೪೦- ೪೫ ಕೋಟಿ, ಆರ್‌ಡಿಪಿಆರ್ ₹೧೨೬ ಕೋಟಿ, ಕೆಎನ್‌ಎನ್‌ಎಲ್‌ನಲ್ಲಿ ₹೩೦೦- ೪೦೦ಕೋಟಿ, ಎಸ್‌ಡಿಪಿ- ಟಿಎಸ್‌ಪಿ ₹೧೭ ಕೋಟಿ ಹೀಗೆ ವಿವಿಧ ಹೆಡ್‌ಗಳಲ್ಲಿ ನೂರಾರು ಕೋಟಿ ಬಿಲ್‌ ಬಾಕಿ ಉಳಿದುಕೊಂಡಿದೆ ಎಂದು ವಿವರಿಸಿದರು.ಅರಣ್ಯ ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ಶಶಿಧರ ಸಿಂಗಾರಿ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ₹೩೦ ಕೋಟಿ ಅನುದಾನ ಮೀಸಲಿಟ್ಟಿದ್ದು, ಅಧಿಕಾರಿಗಳು ಒಳಒಪ್ಪಂದ ಮಾಡಿಕೊಂಡು ತಮ್ಮವರಿಗೇ ಗುತ್ತಿಗೆ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಅರಣ್ಯ ಇಲಾಖೆ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುತ್ತಿಲ್ಲ. ಅರಣ್ಯ ಇಲಾಖೆಯಲ್ಲಿ ಟ್ರಂಚ್, ಬಾರ್ಡರ್‌ ಸೇರಿ ವಿವಿಧ ಕಾಮಗಾರಿಗಳು, ಟೆಂಡರ್‌ಗಳು ಕೇವಲ ಕಾಗದದಲ್ಲಿವೆ. ವಾಸ್ತವದಲ್ಲಿ ಸಾಕಷ್ಟು ಷರತ್ತು ಹಾಕಿ ನಮ್ಮನ್ನು ದೂರ ಇಡಲಾಗುತ್ತಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಂತೋಷ ಹಿರೇಮಠ, ಅಶೋಕ ಬಣಕಾರ, ಕುಮಾರ ಹತ್ತಿಕಾಳ, ನಾಗರಾಜ ಆನ್ವೇರಿ, ಪ್ರಕಾಶ ಹಿರೇಕೆರೂರ, ಆರ್.ಎಂ. ಗಂಗೋಳ, ನಾಗರಾಜ ಮಠದ, ಅರುಣ ಗಂಗೋಳ ಇದ್ದರು.ಅಡ್ವಾನ್ಸ್‌ ಕಮಿಷನ್‌ ಪಡೆದರೂ ಬಿಲ್ ಇಲ್ಲ

ಕಮಿಷನ್ ಹಾವಳಿಯಿಂದ ಹಲವಾರು ಗುತ್ತಿಗೆದಾರರು ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಧ್ಯವರ್ತಿಗಳ ಹಾವಳಿ ಇಲಾಖೆಯಲ್ಲಿ ಹೆಚ್ಚಿದೆ. ಜಿಲ್ಲೆಯ ಆರ್‌ಡಿಪಿಆರ್ ಇಲಾಖೆಯಲ್ಲಿ ಕಾಮಗಾರಿಗೂ ಎರಡು ವರ್ಷ ಮೊದಲೇ ಶೇ. ೮- ೧೦ರಷ್ಟು ಅಡ್ವಾನ್ಸ್‌ ಕಮಿಷನ್ ಪಡೆದು ಗುತ್ತಿಗೆ ನೀಡಿದ್ದು, ಕಾಮಗಾರಿ ಮುಗಿದರೂ ಬಿಲ್‌ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದಾರೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''