ನರಗುಂದ: ಜಿಲ್ಲೆಯಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನರಗುಂದ ಪಟ್ಟಣಕ್ಕೆ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ತಾಲೂಕು ರೈಲ್ವೆ ಹೋರಾಟ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳು ಕೇಂದ್ರ ಸಚಿವ ಜೋಶಿಗೆ ಮನವಿ ನೀಡಿ ಆಗ್ರಹಿಸಿದರು.
ಅನಂತರ ರೈಲ್ವೆ ಹೋರಾಟ ಸಮಿತಿ ಮುಖಂಡರು ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕದಲ್ಲಿ ಆರ್ಥಿಕವಾಗಿ ಅತೀ ವೇಗವಾಗಿ ಬೆಳೆಯುತ್ತಿರುವ ನರಗುಂದಕ್ಕೆ ಸದ್ಯ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸುವುದು ಅವಶ್ಯವಿದೆ. ಈಗಾಗಲೇ ಕಳೆದೊಂದು ವರ್ಷದಿಂದ ನಮ್ಮ ಹೋರಾಟ ಸಮಿತಿಯಿಂದ ಈ ಭಾಗದ ಸಂಸದರಿಗೆ, ಶಾಸಕರಿಗೆ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣವರಿಗೆ ಮನವಿ ನೀಡಿ ಘಟಪ್ರಭದಿಂದ ಕುಷ್ಟಗಿವರಗೆ ನರಗುಂದ ಮಾರ್ಗವಾಗಿ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ವಿನಂತಿ ಮಾಡಲಾಗಿದೆ. ಮೇಲಾಗಿ ರೈಲ್ವೆ ಕಚೇರಿ ಅಧಿಕಾರಿಗಳಿಗೆ ಮನವಿ ನೀಡಿ ಈ ಮಾರ್ಗದಲ್ಲಿ ಹೊಸ ರೈಲ್ವೆ ಮಾರ್ಗ ಪ್ರಾರಂಭ ಮಾಡಲು ಭೂಮಿ ಸರ್ವೇ ಮಾಡಬೇಕೆಂದು ತಿಳಿಸಿದ್ದೇವೆ. ಆದ್ದರಿಂದ ತಾವುಗಳು ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದು, ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರು ಮತ್ತು ರೈಲ್ವೆ ಸಚಿವರ ಮೇಲೆ ಒತ್ತಡ ಹಾಕಿ ಈ ಭಾಗದಲ್ಲಿ ಹೊಸ ರೈಲ್ವೆ ಮಾರ್ಗ ಪ್ರಾರಂಭ ಮಾಡಿದರೆ ಈ ಭಾಗದ ಕೃಷಿ, ವಾಣಿಜ್ಯ, ಯುವಕರ ಶಿಕ್ಷಣ, ಮತ್ತು ಈ ಭಾಗದ ಪುಣ್ಯ ಕ್ಷೇತ್ರಗಳಾದ ಯಲ್ಲಮ್ಮನಗುಡ್ಡ, ಗೊಡಚಿ ವೀರಭದ್ರೇಶ್ವರ, ರೋಣ ತಾಲೂಕಿನ ಇಟಿಗಿ ಭೀಮಾಂಬಿಕಾದೇವಿ ಪುಣ್ಯ ಕ್ಷೇತ್ರಗಳಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಬಂದು ಹೋಗಲು ಅನುಕೂಲವಾಗುತ್ತದೆ. ಆದ್ದರಿಂದ ಈ ಹೊಸ ರೈಲ್ವೆ ಮಾರ್ಗ ಪ್ರಾರಂಭ ಮಾಡಲು ಸಚಿವ ಜೋಶಿಯವರು ಮುಂದಾಗಬೇಕೆಂದು ಮನವಿ ಮಾಡಿಕೊಂಡರು.
ಸಚಿವ ಪ್ರಹ್ಲಾದ್ ಜೋಶಿಯವರು ಮನವಿ ಸ್ವೀಕರಿಸಿ, ಕರ್ನಾಟಕ ಕೇಸರಿ ಎಂದು ಕರೆಯುವ ಜಗನ್ನಾಥರಾವ ಜೋಶಿಯವರ ಪುಣ್ಯ ಕ್ಷೇತ್ರವಾಗಿದೆ. ಹಾಗಾಗಿ ನಾನು ಈ ಮಾರ್ಗದಲ್ಲಿ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಲು ಸಂಬಂಧಪಟ್ಟ ಸಚಿವರಿಗೆ ತಿಳಿಸುತ್ತೇನೆಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದಿ, ರಾಘವೇಂದ್ರ ಗುಜಮಾಗಡಿ, ಶಂಕ್ರಣ್ಣ ಅಂಬಲಿ, ಮಹೇಶಗೌಡ ಪಾಟೀಲ, ವೀರಣ್ಣ ಸೊಪ್ಪಿನ, ನಬಿಸಾಬ ಕಿಲ್ಲೇದಾರ ಸೇರಿದಂತೆ ಮುಂತಾದವರು ಇದ್ದರು.