ಐಮಂಗಲ ವಸತಿ ಶಾಲೆಗೆ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ

KannadaprabhaNewsNetwork |  
Published : Sep 13, 2026, 02:00 AM IST
ಚಿತ್ರ 3 | Kannada Prabha

ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆಯಲು ವಿದ್ಯಾರ್ಥಿಗಳಿಗೆ ಸಲಹೆ

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಐಮಂಗಲ ಗ್ರಾಮದ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಶನಿವಾರ ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಎಸ್ಎಸ್ಎಲ್‌ಸಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಕಿವಿಮಾತು ಹೇಳಿ ಮಾತನಾಡಿದ ಅವರು, ವಸತಿ ಶಾಲೆಯಲ್ಲಿ ಪಿಯು ಶಿಕ್ಷಣ ಆರಂಭಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಬಡತನದ ಹಿನ್ನೆಲೆ ಹೊಂದಿರುವ ಮಕ್ಕಳೇ‌ ಇಲಾಖೆಯ ವಸತಿ ಶಾಲೆಯಲ್ಲಿ ಓದುವುದು. ನಿಮ್ಮ ತಂದೆ ತಾಯಂದಿರಿಗೆ ಲಕ್ಷಾಂತರ ರು. ಖರ್ಚು ಮಾಡುವ ಆರ್ಥಿಕ ಚೈತನ್ಯವಿಲ್ಲ. ಎಸ್‌.ಎಸ್.ಎಲ್.ಸಿ‌ ಹಾಗೂ ಪಿಯುಸಿಯಲ್ಲಿ ಅತ್ಯುನ್ನತ ‌ಶ್ರೇಣಿಯಲ್ಲಿ ಪಾಸಾಗಿ ನೀಟ್ ಹಾಗೂ ಸಿಇಟಿ ಮೂಲಕ ಸರ್ಕಾರಿ ಕೋಟಾದಡಿ ವೈದ್ಯಕೀಯ ಹಾಗೂ ಎಂಜಿನಿಯರ್ ಸೀಟು ಪಡೆಯುವ ಲಕ್ಷ್ಯ ನೀವು ಹೊಂದಬೇಕು. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಎದುರಿಸಿ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಾಗಿ ಸೇವೆ ಮಾಡುವ ಕನಸುಗಳನ್ನು ಕಾಣಬೇಕು. ಅಧಿಕಾರಿಗಳು ಕಚೇರಿ ಕೆಲಸಗಳಿಗೆ ಸೀಮಿತವಾಗಬಾರದು. ಪ್ರತಿನಿತ್ಯ ಒಂದು ವಸತಿ ಶಾಲೆ ಅಥವಾ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನಾ ವರದಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಅವರಿಗೆ ಸಚಿವ ಕೆ.ಎಚ್.ಮುನಿಯಪ್ಪ ತಾಕೀತು ಮಾಡಿದರು.

ಈ ಕುರಿತು ಇಲಾಖೆ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗುವುದು. ವಸತಿ ಶಾಲೆ ಹಾಗೂ ನಿಲಯಗಳಲ್ಲಿ ಅಧಿಕಾರಿ ಪರಿಶೀಲಿಸಬೇಕಾದ ತಪಸೀಲು ಪಟ್ಟಿಯನ್ನು ಸಹ ಸುತ್ತೋಲೆಯೊಂದಿಗೆ ನೀಡಲಾಗುವುದು. ವಸತಿ ನಿಲಯ ಅಥವಾ ಶಾಲೆ ಮುಖ್ಯಸ್ಥರಿಗೆ ಯಾವುದೇ ಸುಳಿವು ನೀಡದೆ ಅನಿರೀಕ್ಷಿತವಾಗಿ ಭೇಟಿ ನೀಡಬೇಕು. ಕಡ್ಡಾಯವಾಗಿ ವಾರಕ್ಕೆ ಒಂದು ದಿನ ಜಿಲ್ಲಾಧಿಕಾರಿ ಹಾಗೂ ಸಿಇಒಗಳು ಸಹ ಪರಿಶೀಲನೆ ನಡೆಸಬೇಕು. ಐಮಂಗಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ವಸತಿ ಶಾಲೆಗೆ ನೀರು ಸರಬರಾಜು ಮಾಡಲು ವಿದ್ಯಾರ್ಥಿನಿಯರು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು

ಪೈಪ್‌ಲೈನ್ ಕಾಮಗಾರಿ ಯೋಜನಾ ವರದಿಯನ್ನು ಸಿದ್ದಪಡಿಸುವಂತೆ ಸಿಇಒಗೆ ಸೂಚಿಸಿದರು. ಕಾಮಗಾರಿಗೆ ತಗಲುವ ವೆಚ್ಚಕ್ಕೆ ಇಲಾಖೆಯಿಂದ ಅನುದಾನ ನೀಡುವುದಾಗಿ ತಿಳಿಸಿದರು. ಇದೇ ವೇಳೆ ವಸತಿ ಶಾಲೆಯ ಬೋದನಾ ಕೊಠಡಿ, ಪ್ರಯೋಗಾಲಯ, ಡಾರ್ಮೆಂಡರ್, ಭೋಜನಾಲಯಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು‌.

ವಸತಿ ಶಾಲೆಯ ಅಡುಗೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಸಚಿವರು, ಸೊಪ್ಪು ತರಕಾರಿಗಳನ್ನು ತಪ್ಪದೇ ನೀರಿನಲ್ಲಿ ತೊಳೆದು ಬಳಸಬೇಕು. ಊಟದ ಮೆನು ಆಧರಿಸಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು. ಮೊಟ್ಟೆ, ಬಾಳೆಯನ್ನು ವಿತರಿಸಬೇಕು. ಇಲಾಖೆಯಲ್ಲಿನ ಖಾಯಂ ಅಡುಗೆ ಸಿಬ್ಬಂದಿಗೆ ಸೇವಾ ಹಿರಿತನದ ಆಧಾರದಲ್ಲಿ ಬಡ್ತಿ ನೀಡಲಾಗುತ್ತದೆ. ನಂತರ ಭರ್ತಿ ಮಾಡುವ ಹುದ್ದೆಗಳಲ್ಲಿ ಕ್ರೈಸ್ ಅಡಿ ಈಗಾಗಲೇ ಕೆಲಸ ಮಾಡುವ ಅಡುಗೆ ಸಿಬ್ಬಂದಿಗೆ ಆದ್ಯತೆ ನೀಡಲು ಪ್ರಯತ್ನಿಸಲಾಗುವುದು. ಸದ್ಯ ಇರುವ ವಸತಿ ಶಾಲೆಯ ಕಟ್ಟದ ಮೇಲ್ಬಾಗದಲ್ಲಿಯೇ ಇನ್ನಷ್ಟು ಕೊಠಡಿಗಳನ್ನು ನಿರ್ಮಿಸಿ ಪಿಯು. ಶಿಕ್ಷಣ ಆರಂಭಿಸಲು ಯೋಜನೆಯೊಂದನ್ನು ಸಿದ್ದಪಿಡಿಸಿ ಇಲಾಖೆ ಪ್ರಸ್ತಾವನೆ ಸಲ್ಲಿಸುವಂತೆ ವಸತಿ ಶಾಲೆ ಪ್ರಾಂಶುಪಾಲರಿಗೆ ಸೂಚಿಸಿದರು. ವಸತಿ ಶಾಲೆಯ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ ಅವರು ಎಲ್ಲಾ ವಿದ್ಯಾರ್ಥಿಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ಮಾಡುವ ಗುರಿಯನ್ನು ಪ್ರಾಂಶುಪಾಲರಿಗೆ ನೀಡಿ, ಗಣ್ಯರ ಭೇಟಿ ಪುಸ್ತಕದಲ್ಲಿ ಸಹಿ ಮಾಡಿದರು. ಭೇಟಿ ನೆನಪಿಗಾಗಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸಚಿವರೊಂದಿಗೆ ಪೋಟೋ ತೆಗೆಸಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ವಸತಿ ಶಾಲೆ ಪ್ರಾಂಶುಪಾಲ ಆರ್.ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಉತ್ತಮ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು: ಪ್ರದೀಪ್
ವಿಕಸಿತ ಭಾರತ ಆನ್‌ಲೈನ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ