ಶಿಕ್ಷಕರು ವಿದ್ಯಾರ್ಥಿಗಳ ಜೀವನಕ್ಕೆ ಉತ್ತಮ ದಿಕ್ಕು ತೋರಿಸುವ ಮಾರ್ಗದರ್ಶಕರಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಮಾನವೀಯತೆ, ಉತ್ತಮ ಸಂಸ್ಕಾರ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಶಿಕ್ಷಕರು ಕೇವಲ ಪಾಠ ಬೋಧಿಸದೇ ವಿದ್ಯಾರ್ಥಿಗಳಲ್ಲಿ ಜ್ಞಾನ, ಸಂಸ್ಕಾರ ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ ಎಂದು ರೋಟರಿ ಅಧ್ಯಕ್ಷ ಪ್ರದೀಪ್ ಹೇಳಿದರು.ಸಮೀಪದ ಬೊಪ್ಪಸಮುದ್ರ ಪ್ರೌಢಶಾಲೆಯಲ್ಲಿ ರೋಟರಿ ಭಾರತೀನಗರ ಸೆಂಟ್ರಲ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮತ್ತು ಉತ್ತಮ ಶಿಕ್ಷಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಒಬ್ಬ ಉತ್ತಮ ಶಿಕ್ಷಕ ನೀಡುವ ಮಾರ್ಗದರ್ಶನವು ವಿದ್ಯಾರ್ಥಿಯ ಇಡೀ ಜೀವನಕ್ಕೆ ದಾರಿದೀಪವಾಗುತ್ತದೆ ಎಂದರು.
ರೋಟರಿ ಕಾರ್ಯದರ್ಶಿ ಡಾ.ಸೌಮ್ಯ ರಾಜೇಶ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಜೀವನಕ್ಕೆ ಉತ್ತಮ ದಿಕ್ಕು ತೋರಿಸುವ ಮಾರ್ಗದರ್ಶಕರಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಮಾನವೀಯತೆ, ಉತ್ತಮ ಸಂಸ್ಕಾರ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.ಈ ವೇಳೆ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದ ಜಿ.ಎಸ್.ನವೀನ್ , ಗ್ರಾಮದ ಪ್ರೌಢಶಾಲೆ ಕನ್ನಡ ವಿಭಾಗದ ಹಿರಿಯ ಶಿಕ್ಷಕ ಪುಟ್ಟಸ್ವಾಮಿ, ಸಮಾಜ ವಿಜ್ಞಾನ ವಿಭಾಗದ ಮುಖ್ಯಶಿಕ್ಷಕ ಮಲ್ಲಿಕಾರ್ಜುನ್, ಅಣ್ಣಾರು ಕೆಪಿಎಸ್ ಶಾಲೆ ಕನ್ನಡ ವಿಭಾಗದ ಸವಿತಾ ಅವರಿಗೆ ಉತ್ತಮ ಶಿಕ್ಷಕರೆಂದು ಗುರುತಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಕೆ.ಕುಮಾರರಾಜು, ರೋಟರಿ ಪದಾಧಿಕಾರಿಗಳಾದ ಮಾಲಗಾರಹಳ್ಳಿ ಶಶಿಕುಮಾರ್, ಶಿವರತ್ನ ಮಣಿ, ಶಿವಮ್ಮ ಶಿವಕುಮಾರ್, ಮರಿಚನ್ನೇಗೌಡ, ವರಲಕ್ಷ್ಮಿ, ಸಿದ್ದೇಗೌಡ, ಮಹೇಶ್, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನಸ್ವಾಮಿ, ಎಸ್ ಡಿಎಂಸಿ ಸಮಿತಿ ಅಧ್ಯಕ್ಷ ಹನುಮಂತಸ್ವಾಮಿ, ಸಿಆರ್‌ಪಿ ನಂದೀಶ್, ರವಿ ಶಂಕರ್, ರೂಪೇಶ್, ಪುಟ್ಟಸ್ವಾಮಿ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.
ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮಪಾಂಡವಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಚಿನಕುರಳಿ ವಲಯದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಸಂಸ್ಥೆ ಯೋಜನಾಧಿಕಾರಿಗಳು ಹಾಗೂ ವಲಯದ ಎಲ್ಲಾ ಒಕ್ಕೂಟಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಕ್ಷೇತ್ರದ ಹಿನ್ನೆಲೆ, ಯೋಜನೆಯ ವಿವಿಧ ಕಾರ್ಯಕ್ರಮಗಳ ಪರಿಚಯ, ಸಿಎಸ್ ಸಿ ಸೌಲಭ್ಯಗಳು ಹಾಗೂ ವಿಮಾ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಸಿಎಚ್ ಡಿ ಆಡಿಟ್, ಲೆಕ್ಕಪರಿಶೋಧನೆ, ಮರುಪಾವತಿ ಚೀಟಿ ನಿರ್ವಹಣೆ, ಬಡ್ಡಿ ದರ, ಪದಾಧಿಕಾರಿಗಳ ಜವಾಬ್ದಾರಿಗಳು ಹಾಗೂ ಒಕ್ಕೂಟದ ಸಭೆಗಳನ್ನು ನಡೆಸುವ ವಿಧಾನಗಳ ಕುರಿತು ಯೋಜನಾಧಿಕಾರಿಗಳು ಮಾಹಿತಿ ನೀಡಿದರು. ವಲಯದ ಕ್ರಿಯಾ ಯೋಜನೆಯಲ್ಲಿರುವ ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ಸಹಕಾರ ಮತ್ತು ಜವಾಬ್ದಾರಿಗಳ ಬಗ್ಗೆಯೂ ಮಾರ್ಗದರ್ಶನ ನೀಡಲಾಯಿತು. ಈ ವೇಳೆ 2026ನೇ ಸಾಲಿನ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿಯಾದ ವಿದ್ಯಾರ್ಥಿಗಳ ಪೋಷಕರಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಶಿಷ್ಯವೇತನದ ಉದ್ದೇಶ, ವಿದ್ಯಾರ್ಥಿಗಳಿಗೆ ದೊರೆಯುವ ಪ್ರಯೋಜನ ಹಾಗೂ ಅದರ ಸದ್ಬಳಕೆಯ ಕುರಿತು ಪೋಷಕರಿಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಹಾಗೂ 8 ಒಕ್ಕೂಟಗಳ ಒಟ್ಟು 40 ಜನ ಪದಾಧಿಕಾರಿಗಳು ಉಪಸ್ಥಿತರಿದ್ದರು.