ಗೋವು ಸಂರಕ್ಷಣೆ, ಗೋವಿಗೆ ರಾಷ್ಟ್ರಮಾತೆಯ ಗೌರವ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾಧು-ಸಂತರ ನೇತೃತ್ವದಲ್ಲಿ ನಡೆಯುತ್ತಿರುವ ‘ಗೋ ಸಮ್ಮಾನ ಆಹ್ವಾನ ಅಭಿಮಾನ’ಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಗೋವು ಸಂರಕ್ಷಣೆ, ಗೋವಿಗೆ ರಾಷ್ಟ್ರಮಾತೆಯ ಗೌರವ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾಧು-ಸಂತರ ನೇತೃತ್ವದಲ್ಲಿ ನಡೆಯುತ್ತಿರುವ ‘ಗೋ ಸಮ್ಮಾನ ಆಹ್ವಾನ ಅಭಿಮಾನ’ಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸುವವರೆಗೂ ಅಭಿಯಾನ ನಿಲ್ಲದು ಎಂಬ ಎಚ್ಚರಿಕೆ ಸಂದೇಶ ಸಾರುತ್ತಿದ್ದು, ಈವರೆಗೆ 20 ಕೋಟಿ ಜನರು ಸಹಿ ಮಾಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಏನಿದು ಅಭಿಯಾನ?:

ಗೋವು ಭಾರತದ ಪರಂಪರೆ, ಸಂಸ್ಕೃತಿ ಮತ್ತು ಕೃಷಿಯ ಬೆನ್ನಲುಬಾಗಿದ್ದು, ಗೋಹತ್ಯೆ ನಿಷೇಧ ಜಾರಿಯಾಗಬೇಕೆಂದು 1966ರಲ್ಲಿ ಕರಪಾತ್ರಿ ಮಹಾರಾಜರ ನೇತೃತ್ವದಲ್ಲಿ ಆಂದೋಲನ ನಡೆದಿತ್ತು. ಆದರೆ ಪೂರ್ಣ ಯಶಸ್ಸು ಸಿಕ್ಕಿರದ ಕಾರಣ, ಮರು ಅಭಿಯಾನ ಆರಂಭಿಸಲಾಗಿದೆ. ಸ್ವಾತಂತ್ರ್ಯದ ವೇಳೆ ದೇಶದಲ್ಲಿ 90 ಕೋಟಿ ಗೋವುಗಳಿದ್ದರೆ ಇದೀಗ 8 ಕೋಟಿಗೆ ತಗ್ಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಸಾಧು-ಸಂತರು ಅಭಿಯಾನ ನಡೆಸುತ್ತಿದ್ದಾರೆ. 2025ರಲ್ಲಿ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಬೃಂದಾವನದಲ್ಲಿ ನಡೆದ ಸಾಧು-ಸಂತರ ಸಮಾವೇಶದಲ್ಲಿ ನಿರ್ಣಯ ಕೈಗೊಂಡಿದ್ದು, ಇದರನ್ವಯ ದೇಶಾದ್ಯಂತ 4 ಹಂತಗಳಲ್ಲಿ ಧ್ವನಿ ಎತ್ತಲು ನಿರ್ಧರಿಸಲಾಗಿತ್ತು. ಅದರಂತೆ ಮೊದಲ 2 ಹಂತಗಳು ಪೂರ್ಣಗೊಂಡಿವೆ. ಮೊದಲು ದೇಶದ (2026ರ ಏ.27) 5 ಕೋಟಿ ಜನರಿಂದ ಸಹಿ ಸಂಗ್ರಹಿಸಿ ಪ್ರಧಾನಿ ಮತ್ತು ರಾಷ್ಟ್ರಪತಿಗೆ 5400 ತಹಸೀಲ್ದಾರ್‌ರ ಮೂಲಕ ಮನವಿ ಸಲ್ಲಿಸಲಾಯಿತು.

ಇದಾದ ಬಳಿಕ ಜು.27ರಂದು 15 ಕೋಟಿ ಜನರಿಂದ ಸಹಿ ಸಂಗ್ರಹಿಸಿ ದೇಶದ ಎಲ್ಲ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಇದೀಗ 3ನೇ ಹಂತದಲ್ಲಿ 31 ಕೋಟಿ ಜನರಿಂದ ಸಹಿ ಸಂಗ್ರಹಿಸಿ ಡಿ.17ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ಕರ್ನಾಟಕದಲ್ಲಿ ಏನು?:

ಕರ್ನಾಟಕದಲ್ಲಿ ಈವರೆಗೆ 15 ಲಕ್ಷ ಜನ ಸಹಿ ಸಂಗ್ರಹದಲ್ಲಿ ಪಾಲ್ಗೊಂಡಿದ್ದು, ಡಿ.17ರೊಳಗೆ 3 ಕೋಟಿ ಜನರಿಂದ ಸಹಿ ಸಂಗ್ರಹಿಸಲಾಗುವುದು. ಬೆಂಗಳೂರಲ್ಲಿ 3 ಲಕ್ಷ ಜನ ಸೇರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಕರ್ನಾಟಕದಲ್ಲಿ ಇದರ ಹೊಣೆ ಹೊತ್ತಿರುವ ಆರೂಢ ಭಾರತೀ ಶ್ರೀಗಳು ತಿಳಿಸಿದ್ದಾರೆ.

3ನೇ ಹಂತ ಮುಗಿಯುವ ಒಳಗೆ ಬೇಡಿಕೆಗಳನ್ನು ಈಡೇರಿಸುತ್ತದೆ. ಒಂದು ವೇಳೆ ಈಡೇರಿಸದಿದ್ದಲ್ಲಿ ದೆಹಲಿಯಲ್ಲಿ ದೇಶದ ಎಲ್ಲ ಸಾಧು-ಸಂತರು ತೆರಳಿ ಶಾಂತಿಯುತ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಒಟ್ಟಿನಲ್ಲಿ ಗೋ ಸಮ್ಮಾನ ಆಹ್ವಾನ ಅಭಿಯಾನಕ್ಕೆ ಭಾರೀ ಬೆಂಬಲವಂತೂ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಬೇಡಿಕೆಗಳು:

- ದೇಶಾದ್ಯಂತ ಗೋಹತ್ಯೆ ನಿಷೇಧ ಜಾರಿಯಾಗಬೇಕು

- ಗೋವನ್ನು ರಾಷ್ಟ್ರಮಾತೆಯೆಂದು ಘೋಷಿಸಬೇಕು

- ದೇಶಿ ಗೋ ಸಂತತಿ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಪ್ರತ್ಯೇಕ ಸಚಿವಾಲಯ ಮಾಡಬೇಕು.

- ಸಾವಯವ ಕೃಷಿ, ಗೋಬರ್‌ ಗ್ಯಾಸ್‌ಗೆ ಹೆಚ್ಚಿನ ಒತ್ತು ನೀಡುವ ಮೂಲಕ ಗೋ ಸಂರಕ್ಷಣೆಗೆ ಒತ್ತು ನೀಡಬೇಕು.

ಕೋಟ್‌...

ಬೃಂದಾವನದಲ್ಲಿ 2025ರ ನವೆಂಬರ್‌ನಲ್ಲಿ ನಡೆದ ಸಾಧು-ಸಂತರ ಸಭೆಯಲ್ಲಿ ಗೋ ರಕ್ಷಣೆಗಾಗಿ ಅಭಿಯಾನ ನಡೆಸಲು ತೀರ್ಮಾನಿಸಲಾಗಿತ್ತು. 2 ಹಂತದಲ್ಲಿ 20 ಕೋಟಿ ಜನರಿಂದ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದೆ. 3ನೇ ಹಂತದಲ್ಲಿ ಮುಖ್ಯಮಂತ್ರಿಗಳಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಕರ್ನಾಟಕದಲ್ಲಿ 3 ಕೋಟಿ ಜನ ಸಹಿ ಸಂಗ್ರಹದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಗುರಿ ಇದೆ.

- ಆರೂಢ ಭಾರತೀ ಶ್ರೀಗಳು, ಅಭಿಯಾನ ಕರ್ನಾಟಕ ಉಸ್ತುವಾರಿ, ಗೋ ಸಮ್ಮಾನ್‌ ಅಭಿಯಾನ.