ಬರ ಪರಿಹಾರ ಕಾರ್ಯ ಸಮರ್ಪಕ ನಿರ್ವಹಣೆಗೆ ಸಚಿವ ಕೆ. ವೆಂಕಟೇಶ್ ಸೂಚನೆ

KannadaprabhaNewsNetwork |  
Published : Dec 23, 2023, 01:45 AM ISTUpdated : Dec 23, 2023, 01:46 AM IST
22ಸಿಎಚ್‌ಎನ್‌57ಕೊಳ್ಳೇಗಾಲ ಪಟ್ಟಣದ ಗುರುಭವನದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರ ನಿರ್ವಹಣೆ ಸಂಬಂಧ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಸಭೆ ನಡೆಸಿದರು. | Kannada Prabha

ಸಾರಾಂಶ

ಕುಡಿಯುವ ನೀರು, ಜಾನುವಾರಿಗೆ ಮೇವು ಸೇರಿದಂತೆ ಬರ ಪರಿಹಾರ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು

ಅಧಿಕಾರಿಗಳಿಗೆ ನಿರ್ದೇಶನ । ಬರ ನಿರ್ವಹಣೆ ಸಂಬಂಧ ಸಭೆ ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬರಗಾಲ ಪರಿಸ್ಥಿತಿ ಹಿನ್ನಲೆಯಲ್ಲಿ ಕುಡಿಯುವ ನೀರು, ಜಾನುವಾರಿಗೆ ಮೇವು ಸೇರಿದಂತೆ ಬರ ಪರಿಹಾರ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಗುರುಭವನದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರ ನಿರ್ವಹಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಡಿಯುವ ನೀರಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲಭ್ಯವಿರುವ ಅನುದಾನದಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು. ಬರಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಜಾನುವಾರಿಗೆ ಮೇವು ಕೊರತೆ ಕಾಡಬಾರದು. ಈಗಾಗಲೇ ಹೊರ ರಾಜ್ಯಗಳಿಗೆ ಮೇವು ಸಾಗಾಣೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ಮೇವು ಬೆಳೆಯಲು ಕಿಟ್‌ಗಳನ್ನು ಸಹ ವಿತರಿಸಲಾಗಿದೆ. ನೀರು ಲಭ್ಯವಿರುವ ಸ್ಥಳಗಳಲ್ಲಿ ಮೇವು ಬೆಳೆಯಲು ಉತ್ತೇಜಿಸಬೇಕು. ಮುಂಬರುವ ದಿನಗಳಿಗೆ ಅಗತ್ಯವಿರುವಷ್ಟು ಮೇವು ದಾಸ್ತಾನು ಮಾಡಲು ವಿಶೇಷ ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು.

‘ಪ್ರತಿ ಗ್ರಾಮಗಳಿಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ನೀವೇ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು. ತಾಲೂಕು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸಹ ಗ್ರಾಮ ಪಂಚಾಯಿತಿಗಳಿಗೆ ಅನಿರೀಕ್ಷಿತವಾಗಿ ಭೇಟಿ ಕೊಟ್ಟು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಗಳ ಪರಿಶೀಲನೆ ಮಾಡಬೇಕು’ ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಹಕಾರ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮಾತನಾಡಿ, ಬರಗಾಲ ಇರುವುದರಿಂದ ರೈತರು ಪಡೆದಿರುವ ಅಲ್ಪಾವಧಿ ಸಾಲವನ್ನು ಮಧ್ಯಮ ಅವಧಿ ಹಾಗೂ ಧೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸಲು ಅವಕಾಶವಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ರು.ವರೆಗೂ ಸಾಲ ಪಡೆಯಲು ಅವಕಾಶವಿದೆ. ಈ ಸೌಲಭ್ಯಗಳು ರೈತರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಕೋವಿಡ್ ಸಂಬಂಧ ನಿನ್ನೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮದ್ದೂರು ಚೆಕ್ ಪೋಸ್ಟ್ ಬಳಿ ಥರ್ಮಲ್ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ. ರೋಗ ಲಕ್ಷಣ ಕಂಡು ಬಂದವರಿಗೆ ತಪಾಸಣೆ ಮಾಡಲು ತಿಳಿಸಲಾಗಿದೆ. ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಲಾಗಿದೆ. ಮುಂಜಾಗ್ರತಾ ಕ್ರಮಗಳಿಗೆ ಗಮನಹರಿಸಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಬಂದಿದ್ದ ಜನರ ಅಹವಾಲುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಆಲಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಅರಣ್ಯ ಸಂರಕ್ಷಾಣಾಧಿಕಾರಿ ಡಾ. ಸಂತೋಷ್ ಕುಮಾರ್, ದೀಪಾ ಜೆ. ಕಂಟ್ರ್ಯಾಕ್ಟರ್, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಮಂಜುಳಾ ಉಪಸ್ಥಿತರಿದ್ದರು.

ಅಗತ್ಯ ಬಿತ್ತನೆ ಬೀಜ ಪೂರೈಸಿ

ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಬೇಕು. ವಿದ್ಯುತ್ ಸಂಬಂಧಿ ಸಮಸ್ಯೆಗಳು ಸಹ ಸಾಕಷ್ಟು ಕೇಳಿಬರುತ್ತಿದೆ. ಇದರ ಪರಿಹಾರವು ಆಗಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕೆಲಸಗಳಿಗೆ ಶೀಘ್ರ ಕೂಲಿ ಪಾವತಿ ಆಗಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರಗಳು ಸಮರ್ಪಕವಾಗಿ ಪೂರೈಕೆಯಾಗಬೇಕು. ಯಾವುದೇ ದುರುಪಯೋಗಕ್ಕೆ ಅವಕಾಶವಾಗಬಾರದು ಎಂದರು.

ಕೊಳ್ಳೇಗಾಲದಲ್ಲಿ ಬರ ನಿರ್ವಹಣೆ ಸಂಬಂಧ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸಭೆ ನಡೆಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ