ನಗರದ ಖಾಲಿ ನಿವೇಶನಗಳನ್ನು ಮಾಲೀಕರೇ ಸ್ವತಃ ಸ್ವಚ್ಛಗೊಳಿಸಿಕೊಳ್ಳುವ ಮೂಲಕ ಪಾಲಿಕೆಯಿಂದ ವಿಧಿಸುವ ಹೆಚ್ಚಿನ ವೆಚ್ಚದಿಂದ ತಪ್ಪಿಸಿಕೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನಿವೇಶನ ಮಾಲೀಕರಲ್ಲಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಖಾಲಿ ನಿವೇಶನಗಳನ್ನು ಮಾಲೀಕರೇ ಸ್ವತಃ ಸ್ವಚ್ಛಗೊಳಿಸಿಕೊಳ್ಳುವ ಮೂಲಕ ಪಾಲಿಕೆಯಿಂದ ವಿಧಿಸುವ ಹೆಚ್ಚಿನ ವೆಚ್ಚದಿಂದ ತಪ್ಪಿಸಿಕೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನಿವೇಶನ ಮಾಲೀಕರಲ್ಲಿ ಮನವಿ ಮಾಡಿದರು.
ನಗರದಾದ್ಯಂತ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ಅಭಿಯಾನದಡಿ ಖಾಲಿ ನಿವೇಶನಗಳನ್ನು ಸ್ವಚ್ಛ ಮಾಡುವ ಆಸ್ತಿ ಮಾಲೀಕರಿಗೆ ನೀಡಲಾಗಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಪಾಲಿಕೆಯಿಂದ ಖಾಲಿ ನಿವೇಶನ ಸ್ವಚ್ಛಗೊಳಿಸುವ ಕಾರ್ಯಕ್ಕೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರಿನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಜು.15ರಿಂದ ನಗರದಾದ್ಯಂತ ಸಾರ್ವಜನಿಕ ಸ್ಥಳಗಳ ಸಿ ಆ್ಯಂಡ್ ಡಿ ತ್ಯಾಜ್ಯ ಹಾಗೂ ಗಿಡ-ಗಂಟಿಗಳನ್ನು ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಖಾಸಗಿ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಲು ಆ.15ರವರೆಗೆ ಕಾಲಾವಕಾಶ ನೀಡಲಾಗಿತ್ತು. ಬಳಿಕ ಮತ್ತೊಂದು ವಾರ, ಅಂದರೆ ಆ.22ರವರೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು. ಈ ಅವಧಿಯಲ್ಲಿ ಸುಮಾರು ಶೇ.30ರಷ್ಟು ನಿವೇಶನ ಮಾಲೀಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಿಕೊಂಡಿದ್ದಾರೆ ಎಂದರು.
ನಗರದಲ್ಲಿ ಶೇ.70ರಷ್ಟು ಖಾಲಿ ನಿವೇಶನಗಳ ಮಾಲೀಕರು ಇದುವರೆಗೆ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಹೀಗಾಗಿ, ಇಂದಿನಿಂದ ಅಂತಹ ಖಾಲಿ ನಿವೇಶನಗಳನ್ನು ಪಾಲಿಕೆಯಿಂದಲೇ ಸ್ವಚ್ಛಗೊಳಿಸಲಾಗುವುದು. ಸ್ವಚ್ಛತಾ ಕಾರ್ಯಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟ ಮಾಲೀಕರಿಂದ ಆಸ್ತಿ ತೆರಿಗೆ ಮೂಲಕ ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಬಿಡಿಎ ಅಧ್ಯಕ್ಷರು ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್ ಜಿ., ಹೆಚ್ಚುವರಿ ಆಯುಕ್ತ ವೆಂಕಟಾಚಲಪತಿ ಉಪಸ್ಥಿತರಿದ್ದರು.
189 ಖಾಲಿ ನಿವೇಶನಗಳಿಗೆ ನೋಟಿಸ್
ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಆಸ್ತಿ ಮಾಲೀಕರಿಗೆ ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಸಂಬಂಧ ನಗರ ಪಾಲಿಕೆವಾರು ಒಟ್ಟು 189 ಖಾಲಿ ನಿವೇಶನಗಳಿಗೆ ನೋಟಿಸ್ ಅಂಟಿಸಲಾಗಿದ್ದು, ಇಂದಿನಿಂದ 5 ನಗರ ಪಾಲಿಕೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದೆ. ಕೇಂದ್ರ ನಗರ ಪಾಲಿಕೆ 53, ಉತ್ತರ ನಗರ ಪಾಲಿಕೆ 37, ಪಶ್ಚಿಮ ನಗರ ಪಾಲಿಕೆ 41, ಪೂರ್ವ ನಗರ ಪಾಲಿಕೆ 28, ದಕ್ಷಿಣ ನಗರ ಪಾಲಿಕೆ 30 ಸೇರಿ ಒಟ್ಟು 189 ಖಾಲಿ ನಿವೇಶನಗಳ ಮಾಲಿಕರಿಗೆ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.