)
ಕನ್ನಡಪ್ರಭ ವಾರ್ತೆ ಬೆಂಗಳೂರು
ಗುರುವಾರ ಕನ್ನಡ ಭವನದಲ್ಲಿ ಸಭೆ ನಡೆಸಿದ ಸಚಿವರು, ಮುಂದಿನ ಯೋಜನೆಗಳು ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಅಧ್ಯಕ್ಷರಿಂದ ಮಾಹಿತಿ ಪಡೆದುಕೊಂಡು ಹಂತ ಹಂತವಾಗಿ ಕಾರ್ಯಕ್ರಮ ಆಯೋಜನೆ, ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಬೆಳವಣಿಗೆಯ ಜತೆಗೆ, ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಕನ್ನಡದ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ನಡೆಯಬೇಕು. ಸಾಮಾಜಿಕ ಜಾಲತಾಣ ಸೇರಿ ಆಧುನಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಯುವಜನರನ್ನು ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಬೆಸೆಯುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.ಅಕಾಡೆಮಿ ಹಾಗೂ ಪ್ರಾಧಿಕಾರಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ತಮ್ಮ ಕಾರ್ಯಕ್ರಮಗಳನ್ನು ವಿಸ್ತರಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ಕಲಾವಿದರು, ಸಾಹಿತಿಗಳು, ಜಾನಪದ ಕಲಾವಿದರು ಹಾಗೂ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದರು.
ಆರ್ಟ್ ಗ್ಯಾಲರಿ, ಸೌದಿ ಅರೇಬಿಯಾದಲ್ಲಿ ವಿಶ್ವ ಬ್ಯಾರಿ ಸಮ್ಮೇಳನ ಆಯೋಜನೆ, ಕರಾವಳಿಯಲ್ಲಿ ಬಹು ಸಂಸ್ಕೃತಿ ಉತ್ಸವ, ಕನ್ನಡ ಭಾಷೆಯಲ್ಲಿರುವ ಜೈಮಿನಿ ಭಾರತವನ್ನು ತುಳು ಭಾಷೆಗೆ ಭಾಷಾಂತರಿಸಲು ಕ್ರಮ, ಯುವಕರನ್ನು ಸೆಳೆಯುವಂತಹ ಕಾರ್ಯಕ್ರಮ ಆಯೋಜನೆ, ಮಹಿಳಾ ಸಾಂಸ್ಕೃತಿಕ ಉತ್ಸವ ಹಾಗೂ ಹೆಚ್ಚಿನ ಅನುದಾನ ಸೇರಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ್ ಬಿಳಿಮಲೆ ಮಾತನಾಡಿ, ಕೆಲ ಐಎಎಸ್ ಅಧಿಕಾರಿಗಳಿಗೆ ಕನ್ನಡವೇ ಬರುವುದಿಲ್ಲ. ಪ್ರಾಧಿಕಾರದಿಂದ ಕನ್ನಡ ಕಲಿಕೆ ಎಂಬ ಹೆಸರಿನಲ್ಲಿ ಪರಿಣಿತರಿಂದ ಭಾಷೆ ಕಲಿಸಿಕೊಡಲಾಗುವುದು. ಜೊತೆಗೆ 1200 ಮದರಸಾಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸಬೇಕೆಂಬ ಯೋಜನೆ ಇದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸಚಿವರು, ಈ ಸಂಬಂಧ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.