ಧಾರವಾಡ: ಕಳೆದ ಎರಡು ದಿನಗಳಿಂದ ಜಿಲ್ಲೆಯ ಅಧಿಕಾರಿಗಳಿಗೆ ಸಚಿವ ಸಂತೋಷ ಲಾಡ್ ಬರೋಬ್ಬರಿ ಆಡಳಿತದ ಪಾಠ ಮಾಡುತ್ತಿದ್ದಾರೆ. ಸೋಮವಾರವಷ್ಟೇ ಜನತಾ ದರ್ಶನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಅಧಿಕಾರಿಗಳ ಮುಖಕ್ಕೆ ಹೊಡೆದಂತೆ ತಿಳಿಸಿದ್ದ ಸಚಿವರು, ಮಂಗಳವಾರ ಕೆಡಿಪಿ ಸಭೆಯಲ್ಲೂ ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿದರು.
ಇಲ್ಲಿಯ ಜಿಪಂ ಸಭಾಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆಗೆ ಅಗತ್ಯ ತಯಾರಿ ಇಲ್ಲದೆ ಬಂದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸಚಿವರು ತಮ್ಮ ಅಸಮಾಧಾನ ಹೊರಹಾಕಿದರು. ಸಭೆಯ ಬಹುತೇಕ ಸಮಯ ಅಧಿಕಾರಿಗಳ ಕಾರ್ಯವೈಖರಿಯನ್ನು ಖಂಡಿಸುವಲ್ಲಿ ಕಳೆದುಹೋಯಿತು.ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಹೊರತುಪಡಿಸಿ ಯಾವ ಇಲಾಖೆಯಲ್ಲೂ ನೌಕರರ ಸಂಖ್ಯೆ ಕಡಿಮೆ ಇಲ್ಲ. ನಾನಾ ಹುದ್ದೆಗಳ ಹೆಸರಿನಲ್ಲಿ ಹೆಚ್ಚುವರಿ ಸಿಬ್ಬಂದಿ ಇದೆ. ಆದರೆ, ಅವರ‍್ಯಾರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಿಮಗೆ ಕೊಡುವ ಸಂಬಳ ಕಡಿಮೆ ಇಲ್ಲ ಎಂದ ಲಾಡ್, ಶೇ. 100ರಷ್ಟು ಹುದ್ದೆ ತುಂಬಿದರೆ ಸರ್ಕಾರದ ಶೇ. 50ರಷ್ಟು ಹಣ ಖಾಲಿ ಆಗಲಿದೆ ಎಂದು ಹುದ್ದೆಗಳ ಭರ್ತಿ ಕುರಿತ ಡಿಎಚ್‌ಒ ಪ್ರಶ್ನೆಗೆ ಸರಿಯಾಗಿಯೇ ಉತ್ತರಿಸಿದರು.
ಅಧಿಕಾರಿ ಅಮಾನತು: ಇನ್ನು, ನೀರಾವರಿ ಇಲಾಖೆಯ ಸಚಿವರ ಹೆಸರು ಹೇಳಿಕೊಂಡು ಯಾವುದೇ ಮಾಹಿತಿ ನೀಡದೇ ಕೆಡಿಪಿ ಸಭೆಗೆ ಗೈರು ಉಳಿದ ಆರೋಪದ ಮೇರೆಗೆ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ದೇವರಾಜ ಶಿಗ್ಗಾಂವಿ ಅವರನ್ನು ಅಮಾನತುಗೊಳಿಸಿದ್ದು ಉಳಿದವರಿಗೆ ಪಾಠದಂತಾಯಿತು. ಅಧಿಕಾರಿಯ ಇಲಾಖೆಯ ಪ್ರಗತಿ ತೃಪ್ತಿಕರವಾಗಿರಲಿಲ್ಲ. ಸಣ್ಣನೀರಾವರಿ ಸಚಿವರು ಬೆಂಗಳೂರಿನಲ್ಲಿ ಇಲ್ಲದಿದ್ದರೂ ಅವರ ಹೆಸರು ಹೇಳಿಕೊಂಡು ಅನಧಿಕೃತವಾಗಿ ಅಧಿಕಾರಿ ಗೈರು ಉಳಿದಿದ್ದರು. ಆದ್ದರಿಂದ ಅಮಾನತು ಮಾಡಲಾಗಿದೆ ಎಂದರು.ಜಾಗೃತಿ ಮೂಡಿಸಲಿ: ಮಳೆಗಾಲ ಆರಂಭಕ್ಕೂ ಮುನ್ನ ಬೋರವೆಲ್, ಕೆರೆಗಳಿಗೆ ಕಲುಷಿತ ನೀರು ಸೇರದಂತೆ ಕ್ರಮ ವಹಿಸಬೇಕು. ತಾಪಂ ಇಒಗಳು ಈ ಬಗ್ಗೆ ಡಂಗೂರ ಸಾರಿ ಜಾಗೃತಿ ಮೂಡಿಸಬೇಕು. ಆಗ ಮಧ್ಯಪ್ರವೇಶಿಸಿದ ಧಾರವಾಡ ತಾಪಂ ಇಒ ಧಾರವಾಡ ತಾಲೂಕಿನ ಲೋಕೂರ ಗ್ರಾಮದಲ್ಲಿ 7 ಬೋರವೆಲ್ ನೀರಿನಲ್ಲಿ ನೈಟ್ರೇಟ್ ಅಂಶ ಇದೆ. ಅದು ಬಳಕೆಗೆ ಯೋಗ್ಯವಲ್ಲ ಎಂದಾಗ ಮಧ್ಯೆ ಪ್ರವೇಶಿಸಿದ ಸಚಿವರು ಹಾಗೂ ಜಿಲ್ಲಾಧಿಕಾರಿಗಳು, ಕುಡಿವ ನೀರಿನ ವಿಚಾರದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಈ ರೀತಿ ಕುಡಿಯುವ ನೀರಿಗೆ ಎಲ್ಲೆಲ್ಲಿ ಸಮಸ್ಯೆ ಇದೆ ಎಂಬುದನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.
ಖಾತ್ರಿಗೆ ಟಾರ್ಗೆಟ್: ದೇಶದ ಜಿಡಿಪಿ ಹೆಚ್ಚಳಕ್ಕೆ ಎನ್‌ಆರ್‌ಇಜಿ ಅನುಕೂಲವಾಗಿದ್ದು, ವಿಶ್ವಬ್ಯಾಂಕ್‌ನಿಂದ ಪ್ರಶಂಸೆಗೆ ಪಾತ್ರವಾಗಿದೆ. ಹೀಗಾಗಿ ಹೆಚ್ಚು ಮಾನವ ದಿನಗಳ ಸೃಜನೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆದ್ಯತೆ ಕೊಡಬೇಕು. 30 ಲಕ್ಷ ಮಾನವ ದಿನ ಸೃಜನೆ ಟಾರ್ಗೆಟ್ ಇಟ್ಟುಕೊಂಡು ಸಾಗಬೇಕು. 2 ಎಕರೆಗಿಂತ ಕಡಿಮೆ ಜಮೀನು ಹೊಂದಿದ ರೈತರು ನರೇಗಾ ಯೋಜನೆಯಡಿ ತಮ್ಮ ಹೊಲಗಳಲ್ಲಿ ಕೆಲಸ ಮಾಡಲು ಅನುಮತಿ ಪಡೆಯುವ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ಧಪಡಿಸಲು ತಿಳಿಸಿದರು.ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಶಾಲಾ ಕೊಠಡಿ, ಸಭಾ ಭವನದಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆದಾಗ ಹಲವು ಗುತ್ತಿಗೆದಾರರು ಶೇ. 25ಕ್ಕಿಂತ ಕಡಿಮೆಗೆ ಬಿಲ್ಲೋ ಟೆಂಡರ್ ಹಾಕುತ್ತಿದ್ದಾರೆ. ಇದು ಕಾಮಗಾರಿ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ನಾನಾ ಕಟ್ಟಡ ಉದ್ಘಾಟನೆಗೆ ಹೋದಾಗ ಟೈಲ್ಸ್ ಕಿತ್ತುಹೋಗಿರುವ ನಿರ್ದೇಶನಗಳಿವೆ ಎಂಬ ಬೇಸರ ವ್ಯಕ್ತಪಡಿಸಿದರು.
ಇದಲ್ಲದೇ ಸಭೆಯಲ್ಲಿ ಹು-ಧಾ ಅವಳಿ ನಗರದಲ್ಲಿನ 700 ಎಕರೆ ಸಿ.ಎ. ಲ್ಯಾಂಡ್‌ನಲ್ಲಿ 1.20 ಲಕ್ಷ ಸಸಿ ನೆಡಲು ಅವಕಾಶ ಇದೆ, ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನ ಬಳಸಿ, ಕೃಷಿ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ನೀಡಿ ರೈತರಿಗೆ ಪರಿಚಯಿಸುವ ಕೆಲಸವಾಗಲಿ ಎಂದರು.ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಇದ್ದರು.
ನಮ್ಮ ಹಣೆಬರಹ ಏನು?: ಕೆಡಿಪಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಪ್ರಗತಿ ಪರಿಶೀಲನೆ ವೇಳೆ ಆಂಧ್ರ ಮೂಲದ ಅಧಿಕಾರಿ ಉತ್ತರಿಸಲು ಬಂದರು. ಈ ವೇಳೆ ಅಧಿಕಾರಿ ಹಿಂದಿಯಲ್ಲಿ ಮಾತನಾಡಿದರೆ ಸಚಿವ ಲಾಡ್ ತೆಲಗು ಮಾತನಾಡಲಾರಂಭಿಸಿದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ಎನ್.ಎಚ್. ಕೋನರಡ್ಡಿ, ನೀವು ತೆಲಗು, ನೀವು ಹಿಂದಿ ಮಾತನಾಡಿದರೆ ನಮ್ಮ ಹಣೆಬರಹ ಏನು ಎಂದು ಹಾಸ್ಯದ ದಾಟಿಯಲ್ಲಿಯೇ ಚಟಾಕೆ ಹಾರಿಸಿದರು.