ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ರೋಡ್ ಶೋ

KannadaprabhaNewsNetwork |  
Published : May 25, 2025, 02:56 AM ISTUpdated : May 25, 2025, 11:28 AM IST
ಚಿಕ್ಕಮಗಳೂರಿಗೆ ಮೊದಲ ಬಾರಿಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ರೋಡ್‌ ಶೋನಲ್ಲಿ ಪಕ್ಷದ ಕಾರ್ಯಕರ್ತರು ಅದ್ದೂರಿಯ ಸ್ವಾಗತ ಕೋರಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ನಡುವೆ ಟಾಕ್ ಸಮರ ನಡೆದ ಬಳಿಕ ಮೊದಲ ಬಾರಿಗೆ ಕಾಫಿ ನಾಡು ಚಿಕ್ಕಮಗಳೂರಿಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರ್ಜರಿ ರೋಡ್ ಶೋ ನಡೆಸಿದರು.

  ಚಿಕ್ಕಮಗಳೂರು : ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ನಡುವೆ ಟಾಕ್ ಸಮರ ನಡೆದ ಬಳಿಕ ಮೊದಲ ಬಾರಿಗೆ ಕಾಫಿ ನಾಡು ಚಿಕ್ಕಮಗಳೂರಿಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರ್ಜರಿ ರೋಡ್ ಶೋ ನಡೆಸಿದರು.

ನಗರದಲ್ಲಿ ಶನಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುನ್ನ ಬೋಳ ರಾಮೇಶ್ವರ ದೇವಸ್ಥಾನದ ಆವರಣದಿಂದ ಹನುಮಂತಪ್ಪ ವೃತ್ತದ ವರೆಗೆ ತೆರೆದ ವಾಹನದಲ್ಲಿ ನಡೆಸಿದ ರೋಡ್ ಶೋದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿ ಸಚಿವೆಗೆ ಜೈಕಾರ ಹಾಕಿದರು.

ರೋಡ್ ಶೋ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ದಾರಿ ಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು. ಜೆಸಿಬಿ ಬಳಸಿ ಬೃಹತ್ ಹಾರ ಹಾಕುವ ಮೂಲಕ ಸ್ವಾಗತಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಾಗಿನ ಕೊಡಲು ಮುಂದಾದ ಬಿಜೆಪಿ:

ಚಿಕ್ಕಮಗಳೂರಿಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅರಿಶಿನ- ಕುಂಕುಮ, ಕಾಯಿ, ಬಳೆ ಸಹಿತ ಬಾಗಿನ ನೀಡಿ ಸ್ವಾಗತಿಸಲು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.

ಸಚಿವರು ನಗರದ ಪ್ರವಾಸಿ ಮಂದಿರದಲ್ಲಿರುವ ವಿಷಯ ತಿಳಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಹೂವು, ಹಣ್ಣು, ಬಳೆ, ಅರಿಸಿನ ಕುಂಕುಮ, ಲಕ್ಷ್ಮಿ ವಿಗ್ರಹ ಸೇರಿದಂತೆ ಬಾಗಿನ ಸಹಿತ ಪ್ರವಾಸಿ ಮಂದಿರದ ಎದುರು ತೆರಳಿದರು. ಆದರೆ ಪೊಲೀಸರು ಪ್ರವಾಸಿ ಮಂದಿರದ ಒಳಗೆ ಹೋಗಲು ಬಿಜೆಪಿ ಕಾರ್ಯಕರ್ತೆಯರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಬಾಗಿನ ಹಿಡಿದು ಕಾರ್ಯಕರ್ತೆಯರು ಪ್ರವಾಸಿ ಮಂದಿರದ ಗೇಟ್ ಬಳಿಯೇ ಕಾದು ನಿಂತಿದ್ದರು. ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳಿದರು. ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರತ್ತ ತಿರುಗಿಯೂ ನೋಡಲಿಲ್ಲ.

ಇದರಿಂದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತೆಯರು, ಸಚಿವರ ಮನೆಗೆ ಯಾರಾದರೂ ಹೋದರೆ ಅರಿಶಿನ ಕುಂಕುಮ ಕೊಡುವುದಿಲ್ಲವೇ ? ಕಾಂಗ್ರೆಸ್ಸಿಗರಿಗೆ ಅರಿಶಿನ ಕುಂಕುಮ ಕಂಡರೆ ಭಯ ಎಂದು ಲೇವಡಿ ಮಾಡಿ ತಾವು ತಂದಿದ್ದ ಬಾಗಿನವನ್ನು ಹಿರಿಯ ಬಿಜೆಪಿ ಕಾರ್ಯಕರ್ತೆಗೆ ನೀಡಿ ವಾಪಸ್ ತೆರಳಿದರು.

ಸೋಗಿನ ಬಾಗಿನದ ಅವಶ್ಯಕತೆಯಿಲ್ಲ:

ಪಾಪ ಅವರು ಸದನದಲ್ಲಿ ಮಾಡಬಾರದ ಅವಮಾನ ಮಾಡಿದ್ದಾರೆ. ಈಗ ಬಾಗಿನ ನೀಡಲು ಬಂದಿದ್ದಾರೆ. ಬಿಜೆಪಿಯವರ ಸೋಗಿನ ಬಾಗಿನದ ಅವಶ್ಯಕತೆ ನನಗಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನ ಜನತೆ ನನಗೆ ಮನೆ ಮಗಳಂತೆ ಸ್ವಾಗತ ಕೋರಿದ್ದಾರೆ. ಅದು ನನಗೆ ಸಾಕು ಎಂದರು.

ಬೆಳಗಾವಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಕಠಿಣ ಶಬ್ಧದಿಂದ ಖಂಡಿಸುತ್ತೇನೆ. ಆರೋಪಿಗಳು ಯಾರೇ ಆಗಿದ್ದರೂ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

ಪ್ರಕರಣವನ್ನು ಕಂಪ್ಲೀಟ್ ಆಗಿ ಟ್ರ್ಯಾಕ್ ಮಾಡುತ್ತಿದ್ದೇನೆ. ಸಂತ್ರಸ್ತೆ ಮನೆಯವರು ಹಾಗೂ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಜೊತೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿನ್ ಟು ಪಿನ್ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಅವರಿಗೆ ಕ್ಷಮೆ ಎನ್ನುವುದೇ ಇಲ್ಲ ಎಂದು ಹೇಳಿದರು.

ಬಿಜೆಪಿ ನಡೆಸುತ್ತಿರುವ ಕಲಬುರ್ಗಿ ಚಲೋ ಹೋರಾಟಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವವಿದೆ. ಅವರು ಎಲ್ಲಿಗೆ ಬೇಕಾದರೂ ಚಲೋ ಕೊಡಬಹುದು ಎಂದು ವ್ಯಂಗ್ಯವಾಡಿದರು.

24 ಕೆಸಿಕೆಎಂ 4ಚಿಕ್ಕಮಗಳೂರಿಗೆ ಮೊದಲ ಬಾರಿಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ರೋಡ್‌ ಶೋನಲ್ಲಿ ಪಕ್ಷದ ಕಾರ್ಯಕರ್ತರು ಅದ್ಧೂರಿಯ ಸ್ವಾಗತ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''