ಹಾನಗಲ್ಲ: ರೈತ ಸಂಘದ ಪ್ರತಿಭಟನೆಯನ್ನೂ ಒಳಗೊಂಡು ರೈತರ ಸಮಸ್ಯೆ, ಉತಾರದಲ್ಲಿ ಸರಕಾರ ಸರಕಾರಿ ಎಂಬ ತಿದ್ದುಪಡಿ, ಬರಗಾಲ ಘೋಷಣೆ, ರೈತರ ಜಮೀನಿಗೆ ದಾರಿ ವ್ಯವಸ್ಥೆ, ಮನೆಯಿಲ್ಲದಿರುವವರ ಬಡವರ ಮನೆ ಬೇಡಿಕೆಯೂ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರು ಮನವಿ ಸಲ್ಲಿಸಿ ಒತ್ತಾಯಿಸಿದರು.
೬ ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ. ಆಶ್ರಯ ಯೋಜನೆಯಲ್ಲಿ ಕಟ್ಟಿಕೊಂಡ ಮನೆಗೆ ಒಂದೇ ಬಿಲ್ ಬಂದಿದೆ. ಮುಂದಿನ ಬಿಲ್ ಬೇರೆಯಾವರ ಖಾತೆಗೆ ಹೋಗಿದೆ. ಕಾರ್ಮಿಕರ ಕಾರ್ಡಗಳು ಬಾಕಿ ಇವೆ. ಸಾವಿರಾರು ಜನರ ಕಾರ್ಮಿಕರ ವಿವಾಹ ಪ್ರೋತ್ಸಾಹ ಧನ ಬಾಕಿ ಇದೆ. ಕಾರ್ಮಿಕ ಇಲಾಖೆ ಕೌಂಟರ್‌ನಲ್ಲಿ ನಮ್ಮ ಅಹವಾಲು ತೆಗೆದುಕೊಳ್ಳುವವರೇ ಇಲ್ಲ ಕಾರ್ಮಿಕರ ಹೆಸರಿನ ಬೋಗಸ್ ಕಾರ್ಡು ರದ್ದಾಗಬೇಕು ಎಂಬ ಅಹವಾಲುಗಳು ಸಲ್ಲಿಕೆಯಾದವು. ಬರಗಾಲ ಘೋಷಣೆಯಲ್ಲಿ ಹಾನಗಲ್ಲ ತಾಲೂಕು ಬಿಟ್ಟು ಹೋಗಿದೆ ಎಂಬ ದೂರಿಗೆ ಶಾಸಕ ಶ್ರೀನಿವಾಸ್ ಮಾನೆ ಉತ್ತರಿಸಿ, ಶೀಘ್ರ ಹಾನಗಲ್ಲ ತಾಲೂಕು ಬರಗಾಲ ಘೋಷಣೆಯಾಗಲಿದೆ. ರೈತರಿಗೆ ಆತಂಕ ಬೇಡ ಎಂದು ತಿಳಿಸಿದರು.
ಮಧ್ಯವರ್ತಿಗಳು: ಕಂದಾಯ ಇಲಾಖೆ ಸೇರಿದಂತೆ ತಾಲೂಕಿನ ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಗಂಭೀರವಾಗಿ ಪರಿಹಾರ ನೀಡುವಲ್ಲಿ ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳೇ ಇರುವುದಿಲ್ಲ. ಕಂದಾಯ ಗ್ರಾಮಗಳಲ್ಲಿ ಇನ್ನೂ ದಾರಿ ಸಮಸ್ಯೆ ಇವೆ. ಹಾನಗಲ್ಲಿನ ಎನ್‌ಎ ಸೈಟ್‌ನಲ್ಲಿ ರಸ್ತೆ ಅತಿಕ್ರಮಣವಾಗಿದೆ. ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಧರ್ಮಾ ನದಿಗೆ ತಡೆಗೋಡೆ ನಿರ್ಮಿಸಬೇಕು. ತಾಲೂಕಿನಲ್ಲಿನ ಹೈವೇಗಳಿಂದ ಸರ್ವಿಸ್ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ರಾಮತೀರ್ಥಹೊಸಕೊಪ್ಪದ ಬಳಿಯ ಕಾಡಿನಲ್ಲಿ ರೈತರಿಗಾಗಿ ಜಮೀನಿಗೆ ಹೋಗಲು ದಾರಿ ಮಾಡಿ ಕೊಡಬೇಕು ಎಂಬ ಸಮಸ್ಯೆ ಬೇಡಿಕೆಗಳು ಸಚಿವರು, ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ಸಲ್ಲಿಕೆಯಾದವು.ಇರಾಕ್ ಒಂದ್ ಮನಿ ಕೊಡ್ರಿ: ಹಾನಗಲ್ಲ ತಾಲೂಕು ಸಾಂವಸಗಿ ಗ್ರಾಮದ ಸರೋಜಾ ಎಂಬ ಮಹಿಳೆ ದಿಢೀರನೆ ವೇದಿಕೆ ಏರಿ ನನಗೆ ಒಂದ ಮನಿ ಕೊಡ್ರಿ. ನನಗೆ ಗಂಡಿಲ್ಲ, ಜಗಾ ಇಲ್ಲ, ಮನಿ ಇಲ್ಲ. ಇರೋ ಒಬ್ಬ ಮಗ ಕೂಲಿ ಮಾಡ್ತಾನ. ನನಗೆ ಯಾರ ಆಸರೇನು ಇಲ್ಲ. ನನಗೊಂದು ಮನಿ ಕೊಡ್ರಿ ಎಂದು ದುಂಬಾಲು ಬಿದ್ದಳು. ಕಂಡವರೆಲ್ಲರಿಗೆ ಕೈ ಮುಗಿದ ನೀವಾರ ಹೇಳ್ರಿ, ಹೇಳ್ರಿ ಎಂದು ಕಣ್ಣೀರಿಡುತ್ತ ಗೋಗರೆಯುತ್ತಿದ್ದಳು. ಶಾಸಕ ಶ್ರೀನಿವಾಸ್ ಮಾನೆ ಇವರನ್ನು ಕರೆದು ಈ ಬಾರಿ ಸರ್ಕಾರದ ಮನೆ ಬಂದಾಗ ಖಂಡಿತ ಮನೆ ಹಾಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಕೂಡಲೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆಯನ್ನು ಸಚಿವ ರುದ್ರಪ್ಪ ಲಮಾಣೆ, ಶಾಸಕ ಶ್ರೀನಿವಾಸ್ ಮಾನೆ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ನೀಡಿದರು. ಯಾವುದೇ ಗದ್ದಲ ಗಲಾಟೆಗಳಿಲ್ಲದೆ, ಅಧಿಕಾರಿಗಳ ಸಮರ್ಪಕ ಪರಿಹಾರದ ಘೋಷಣೆಗಳೊಂದಿಗೆ ಪ್ರಜಾಸೇವಾ ಆಂದೋಲನಕ್ಕೆ ತೆರೆಯಾಯಿತು.