ಲಕ್ಷ್ಮೇಶ್ವರ ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಶನಿವಾರ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸಿದರು.

ಲಕ್ಷ್ಮೇಶ್ವರ: ದೇಶದ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಮನಸ್ಸನ್ನು ಅರಿತು ಬೋಧಿಸುವ ಶಿಕ್ಷಕರನ್ನು ಸಮಾಜ ಎಂದೂ ಮರೆಯುವುದಿಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಿವೃತ್ತಿ ಹೊಂದುವ ಶಿಕ್ಷಕರು ಪದೇ ಪದೇ ಬಿಇಒ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಒಂದೇ ಸಾರಿ ಅವರ ಕಾಗದಪತ್ರಗಳಿಗೆ ಸಹಿ ಹಾಕಿ ಕಳುಹಿಸುವ ಮೂಲಕ ಅವರಿಗೆ ಸೂಕ್ತ ಗೌರವ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಎನ್‌ಪಿಎಸ್‌ ಸರ್ಕಾರಿ ನೌಕರರ ಪರವಾಗಿ ಹೋರಾಡುವ ಕಾರ್ಯದಲ್ಲಿ ನಾನೂ ಪಾಲ್ಗೊಂಡು ಒಪಿಎಸ್‌ ಆಗುವಂತೆ ಮಾಡುವಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಶಿಕ್ಷಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿ ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ರೂವಾರಿಗಳಾಗಿದ್ದಾರೆ. ವಿವಿಧ ದೇಶಗಳಲ್ಲಿ ಶಿಕ್ಷಕರಿಗೆ ಉನ್ನತ ಗೌರವ ನೀಡುವ ಸಂಪ್ರದಾಯ ಇರುವುದು ಸಂತಸದ ಸಂಗತಿಯಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ನಿವೃತ್ತಿ ವೇತನ ಇಲ್ಲವಾಗಿದೆ. ಅದಕ್ಕಾಗಿ ನಿವೃತ್ತ ಶಿಕ್ಷಕರಿಗೆ ಸರ್ಕಾರ ನಿವೃತ್ತಿ ವೇತನ ನೀಡುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.

ಈ ವೇಳೆ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿ, ಸರ್ಕಾರಿ ಶಾಲೆಗಳು ಅಧೋಗತಿಗೆ ಹೋಗುತ್ತಿರುವುದು ನೋವಿನ ಸಂಗತಿ. ಖಾಸಗಿ ಶಾಲೆಗಳು ವಿಜೃಂಭಿಸುತ್ತಿದ್ದು ಶಿಕ್ಷಣ ಇಲಾಖೆ ಚಿಂತನೆ ಮಾಡಬೇಕಾದ ಸಂಗತಿ. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ. ದೇಶದ ಭವಿಷ್ಯವಾಗಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾಗಿದೆ ಎಂದು ಹೇಳಿದರು.

ಹರಿಹರದ ನಿವೃತ್ತ ಉಪನ್ಯಾಸಕ ಪ್ರೊ. ಎಚ್.ಎ. ಬಿಕ್ಷಾವರ್ತಿಮಠ ಉಪನ್ಯಾಸ ನೀಡಿದರು.

ಸಭೆಯ ಸಾನ್ನಿಧ್ಯವನ್ನು ಮುಕ್ತಿ ಮಂದಿರ ಶ್ರೀಗಳು ವಹಿಸಿಕೊಂಡಿದ್ದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ. ಆರ್.ಎಂ. ಶಿರಹಟ್ಟಿ. ಮಂಜುನಾಥ ಕೊಕ್ಕರಗುಂದಿ, ಮಕಾಂದಾರ, ಎಲ್.ಎಸ್. ಅರಳಹಳ್ಳಿ, ಅಕ್ಷರ ದಾಸೋಹದ ಅಧಿಕಾರಿ ರಾಮನಗೌಡರ, ಆನಂದ ಮುಳಗುಂದ. ಬಿಜ್ಜೂರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ, ನಂದೆಣ್ಣವರ, ಬಿ.ಎಸ್‌. ಹರ್ಲಾಪುರ, ಎಸ್‌.ಕೆ. ಪಾಟೀಲ ಇದ್ದರು. 2026ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಬಿಇಒ ಶಿವರಾಜ್ ಸೀಮಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೇಶ್ವರ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಭರಮಗೌಡರ ಸ್ವಾಗತಿಸಿದರು. ಡಿ.ಎಚ್. ನಿಂಗರೆಡ್ಡಿ, ರತ್ನಾ ಕುಂಬಾರ, ಎನ್‌.ಎನ್. ಶಿಗ್ಲಿ, ಶ್ರೀಪಾಲ ಗೋಂಘಡಿ ಕಾರ್ಯಕ್ರಮ ನಿರೂಪಿಸಿದರು. ಶಿರಹಟ್ಟಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸವಗೌಡ ಪಾಟೀಲ ವಂದಿಸಿದರು.