- ಎಲ್ಲ ಕಾರ್ಯಕರ್ತರ ಮೇಲೆ ಬಿಡುತ್ತೇನೆ । ಯುಗಾದಿ ಚಂದ್ರ ದರ್ಶನ ನಂತರ ದಕ್ಷಿಣ ಕ್ಷೇತ್ರ ಅಭ್ಯರ್ಥಿ ಬಗ್ಗೆ ಚರ್ಚೆ: ಗಣಿ ಸಚಿವ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ತಮ್ಮ ಪುತ್ರ ಸಮರ್ಥಗೆ ಟಿಕೆಟ್ ಕೇಳಲು ಹೋಗಿಲ್ಲ. ಹೈಕಮಾಂಡ್ ಹೇಳಿದಂತೆ ಎಲ್ಲರೂ ನಡೆಯೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉಪ ಸಮರದ ಟಿಕೆಟ್ ಕುತೂಹಲವನ್ನು ಮತ್ತೆ ಯುಗಾದಿ ಹಬ್ಬದವರೆಗೂ ವಿಸ್ತರಿಸಿದ್ದಾರೆ.ನಗರದ ಹಳೆ ಭಾಗದಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ₹10.61 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದುಗ್ಗಮ್ಮನ ಜಾತ್ರೆ ಮುಗಿಯಿತು. ಈಗ ಯುಗಾದಿ ಹಬ್ಬ ಬರುತ್ತಿದ್ದು, ಚಂದ್ರನ ದರ್ಶನ ಮಾಡೋಣ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ. ಎಲ್ಲ ವರ್ಗಗಳ ಬಡವರಿಗೂ ಸ್ಪಂದಿಸಿ, ಎಲ್ಲರಿಗೂ ಗ್ಯಾರಂಟಿ ನೀಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೂ ₹100 ಕೋಟಿ ಅನುದಾನ ಘೋಷಿಸಿರುವುದಕ್ಕೆ ಅಭಿನಂದಿಸುತ್ತೇನೆ. ದಕ್ಷಿಣ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡಿದ್ದೇವೆ. ಇನ್ನೂ ಹೆಚ್ಚು ಕೆಲಸ ಮಾಡಲು ಅನುಕೂಲವಾಗಿದೆ. 1991ರಿಂದ 2003ರವರೆಗೆ ಶೇ.90ರಷ್ಟು ರಸ್ತೆಯಾಗಿವೆ. ಚರಂಡಿ, ರಾಜ ಕಾಲುವೆಗಳು ಆಗಿವೆ. ಹಿಂದುಳಿದ ಪ್ರದೇಶದಲ್ಲಿ ಹಿಂದೆ ಮಳೆ ನೀರು, ಚರಂಡಿ ನೀರು ನುಗ್ಗುತ್ತಿದ್ದಂತೆ ಈಗಲೂ ನುಗ್ಗುತ್ತಿದೆಯಾ ಎಂದು ಸಚಿವರು ಪ್ರಶ್ನಿಸಿದರು.
- - -
- ಆರೋಗ್ಯ ಸೇವೆ ಪ್ರಸ್ತಾವನೆಗೆ ಸಚಿವ ದಿನೇಶ ಗುಂಡೂರಾವ್ ಸಮ್ಮತಿ: ಎಸ್ಸೆಸ್ಸೆಂ ದಾವಣಗೆರೆ: ರಾಜ್ಯ ಸರ್ಕಾರ ಮತ್ತು ಬಾಪೂಜಿ ವಿದ್ಯಾಸಂಸ್ಥೆ ಜಂಟಿಯಾಗಿ ಇಲ್ಲಿನ ಹಳೇ ಭಾಗದ ತಮ್ಮ ಸಂಸ್ಥೆಯ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ವಿನೂತನ ಪ್ರಯತ್ನವಾಗಿದ್ದು, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸಹ ಸಮ್ಮತಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಬಾಪೂಜಿ ವಿದ್ಯಾಸಂಸ್ಥೆ ಜಂಟಿ ಗೌರವ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ಸರ್ಕಾರದಿಂದ ಅಗತ್ಯ ಸಿಬ್ಬಂದಿ ಕೊಡಬೇಕು. ಸರ್ಕಾರದ ಸೌಲಭ್ಯಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲು ಜಾಯಿಂಟ್ ವೆಂಚರ್‌ನ ಹೊಸ ಪ್ರಸ್ತಾವನೆ ನೀಡಿದ್ದಕ್ಕೆ ಸರ್ಕಾರವೂ ಒಪ್ಪಿಗೆ ಸೂಚಿಸಿದೆ. ಆದಷ್ಟು ಬೇಗನೆ ಈ ಸೇವೆಯನ್ನು ಕಾರ್ಯರೂಪಕ್ಕೆ ತರುತ್ತೇವೆ. ಆಸ್ಪತ್ರೆಯು 400 ಬೆಡ್ ಸೇವೆ ನೀಡಲಿದ್ದು, ಅಲ್ಲಿ ಒಟ್ಟು 600 ಬೆಡ್ ಇವೆ. ಗೈನಾಕಾಲಜಿ, ನ್ಯೂರೋಲಾಜಿ, ಪಿಡಿಯಾಡ್ರಿಕ್ಸ್, ನ್ಯೂರೋ ಸೈನ್ಸ್ ಆರಂಭಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
(ಕೋಟ್)
- ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ.