ಸಚಿವ ಮಂಕಾಳ ವೈದ್ಯ ನಮ್ಮವರೇ: ಶಾಸಕ ಹೆಬ್ಬಾರ

KannadaprabhaNewsNetwork |  
Published : Oct 16, 2025, 02:01 AM IST
ಪೊಟೋ15ಎಸ್.ಆರ್‌.ಎಸ್‌2 (ಮಾಧ್ಯಮದವರ ಜತೆ ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಮಾತನಾಡಿದರು.) | Kannada Prabha

ಸಾರಾಂಶ

ನಾವೆಲ್ಲರೂ ಸಹಕಾರಿ ಕ್ಷೇತ್ರದ ಮೂಲಕವೇ ರಾಜಕೀಯದಲ್ಲಿ ಬೆಳೆದುಬಂದಿದ್ದೇವೆ. ಹಾಗೆಂದು ರಾಜಕೀಯದಲ್ಲಿ ಇದ್ದೇವೆ ಎಂಬ ಕಾರಣಕ್ಕೆ ಸಂಘರ್ಷ ಮಾಡಿಕೊಳ್ಳಬೇಕಾದ ಅಗತ್ಯವೇನಿಲ್ಲ.

ಯಲ್ಲಾಪುರ ಪ್ರಾಥಮಿಕ ಪತ್ತುಗಳ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ

ಕನ್ನಡಪ್ರಭ ವಾರ್ತೆ ಶಿರಸಿ

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶಿವರಾಮ ಹೆಬ್ಬಾರ್ ನಮ್ಮವರೇ ಎಂದಿದ್ದಾರೆ. ನಾನೂ ಅದನ್ನೇ ಹೇಳುತ್ತೇನೆ, ಮಂಕಾಳ ವೈದ್ಯ ಸಹ ನಮ್ಮವರೇ. ರಾಜಕಾರಣದಲ್ಲಿ ಅಸಾಧ್ಯ ಎಂಬುದಿಲ್ಲ. ಆದರೆ, ರಾಜಕಾರಣ ಅಡಿಪಾಯವೇ ಸಹಕಾರಿ ಕ್ಷೇತ್ರವಾಗಿದೆ. ನಾವೆಲ್ಲರೂ ಸಹಕಾರಿ ಕ್ಷೇತ್ರದ ಮೂಲಕವೇ ರಾಜಕೀಯದಲ್ಲಿ ಬೆಳೆದುಬಂದಿದ್ದೇವೆ. ಹಾಗೆಂದು ರಾಜಕೀಯದಲ್ಲಿ ಇದ್ದೇವೆ ಎಂಬ ಕಾರಣಕ್ಕೆ ಸಂಘರ್ಷ ಮಾಡಿಕೊಳ್ಳಬೇಕಾದ ಅಗತ್ಯವೇನಿಲ್ಲ ಎಂದು ಕೆಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಬುಧವಾರ ಯಲ್ಲಾಪುರ ಪ್ರಾಥಮಿಕ ಪತ್ತುಗಳ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರ ಜತೆ ಮಾತನಾಡಿ, ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ (ಕೆಡಿಸಿಸಿ) ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದರೆ ಒಳ್ಳೆಯ ಬೆಣವಣಿಗೆ. ಆದರೆ, ನಾನೊಬ್ಬನೇ ಪ್ರಯತ್ನಿಸಿದರೆ ಸಾಧ್ಯವಿಲ್ಲ. ಇತರ ಆಕಾಂಕ್ಷಿಗಳೂ ಸಹಮತ ತೋರಬೇಕು. ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರ ಪಾವಿತ್ರತೆ ಉಳಿಸಿಕೊಂಡು ಬಂದಿದೆ. ಕೆಡಿಸಿಸಿ ಬ್ಯಾಂಕ್ ಚುನಾವಣೆಗೆ ಆಕಾಂಕ್ಷಿಗಳು ಹೆಚ್ಚಿರುವುದನ್ನು ರಾಜಕೀಯ ಮೇಳೈಸಿದೆ ಎನ್ನಲು ಸಾಧ್ಯವಿಲ್ಲ. ಬ್ಯಾಂಕಿನ ಬೆಳವಣಿಗೆಯಲ್ಲಿ ತಾನೂ ಒಬ್ಬ ಭಾಗಿದಾರ ಆಗಬೇಕು ಎಂಬ ಆಕಾಂಕ್ಷೆ ಎಲ್ಲರಿಗೂ ಸಹಜ. ಈ ಹಿನ್ನೆಲೆ ಸ್ಪರ್ಧೆಗೆ ಆಸಕ್ತಿ ಹೆಚ್ಚಿದೆ. ಚುನಾವಣಾಧಿಕಾರಿ ಕೆ.ವಿ. ಕಾವ್ಯಾರಾಣಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವವರಿಂದಲೇ ಕಾನೂನು ಸಲಹೆ ಪಡೆದುಕೊಳ್ಳುತ್ತಿರುವುದು ಸರಿಯಲ್ಲ. ಜಂಟಿ ನಿರ್ದೇಶಕರಿಂದ ಅವರು ಸಲಹೆ ಪಡೆದುಕೊಳ್ಳಲಿ. ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೂ ನಾನು ಮಾತನಾಡಿದ್ದೇನೆ. ಚುನಾವಣೆ ನಿಷ್ಪಕ್ಷವಾಗಿ, ಕಾನೂನು ಬದ್ಧವಾಗಿ ಚುನಾವಣೆ ನಡೆಯಲಿ, ನಾಮನಿರ್ದೇಶನದಲ್ಲಿ ಅನಗತ್ಯ ಸಂಗತಿ ತರುವುದು, ವ್ಯತಿರಿಕ್ತ ವಾತಾವರಣ ಸೃಷ್ಟಿಸುವುದು ಬ್ಯಾಂಕಿನ ಇತಿಹಾಸದಲ್ಲಿ ಈ ಹಿಂದೆ ನಡೆದಿದಲ್ಲ, ಇನ್ನು ಮುಂದೂ ನಡೆಯಬಾರದು. ಜಿಲ್ಲಾಧಿಕಾರಿ, ಚುನಾವಣಾ ಅಧಿಕಾರಿ ಈ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಎಂಬ ಭರವಸೆ ನನಗಿದೆ. ನಿಷ್ಪಕ್ಷಪಾತ, ನಿರ್ಭೀತಿಯಿಂದ ಚುನಾವಣೆ ನಡೆಯುವ ವಾತಾವರಣವನ್ನು ಅಧಿಕಾರಿಗಳು ನಿರ್ಮಿಸುತ್ತಾರೆ ಎಂಬ ಭರವಸೆ ಇದೆ ಎಂದರು.

ಕೆಡಿಸಿಸಿ ರೈತರು ಮತ್ತು ಸಹಕಾರಿಗಳ ಬ್ಯಾಂಕ್. ಬ್ಯಾಂಕ್ ಚುನಾವಣೆ ಇತಿಹಾಸದಲ್ಲಿ ಅಧಿಕಾರ ದುರ್ಬಳಕೆ ಇದುವರೆಗೂ ಆಗಿಲ್ಲ. ಈಗ ಮತ್ತು ಮುಂದೂ ಸಹ ಆಗಬಾರದು ಎಂಬುದು ನಮ್ಮ ಆಶಯ. ಯಾರೇ ಚುನಾವಣೆಗೆ ನಿಲ್ಲಲಿ. ಗೆಲ್ಲುವವನು ಗೆಲ್ಲುತ್ತಾನೆ, ಸೋಲುವವನು ಸೋಲುತ್ತಾನೆ. ಆದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಬಾರದು. ಕಳೆದ 5 ವರ್ಷದ ಆಡಳಿತದಿಂದ ಬ್ಯಾಂಕ್ ಬದಲಾವಣೆಯ ಪರ್ವ ಕಂಡಿದೆ. ಪ್ರಗತಿಯ ಹೆಜ್ಜೆ ಇಟ್ಟಿದೆ. ಜಿಲ್ಲೆಯ ಕೃಷಿಕ, ಕೃಷ ಕಾರ್ಮಿಕ, ಉದ್ಯೋಗಿಗಳ, ಠೇವಣಿದಾರರ ಬದ್ಧತೆ ನಮ್ಮ ಮೂಲ ಬಂಡವಾಳ. ಡಾ. ಪಂಡಿತ್ ಅವರು ಹಾಕಿಕೊಟ್ಟ ಮಾರ್ಗದರ್ಶನದಂತೆ ನಾವು ನಡೆದಿದ್ದೇವೆ. ಬ್ಯಾಂಕ್ ಇದೇ ರೀತಿ ಇನ್ನಷ್ಟು ಎತ್ತರಕ್ಕೆ ಏರಿ ರಾಜ್ಯ ಮಟ್ಟಕ್ಕೇರಬೇಕು. ಠೇವಣಿದಾರರ ವಿಶ್ವಾಸ ಉಳಿಸುವ ಕಾರ್ಯ ಆಗಿದೆ. ಇನ್ನು ಮುಂದೆಯೂ ಇದೇ ಪ್ರಗತಿ ಸಾಧಿಸಲಿ ಎಂದರು.

ಕೆಡಿಸಿಸಿ ಹಿಂದಿನ ಆಡಳಿತದ ಅವಧಿಯಲ್ಲಿ ಬೇಕಾಬಿಟ್ಟಿ ವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆ ಪ್ರಶ್ನೆಗೆ ಉತ್ತರಿಸಿದ ಅವರು, ಕೆಡಿಸಿಸಿ ಬ್ಯಾಂಕ್ ಆರ್‌ಬಿಐ ಅಡಿಯಲ್ಲಿದೆ. ಬ್ಯಾಂಕು ಪ್ರತಿ ವರ್ಷ ಆಡಿಟ್‌ಗೆ ಒಳಗಾಗುತ್ತಿದೆ. ಪ್ರತಿಯೊಂದು ವಿಭಾಗವನ್ನೂ ಪರಿಶೀಲನೆ ಮಾಡಲಾಗುತ್ತದೆ. ನಾವೇನೂ ಕದ್ದು ಮುಚ್ಚಿ ಯಾವ ವ್ಯವಹಾರವನ್ನೂ ಇಲ್ಲಿ ಮಾಡಲು ಸಾಧ್ಯವಿಲ್ಲ. ಚುನಾವಣೆಯ ಸಂದರ್ಭದಲ್ಲಿ ಇಂತಹ ಆರೋಪಗಳು ಸಾಮಾನ್ಯವಾಗಿದ್ದು, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯತೆ ಇಲ್ಲ. ಆರೋಪ ಬಂದ ಹಿನ್ನೆಲೆ ಅದು ಆಡಿಟ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌