ಕಾರವಾರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಾರ್ವಜನಿಕರ ಹಾಗೂ ಶ್ರೀಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರದ್ದು ಸಂಪೂರ್ಣ ಕುತಂತ್ರದ ರಾಜಕಾರಣ ಎಂದು ಸಮಾಜ ಸೇವಕ ಮಾಸ್ತಪ್ಪ ನಾಯ್ಕ ಆರೋಪಿಸಿದರು.
ಮಾ. 10ರಂದು ಹೊನ್ನಾವರದಲ್ಲಿ ನಡೆದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧದ ಬೃಹತ್ ಜನಸಮಾವೇಶದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಯ ಬಗ್ಗೆ ಮಾತನಾಡಿಲ್ಲ ಎಂದು ಮಂಕಾಳ ವೈದ್ಯ ಅವರು ಶ್ರೀಗಳ ಸಮ್ಮುಖದಲ್ಲೇ ಸುಳ್ಳು ಹೇಳಿದ್ದಾರೆ. ಸಚಿವರಿಗೆ ಒಂದು ವೇಳೆ ಕಿವಿ ಕೇಳಿಸದಿದ್ದರೆ ಕಿವಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿಕೊಂಡು ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಯ ಬಗ್ಗೆ ನೀಡಿರುವ ಹೇಳಿಕೆಯ ವಿಡಿಯೋವನ್ನು ಮತ್ತೊಮ್ಮೆ ಸ್ಪಷ್ಟವಾಗಿ ಕೇಳಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ 2016ರಲ್ಲೇ ಡಿಪಿಆರ್ ಸಿದ್ಧಪಡಿಸಲು ವೆಪ್ಕೋ ಸಂಸ್ಥೆಗೆ ವಹಿಸಲಾಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರವೇ ಬಜೆಟ್‌ನಲ್ಲಿ ₹10,500 ಕೋಟಿ ಮಂಜೂರು ಮಾಡಿದೆ. ಅಂದೂ ಇಂದೂ ಶಾಸಕರಾಗಿದ್ದ ಸಚಿವರು ಈ ಮಾರಕ ಯೋಜನೆಯನ್ನು ಆಗಲೇ ಏಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದರು.ಇದೇ ವೇಳೆ ಸಚಿವರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಪಟ್ಟಿ ಮಾಡಿದ ಮಾಸ್ತಪ್ಪ ನಾಯ್ಕ, ಮರಣ ಹೊಂದಿದವರ ಶೇರನ್ನು ಅಕ್ರಮವಾಗಿ ಖರೀದಿಸಿದ್ದಾರೆ. ಅಲ್ಲದೇ ಟೊಂಕಾ ಬಂದರು ಯೋಜನೆ ವಿಚಾರದಲ್ಲಿ ಸಚಿವರು ಅಧಿಕಾರಕ್ಕೆ ಬರುವ ಮೊದಲು ಒಂದು ಮಾತು, ಬಂದ ಮೇಲೆ ಒಂದು ಮಾತು ಆಡುತ್ತಿದ್ದಾರೆ. ಸಚಿವರಿಗೆ ಅಭಿವೃದ್ಧಿಗಿಂತ ರಾಜಕೀಯವೇ ಮುಖ್ಯವಾಗಿದೆ ಎಂದರು.
ಪ್ರಮುಖರಾದ ನವೀನ ಭಟ್ಕಳ, ವಿಶ್ವ ತೆಂಗಿನಗುಂಡಿ, ಕೃಷ್ಣ ನಾಯ್ಕ ಬೈಲೂರು, ಅಶೋಕ ನಾಯ್ಕ ಆಸರಕೇರಿ, ವೆಂಕಟೇಶ, ನಾಗರಾಜ ನಾಯಕ ಬಲಸೆ, ಮಂಜು ಹಿನ್ನೂರು, ರವಿ ಹೊನ್ನಾವರ ಹಾಗೂ ಚೇತನ ನಾಯ್ಕ ಮುರ್ಡೇಶ್ವರ ಇದ್ದರು.