ಮೀನು ಸಂತತಿ ಉಳಿವಿಗೆ ಕಾಯ್ದೆ ತರಲು ಸಿದ್ಧ: ಸಚಿವ ಮಂಕಾಳು ವೈದ್ಯ

KannadaprabhaNewsNetwork |  
Published : Jul 11, 2024, 01:38 AM IST
ಭಟ್ಕಳದ ಗೊರ್ಟೆಯಲ್ಲಿ ರಾಜ್ಯ ಮೀನುಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಮೀನುಗಾರ ಕೃಷಿಕರ ದಿನಾಚರಣೆ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಸಚಿವ ಮಂಕಾಳು ವೈದ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ಮೀನುಗಾರಿಕೆ ಇಲಾಖೆಯನ್ನು ಮೀನುಗಾರ ಸ್ನೇಹಿಯನ್ನಾಗಿ ಮಾಡಲಾಗಿದೆ. ಮೀನುಗಾರಿಕಾ ಇಲಾಖೆಯಲ್ಲಿ ಮೀನುಗಾರರ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಭಟ್ಕಳ: ಮೀನು ಸಂತತಿ ಉಳಿಸಲು ಪಕ್ಷಾತೀತವಾಗಿ ಚಿಂತಿಸಿ ಕಾಯ್ದೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಮೀನುಗಾರರು ಸಂಘಟಿತರಾಗಿ ಬಂದರೆ ಮೀನಿನ ಸಂತತಿ ಉಳಿಸಲು ಕಾಯ್ದೆ ರೂಪಿಸಲಾಗುವುದು ಎಂದು ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳು ಎಸ್ ವೈದ್ಯ ತಿಳಿಸಿದರು.

ತಾಲೂಕಿನ ಗೊರ್ಟೆಯ ಎಂ.ಎಂ. ರೆಸಾರ್ಟಿನಲ್ಲಿ ಬುಧವಾರ ಮೀನುಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಮೀನುಗಾರ ಕೃಷಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೀನುಗಾರಿಕೆ ಇಲಾಖೆಯನ್ನು ಮೀನುಗಾರ ಸ್ನೇಹಿಯನ್ನಾಗಿ ಮಾಡಲಾಗಿದೆ. ಮೀನುಗಾರಿಕಾ ಇಲಾಖೆಯಲ್ಲಿ ಮೀನುಗಾರರ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಯಾವುದೇ ಯೋಜನೆ ಇರಲಿ, ರಾಜಕಾರಣಕ್ಕೋಸ್ಕರ ರೂಪಿಸುವುದು ಸರಿಯಲ್ಲ. ಎಲ್ಲರಿಗೂ ಉಪಯೋಗವಾಗುವ ಹಾಗೆ ರೂಪಿಸುವುದು ಅಗತ್ಯವಿದೆ ಎಂದರು. ಈ ಹಿಂದೆ ರಾಜ್ಯ ಬಜೆಟ್‌ನಲ್ಲಿ ಮೀನುಗಾರಿಕಾ ಅಭಿವೃದ್ಧಿಗೆ ಕೇವಲ ₹300 ಕೋಟಿ ಅನುದಾನ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಮೀನುಗಾರರಿಗೆ ₹3 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದೆ. ರಾಜ್ಯ ಸರ್ಕಾರ ಮೀನುಗಾರರಿಗೆ ಡೀಸೆಲ್, ಸೀಮೆಎಣ್ಣೆಗೆ ಸಬ್ಸಿಡಿ ನೀಡಿ ಮೀನುಗಾರರಿಗೆ ನೆರವಾಗುತ್ತಿದ್ದರೂ ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಮೀನುಗಾರರಿಗೆ ಯಾವುದೇ ಸಬ್ಸಿಡಿ ನೀಡಲಿಲ್ಲ. ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಮೃತಪಟ್ಟ ಮೀನುಗಾರರಿಗೆ ನೀಡುವ ಪರಿಹಾರವನ್ನು ₹6 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಿಸಲಾಗಿದೆ. 24 ಗಂಟೆಗಳಲ್ಲಿ ಕುಟುಂಬಕ್ಕೆ ಪರಿಹಾರ ತಲುಪಿಸುವ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಪೆಟ್ಟಾದರೆ ಅಂಥವರಿಗೆ ಸೂಕ್ತ ಚಿಕಿತ್ಸೆ, ಕೈ, ಕಾಲು ಶಾಶ್ವತವಾಗಿ ಕಳೆದುಕೊಂಡಲ್ಲಿ ₹4 ಲಕ್ಷ ನೀಡಲಾಗುತ್ತಿದೆ ಎಂದರು.

ಮೀನುಗಾರರು ಬೋಟು ಪರವಾನಗಿ ಸೇರಿದಂತೆ ಯಾವುದಕ್ಕೂ ಇಲಾಖೆಗೆ ಹೋಗಿ ಕೈಕಟ್ಟಿ ನಿಲ್ಲಬಾರದು ಎನ್ನುವ ಉದ್ದೇಶದಿಂದ ತ್ವರಿತವಾಗಿ ಪರವಾನಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮೀನುಗಾರರಿಗೋಸ್ಕರ ಮತ್ಸ್ಯಾಶ್ರಯ ಯೋಜನೆಯಡಿಲ್ಲಿ 10 ಸಾವಿರ ಮನೆ ಮಂಜೂರು ಮಾಡಲಾಗಿದೆ. ಮೀನುಗಾರರಿಗೆ ಅಪಘಾತ, ಅವಘಡದ ಸಂದರ್ಭದಲ್ಲಿ ತಕ್ಷಣ ಆಸ್ಪತ್ರೆಗೆ ಸಾಗಿಸಲು ಸೀ ಆ್ಯಂಬುಲೆನ್ಸ್‌ ಯೋಜನೆ ಜಾರಿ ತರಲಾಗುತ್ತಿದೆ. ಇದಕ್ಕೆ ಆರಂಭಿಕವಾಗಿ ₹5 ಕೋಟಿ ತೆಗೆದಿರಿಸಲಾಗಿದೆ.

ಬೈಂದೂರಿನಲ್ಲಿ ₹100 ಕೋಟಿ ವೆಚ್ಚದಲ್ಲಿ ಸೀ ಪಾರ್ಕ್‌ ಯೋಜನೆ ಅನುಷ್ಠಾಗೊಳಿಸಲಾಗುತ್ತಿದೆ. ಇದಕ್ಕೆ ಈಗಾಗಲೇ ಜಾಗ ನೋಡಲಾಗಿದ್ದು, ಇದು ಅನಷ್ಠಾನಗೊಂಡರೆ ₹1 ಸಾವಿರ ಕೋಟಿ ವ್ಯವಹಾರ ಆಗಲಿದ್ದು, 1000ಕ್ಕೂ ಅಧಿಕ ಜನರಿಗೆ ಉದ್ಯೋಗ ಸಿಗಲಿದೆ ಎಂದರು.

ಮತ್ಸ್ಯವಾಹಿನಿ ಯೋಜನೆಯನ್ನು ಆರಂಭಿಕವಾಗಿ ಬೆಂಗಳೂರು ಮತ್ತಿತರ ಕಡೆ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ತಾಲೂಕು, ಜಿಲ್ಲೆಯಲ್ಲೂ ಆರಂಭಿಸಲಾಗುತ್ತದೆ. ಮೀನುಗಾರಿಕೆ ಉಳಿಸಿ ಬೆಳೆಸಲು ಸಂಶೋಧನೆ ಅಗತ್ಯವಿದ್ದು, ಹೊನ್ನಾವರದ ಮಂಕಿಯಲ್ಲಿ ಮೀನುಗಾರಿಕಾ ಸಂಶೋಧನಾ ಕೇಂದ್ರ ಆರಂಭಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೀನುಗಾರರಿಗೆ ಬಾಕಿ ಇದ್ದ ಸಂಕಷ್ಟ ಪರಿಹಾರ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಮೀನುಗಾರರಿಗೆ ಮತ್ತಷ್ಟು ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ಜಿಲ್ಲಾ ಮೀನುಗಾರಿಕೆ ಫೆಡರೇಶನ್‌ನ ನಿರ್ದೇಶಕ ವಿಠ್ಠಲ್ ದೈಮನೆ, ಮದನಕುಮಾರ ಬೈಂದೂರು, ಕುಮಟಾದ ಜೈ ವಿಠ್ಠಲ ಕುಬಾಲ ಮಾತನಾಡಿ, ಮಂಕಾಳು ವೈದ್ಯ ಅವರು ಮೀನುಗಾರಿಕಾ ಸಚಿವರಾದ ಮೇಲೆ ಮೀನುಗಾರಿ ಇಲಾಖೆ ಸಾಕಷ್ಟು ಬದಲಾವಣೆ ಆಗಿ ಮೀನುಗಾರರಿಗೆ ಹೆಚ್ಚಿನ ಸೌಲಭ್ಯ ಸಿಗುವಂತಾಗಿದೆ ಎಂದರು.

ಕೆಎಫ್‌ಡಿಸಿ ಎಂಡಿ ಕೆ. ಗಣೇಶ, ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ, ಕಡಲ ಉತ್ಪನ್ನ ಅಭಿವೃದ್ಧಿ ಪ್ರಾಧಿಕಾರ ಉಪನಿರ್ದೇಶಕ ರಾಜಕುಮಾರ ನಾಯಕ, ಜಂಟಿ ನಿರ್ದೇಶಕ ಸಿದ್ದಯ್ಯ, ಜಿಲ್ಲಾ ಮೀನುಗಾರಿಕಾ ನಿರ್ದೇಶಕ ಪ್ರತೀಕ ಶೆಟ್ಟಿ, ಭಟ್ಕಳ ತಾಪಂ ಕಾರ್ಯನಿರ್ವಹಣಾಧಿಕಾರಿ ವಿ.ಡಿ. ಮೊಗೇರ, ಬೆಳಕೆ ಗ್ರಾಪಂ ಅಧ್ಯಕ್ಷ ಜಗದೀಶ ನಾಯ್ಕ, ಸಂಕಷ್ಟ ಪರಿಹಾರ ನಿಧಿ ಸದಸ್ಯ ವೆಂಕಟ್ರಮಣ ಮೊಗೇರ, ನಾರಾಯಣ ಮೊಗೇರ, ಭಟ್ಕಳ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ಮುಂತಾದವರಿದ್ದರು.

ಜಿಲ್ಲಾ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಬಿಪಿನ್ ಬೋಪಣ್ಣ ಸ್ವಾಗತಿಸಿದರು. ರಾಜ್ಯ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಮೊಗೇರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆಯ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಮತ್ಸ್ಯಾಶ್ರಯ ಯೋಜನೆಯ ಆದೇಶ ಪತ್ರ ಮತ್ತು ಸಂಕಷ್ಟ ಪರಿಹಾರ ನಿಧಿಯ ಚೆಕ್‌ಅನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೂಪಾ ಮೌದ್ಗಿಲ್‌ ಮಾನಹಾನಿ ಕೇಸ್‌: ರೋಹಿಣಿ ಅರ್ಜಿ ವಜಾ
ವಿರೋಧದ ನಡುವೆ ಮದುವೆ : ಸಿಟ್ಟಲ್ಲಿ ಅಳಿಯನ ಮನೆಗೆ ಮಾವನಿಂದ ಬೆಂಕಿ!