ಮಹಿಳಾಪರ ಯೋಜನೆಗಳ ವ್ಯವಸ್ಥಿತ ಜಾರಿ ಅಗತ್ಯ

KannadaprabhaNewsNetwork | Published : Jul 11, 2024 1:38 AM

ಸಾರಾಂಶ

ದೊಡ್ಡಬಳ್ಳಾಪುರ: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆದು ಯೋಜನೆಯ ಸೌಲಭ್ಯ ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಮಹಿಳೆಯರಿಗೆ ಅರಿವು ಅಗತ್ಯ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ತಿಳಿಸಿದರು.

ದೊಡ್ಡಬಳ್ಳಾಪುರ: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆದು ಯೋಜನೆಯ ಸೌಲಭ್ಯ ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಮಹಿಳೆಯರಿಗೆ ಅರಿವು ಅಗತ್ಯ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ, ಮಹಿಳಾ ಉದ್ದಿಮೆದಾರರೊಂದಿಗೆ ಸಂವಾದ ಹಾಗೂ ಇತರೆ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಅಧಿಕಾರಿಗಳು ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವಂತೆ ಅಧಿಕಾರಿಗಳು ಕೆಲಸ ಮಾಡಬೇಕು. ದಮನಿತರ, ಧ್ವನಿ ಇಲ್ಲದವರ, ಬಡವರ, ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದ ಯೋಜನೆಗಳು ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಸ್ತ್ರೀ ಶಕ್ತಿ ಸಂಘಗಳು, ಇತರೆ ಸ್ವಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ಒದಗಿಸಿ ಅರ್ಥಿಕವಾಗಿ ಸಬಲರನ್ನಾಗಿ ಮಾಡುವುದು ನಿಗಮದ ಗುರಿ ಎಂದು ತಿಳಿಸಿದರು.

ಉದ್ಯೋಗಿನಿ, ಸಂಜೀವಿನಿ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ, ಅಮೃತ ಯೋಜನೆ, ಸಮೃದ್ಧಿ ಯೋಜನೆ, ಗೃಹಲಕ್ಷ್ಮಿ ಮೈತ್ರಿ, ಮನಸ್ವಿನಿ ಮುಂತಾದ ಯೋಜನೆಗಳನ್ನು ಸರ್ಕಾರ ಮಹಿಳೆಯರಿಗಾಗಿ ಜಾರಿಗೆ ತಂದಿದೆ. ಮಹಿಳೆಯರಿಗಾಗಿ ಸರ್ಕಾರ ತಂದಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗಳಲ್ಲಿ ಪಡೆದುಕೊಳ್ಳಬಹುದು. ಉದ್ಯೋಗಿನಿ, ಸಂಜೀವಿನಿ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ, ಅಮೃತ ಯೋಜನೆ, ಸಮೃದ್ಧಿ ಯೋಜನೆಗಳಡಿ ಸಾಲ ಸೌಲಭ್ಯ, ಸಹಾಯಧನ ಸೇರಿದಂತೆ ಮಹಿಳಾ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳಿವೆ. ಮಹಿಳೆಯರು ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಇದೇ ವೇಳೆ ನಿಗಮ ಅಧ್ಯಕ್ಷೆ ಜಿ.ಪದ್ಮಾವತಿ ಮಹಿಳಾ ಉದ್ದಿಮೆದಾರರೊಂದಿಗೆ ಸಂವಾದ ನಡೆಸಿ ಕುಂದು ಕೊರತೆ ಆಲಿಸಿ, ಉದ್ದಿಮೆಗಳ ಬಗೆಗಿನ ಅಭಿಪ್ರಾಯ ಪಡೆದುಕೊಂಡರು. ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು.

ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಅಕ್ಕಮಹಾದೇವಿ, ಜಿಪಂ ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮುದ್ದಣ್ಣ, ಜಿಲ್ಲಾ ನಿರೂಪಣಾಧಿಕಾರಿ ಅನಿತಾ ಲಕ್ಷ್ಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಹೇಶ್, ನಿರೀಕ್ಷಕರಾದ ವಿಜಯ ಕುಮಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ ಇತರರಿದ್ದರು.

9ಕೆಡಿಬಿಪಿ6-

ಬೆಂ.ಗ್ರಾ. ಜಿಲ್ಲಾಡಳಿತ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು.

Share this article