-ಸಚಿವ ಡಾ. ಅಜಯ್ ಮಾಹಿತಿ । ಧರ್ಮಪುರ ಭಾಗದ ಜಲಭದ್ರತೆ ಬಲಪಡಿಸುವ ಮಹತ್ವದ ಹೆಜ್ಜೆ
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಧರ್ಮಪುರ ಹೋಬಳಿಯ 14 ಕೆರೆಗಳನ್ನು ತುಂಬಿಸುವ ₹35 ಕೋಟಿ ಅಂದಾಜು ಮೊತ್ತದ ಏತ ನೀರಾವರಿ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.ಹಿರಿಯೂರು ತಾಲೂಕು ಮಳೆಯ ಕೊರತೆ ಮತ್ತು ನಿರಂತರ ಅಂತರ್ಜಲ ಕುಸಿತವನ್ನು ಎದುರಿಸುತ್ತಿರುವ ಪ್ರದೇಶವಾಗಿದ್ದು, ಧರ್ಮಪುರ ಹೋಬಳಿಯ ಹಲವಾರು ಕೆರೆಗಳು ಹಲವು ವರ್ಷಗಳಿಂದ ಸಮರ್ಪಕವಾಗಿ ತುಂಬಿಲ್ಲ. ಈ ಭಾಗದ ಕೆರೆ-ಕಟ್ಟೆಗಳು ಜನರು ಹಾಗೂ ರೈತರ ಜೀವನಾಡಿಯಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಪುನರ್ಭರ್ತಿ ಮಾಡುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಭಾಗದಲ್ಲಿ ಕುಡಿಯುವ ನೀರಿನ ಭದ್ರತೆ, ಅಂತರ್ಜಲ ಪುನರ್ಭರ್ತಿ ಹಾಗೂ ಕೃಷಿ ಚಟುವಟಿಕೆಗಳಿಗೆ ದೀರ್ಘಕಾಲಿಕ ನೆರವು ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶ. ಕೆರೆಗಳನ್ನು ತುಂಬಿಸುವುದರಿಂದ ಕೇವಲ ಮೇಲ್ಮೈ ನೀರಿನ ಲಭ್ಯತೆ ಮಾತ್ರವಲ್ಲ, ಸುತ್ತಮುತ್ತಲಿನ ಬೋರ್‌ವೆಲ್‌ಗಳು ಹಾಗೂ ಕೃಷಿಭೂಮಿಗಳಿಗೂ ನೇರ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಯೋಜನೆಯ ಮೂಲಕ ವೇದಾವತಿ ನದಿಯಿಂದ 66.19 ಎಂ.ಸಿ.ಎಫ್.ಟಿ ನೀರನ್ನು ಎತ್ತಿ ಕೆರೆಗಳಿಗೆ ತುಂಬಿಸಲು ಉದ್ದೇಶಿಸಲಾಗಿದೆ. ಯೋಜನೆಯ ವ್ಯಾಪ್ತಿಯಲ್ಲಿ ಹಲಗಲದ್ದಿ, ಮದ್ದಿಹಳ್ಳಿ, ಮುದ್ದಿಹಳ್ಳಿ ಕಿವುಡನಕಟ್ಟೆ, ಖಂಡೇನಹಳ್ಳಿ, ಅರಳಿಕೆರೆ-1, ಅರಳಿಕೆರೆ-2, ಅರಳಿಕೆರೆ-3, ಅರಳಿಕೆರೆ-4, ಹೊಸಕೆರೆ, ಬೇತೂರು, ಬೆನಕನಹಳ್ಳಿ, ಸಕ್ಕರ ಕೆರೆ-1 ಮತ್ತು ಸಕ್ಕರ ಕೆರೆ-2 ನ್ನು ಒಳಗೊಂಡಿದೆ.