ದಾವಣಗೆರೆ: ಬೆಳೆ ಪರಿಹಾರ ಸಾಲ ಮನ್ನಾ ಆಗುತ್ತದೆ ಎಂಬ ಕಾರಣಕ್ಕಾಗಿ ಮೇಲಿಂದ ಮೇಲೆ ಬರ ಬರಲಿ ಎಂದು ರೈತರು ಆಶಿಸುತ್ತಾರೆ ಎಂದು ಹೇಳಿಕೆಯನ್ನು ನೀಡುವ ಮೂಲಕ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ರೈತರನ್ನು ಅವಮಾನಿಸಿದ್ದಾರೆ. ಇದು ಅವರ ರೈತ ವಿರೋಧಿ ಮನಸ್ಥಿತಿ. ಇಂತಹ ಸಚಿವರನ್ನು ರಾಜ್ಯ ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು ಎಂದು ದಾವಣಗೆರೆ ಜಿಲ್ಲಾ ರೈತರ ಒಕ್ಕೂಟ ಸರ್ಕಾರಕ್ಕೆ ಆಗ್ರಹಿಸಿತು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೋಳೇನಹಳ್ಳಿ ಬಿ.ಎಂ.ಸತೀಶ್ ಮಾತನಾಡಿ, ಈ ಹಿಂದೆ ಶಿವಾನಂದ ಪಾಟೀಲ್, 5 ಲಕ್ಷ ರು. ಪರಿಹಾರದ ಆಸೆಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ ಎಂದು ರೈತನ ಜೀವನವನ್ನು ಅಣುಕ ಮಾಡಿದ್ದಾರೆ. ರೈತರನ್ನು ಕೀಳಾಗಿ ಕಾಣುವುದು ಇವರ ಸಂಸ್ಕೃತಿ ಇದು ಖಂಡನೀಯ ಎಂದು ತಿಳಿಸಿದರು.ರಾಜ್ಯದಲ್ಲಿ 123 ವರ್ಷಗಳಲ್ಲಿ ಕಂಡರಿಯದ ಭೀಕರ ಬರ ತಲೆದೋರಿದ್ದು, ರಾಜ್ಯದಲ್ಲಿ 48.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಆದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಬರ ಪರಿಹಾರ ನೀಡಿ, ರೈತರ ಸಂಕಷ್ಟಕ್ಕೆ ಧಾವಿಸಿಲ್ಲ. ರೈತರಿಗೆ ಧೈರ್ಯ ಹೇಳಿ ವಿಶ್ವಾಸ ಮೂಡಿಸುವ ಬದಲು ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿರುವುದು ಅಹಂಕಾರದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷ್ಮಿ ಎಂದು ರೈತರು ಪೂಜಿಸುವ ನೋಟ್‌ಗಳನ್ನು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮೈಮೇಲೆ ತೂರಿಸಿಕೊಂಡು, ಅವರ ಕಾಲುಗಳ ಬೂಟು ಅಡಿ ನೋಟುಗಳು ಬಿದ್ದಿರುವ ವಿಡಿಯೋ ವೈರಲ್ ಆಗಿತ್ತು. ಸದಾ ಮೋಜು ಮಸ್ತಿಯಲ್ಲಿ ಮುಳುಗೋ ಸಚಿವರಿಗೆ ಬರಗಾಲದಿಂದ ತತ್ತರಿಸಿರುವ ರೈತರ ಸಂಕಷ್ಟ ಅರ್ಥವಾಗುವುದಿಲ್ಲ ಎಂದು ಕಿಡಿಕಾರಿದರು.ಬರ ಪರಿಹಾರ ಕೇಳಲು ದೆಹಲಿಗೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಸತಿ ಸಚಿವ ಜಮೀರ್ ಅಹಮದ್ ಅವರು ಐಷಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿರುವುದು ಕಂಡುಬಂದಿದೆ. ಅಧಿಕಾರದ ಅಮಲಿನಲ್ಲಿರುವ ಶಿವಾನಂದ ಪಾಟೀಲ್‌ರಂತಹ ಸಚಿವರು ನಾಟಕವಾಡಿ ಕಣ್ಣೀರು ಭರಿಸಿಕೊಳ್ಳಬಹುದು. ಆದರೆ ಹಗಲಿರಲು ಕಷ್ಟಪಟ್ಟು ಬೆವರು ಸುರಿಸುವ ರೈತನ ಬೆವರು ಭರಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ಸರ್ಕಾರದ ಎಲ್ಲಾ ಸಚಿವರು ಅರಿಯಬೇಕು ಎಂದರು.
ಒಂದು ವಾರದೊಳಗೆ ಸಚಿವ ಶಿವಾನಂದ ಪಾಟೀಲ್‌ರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತರು ತೀವ್ರ ಹೋರಾಟ ಮಾಡಲಾಗುವುದು. ಇದಲ್ಲದೆ ವಿಳಂಬ ಧೋರಣೆ ಬದಿಗಿರಿಸಿ, ಬರ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ತಕ್ಷಣ ಜಮಾ ಮಾಡಬೇಕು. ಕೃಷಿ ಸಚಿವ ಕೃಷ್ಣ ಬೈರೇಗೌಡ್ರ ಕಳೆದ ಒಂದು ತಿಂಗಳಿನಿಂದ ಪ್ರೋಟ್ ದತ್ತಾಂಶ ಎಂದು ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದು ಸರ್ಕಾರದ ರೈತ ವಿರೋಧಿ ಧೋರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಬೆಳವನೂರು ನಾಗೇಶ್ವರರಾವ್, ಆರನೇಕಲ್ಲು ವಿಜಯಕುಮಾರ್, ಧನಂಜಯ ಕಡ್ಲೇಬಾಳು, ರಾಜಶೇಖರ ನಾಗಪ್ಪ, ವಾಸನ ಬಸವರಾಜಪ್ಪ, ಗೋಪನಾಳು ಕರಿಬಸಪ್ಪ, ಚಿಕ್ಕಬೂದಿಹಾಳು ಭಗತ್ ಸಿಂಗ್, ಮಳಲ್ಕರೆ ಎಂ.ಕಲ್ಲಪ್ಪ, ನಿಂಗಪ್ಪ ಇತರರು ಇದ್ದರು.