ಕನ್ನಡಪ್ರಭ ವಾರ್ತೆ ಕೋಲಾರಒಂದು ಸಮುದಾಯವನ್ನು ಮೆಚ್ಚಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ದೇಶಪ್ರೇಮಿ ಆರ್‌ಎಸ್‌ಎಸ್ ಪಥಸಂಚಲನ, ಸಭೆಗಳನ್ನು ನಿಷೇಧಿಸಲು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸಚಿವ ಮರಿ ಖರ್ಗೆ ಅಲಿಯಾಸ್ ಪ್ರಿಯಾಂಕ್ ಖರ್ಗೆ ಕೂಡಲೇ ಬಹುಸಂಖ್ಯಾತ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಒತ್ತಾಯಿಸಿದರು.ಕೋಲಾರದಲ್ಲಿ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ತಮ್ಮ ಪುತ್ರನೊಂದಿಗೆ ಗಣವೇಷದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಇಂತಹ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿದರು.
ರಸ್ತೆ, ಪಾರ್ಕ್ ಖರ್ಗೆ ಆಸ್ತಿಯಲ್ಲಬಕ್ರಿದ್, ರಂಜಾನ್ ಪ್ರಾರ್ಥನೆಗೆ ನಡುರಸ್ತೆ, ಬಸ್, ರೈಲ್ವೆ, ವಿಮಾನ ನಿಲ್ದಾಣದಲ್ಲೂ ಜಾಗ ನೀಡುವ ಈ ಮರಿ ಖರ್ಗೆ ಸಚಿವರಾಗಿರುವ ಸರ್ಕಾರ ಬಹುಸಂಖ್ಯಾತ ಹಿಂದೂಗಳ ಕಾರ್ಯಕ್ರಮ ಹಾಗೂ ಗಣವೇಷಧಾರಿಗಳು ದೊಣ್ಣೆ ಹಿಡಿದು ಪಥಸಂಚಲನ ಮಾಡಲು ನಿಷೇಧ ಹೇರಬೇಕೆಂದು ಹೇಳವು ರಸ್ತೆ, ಪಾರ್ಕ್‌ಗಳು ಪ್ರಿಯಾಂಕ ಖರ್ಗೆ ಅವರ ಸ್ವಂತ ಆಸ್ತಿಯಲ್ಲ ಎಂದು ಟೀಕಿಸಿದರು. ತಂದೆಗೆ ವಯಸ್ಸಾಗಿದೆ ಮುಂದೆ ತನ್ನ ಸ್ಥಾನ ಉಳಿಯಲ್ಲ, ಶಾಸಕನೂ ಆಗಲ್ಲ ಎಂದು ಭಯಗೊಂಡಿರುವ ಪ್ರಿಯಾಂಕ ಖರ್ಗೆ, ಹಿಂದೂ ಧರ್ಮ, ಸಂಸ್ಕೃತಿ ವಿರುದ್ದ ಮಾತನಾಡಿ ಪಕ್ಷದಲ್ಲಿ ಅಲ್ಪಾಯುಷಿಯಾಗಿರುವ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು. ಮನೆಗೆ ಬೆಂಕಿ ಇಟ್ಟವರು ಯಾರು?
ಮರಿ ಖರ್ಗೆಯವರೇ ನಿಮ್ಮ ಪೂರ್ವಜರಿದ್ದ ಮನೆಗೆ ಬೆಂಕಿ ಇಟ್ಟು ಸುಟ್ಟವರು ಯಾರು, ಎಸ್‌ಡಿಪಿ,ಪಿಎಫ್‌ಐಗಳು ವಿಧಾನಸೌಧದಲ್ಲಿ ಪಾಕ್‌ಗೆ ಜೈಕಾರ ಕೂಗಿದವರು ಯಾರು, ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟೋರು ಯಾರು, ಅಂತಹವರಿಗೆ ರಕ್ಷಣೆ ನೀಡುತ್ತಿರುವವರು ನಿಜವಾದ ತಾಲಿಬಾನಿಗಳಲ್ಲವೇ ಎಂಬುದನ್ನು ಅರ್ಥಮಾಡಿಕೊಂಡು ನಿಮಗೆ ದೇಶಪ್ರೇಮವಿದ್ದರೆ ಇಂತಹವರನ್ನು ನಿಷೇಧಿಸಿ ಎಂದು ಸಲಹೆ ನೀಡಿದರು. ಈ ರಾಜ್ಯದ ಜನತೆ ಈಗಾಗಲೇ ನೀವು ತಾಲಿಬಾನ್ ಏಜೆಂಟ್ ಎಂದು ಹೇಳುತ್ತಿದ್ದಾರೆ, ಭಾರತ- ಚೀನಾ ಯುದ್ದದಲ್ಲಿ ಆರ್‌ಎಸ್‌ಎಸ್ ಪಾತ್ರದ ಕುರಿತು ಅರಿತುಕೊಳ್ಳಿ, ನಿಮ್ಮದೇ ಪಕ್ಷದ ನೆಹರು ಪಿಎಂ ಆಗಿದ್ದಾಗ ಗಣರಾಜ್ಯೋತ್ಸವ ಪರೆಡ್‌ನಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೂ ಅವಕಾಶ ನೀಡಿದ್ದನ್ನು ನೆನಪಿಸಿಕೊಳ್ಳಿ, ದೇಶದ ಜನರಿಗೆ ತೊಂದರೆಯಾದರೆ ಅಲ್ಲಿ ಆರ್‌ಎಸ್‌ಎಸ್ ಪ್ರತ್ಯಕ್ಷವಾಗುತ್ತದೆ ಎಂದರು.ವಕ್ಫ್ ಆಸ್ತಿ ಕಬಳಿಕೆ:ವಕ್ಫ್ ಆಸ್ತಿ ಕಬಳಿಸಿರುವ ಖರ್ಗೆ ಕುಟುಂಬ ಕೇಂದ್ರದ ವಕ್ಫ್ ಕಾಯಿದೆಯಿಂದ ಆಸ್ತಿ ಕೈತಪ್ಪುವ ಆತಂಕದಲ್ಲಿ ಮನಬಂದಂತೆ ಮಾತನಾಡುತ್ತಿದ್ದಾರೆ. ಮುಂದೆ ಎನ್‌ಡಿಎ ಸರ್ಕಾರ ಬರುತ್ತದೆ, ಪ್ರಿಯಾಂಕ ಖರ್ಗೆ ಇನ್ನೆಂದಿಗೂ ಶಾಸಕರಾಗುವುದಿಲ್ಲ. ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಅಡ್ಡಪಡಿಸುವ ಮಾತು ಇಡೀ ದೇಶಕ್ಕೆ ಮಾಡಿದ ಅಪಮಾನವಾಗಿದೆ, ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಿ, ಇಲ್ಲವಾದಲ್ಲಿ ನೀವು ಭಾಗವಹಿಸುವ ಸಭೆಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಸಿದರು.ಹರಿಪ್ರಸಾದ್ ಹಿಂಬಾಗಿಲ ಲೀಡರ್‌ಡಿ.ಕೆ.ಹರಿಪ್ರಸಾದ್ ಎಂದೂ ಜನರಿಂದ ಚುನಾಯಿತರಾಗಿಲ್ಲ, ಅವರು ಇಂದಿರಾ ಕುಟುಂಬದವರ ಕಾಲು ಹಿಡಿದು ನಾಮನಿರ್ದೇಶನದ ಲೀಡರ್ ಆದವರು, ಗುಜರಾತ್ ಉಸ್ತುವಾರಿ ಹೊತ್ತು ಅಲ್ಲಿ ಕಾಂಗ್ರೆಸ್ ಅನ್ನು ನಾಮಾವಶೇಷ ಮಾಡಿದವರು. ಇವರ ಮಾತು ಕೇಳುತ್ತಿದ್ದರೆ ಇವರಿಗೆ ತಾಲಿಬಾನ್‌ನಿಂದ ಫಂಡಿಂಗ್ ಬರುತ್ತಿರುವ ಅನುಮಾನ ಕಾಡುತ್ತಿದೆ, ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಹೋಲಿಸಿರುವ ಇವರನ್ನು ವಿಧಾನಪರಿಷತ್ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಸಂವಿಧಾನಕ್ಕೆ ಡಿಕೆಶಿ ಅಪಚಾರಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜನರ ಕುಂದುಕೊರತೆ ಆಲಿಸಲು ಬೆಂಗಳೂರಿನ ವಿಧಾನಸಭಾ ಕ್ಷೇತ್ರವೊಂದಕ್ಕೆ ಹೋದಾಗ ಅಲ್ಲಿನ ಶಾಸಕರನ್ನು ಆಹ್ವಾನಿಸದೆ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ಶಾಸಕ ಮುನಿರತ್ನ ಕ್ಷೇತ್ರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.