'ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣ : ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ'

KannadaprabhaNewsNetwork | Updated : Jan 05 2025, 06:52 AM IST

ಸಾರಾಂಶ

ಸಚಿನ್ ಸಾವಿಗೆ ಪ್ರಿಯಾಂಕ್ ಖರ್ಗೆ ಸಹಚರರ ಕಿರುಕುಳವೇ ಕಾರಣ. ಕಾಂಗ್ರೆಸ್ ನೇತೃತ್ವದ ಸರ್ಕಾರವು ಆತ್ಮಹತ್ಯೆ ಮತ್ತು ಮಾಫಿಯಾ ಸರ್ಕಾರವಾಗಿದೆ.

ಹೊಸಪೇಟೆ: ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಿ, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರಿಂದ ನಗರದ ತಹಸೀಲ್ ಕಚೇರಿ ಶನಿವಾರ ಪ್ರತಿಭಟನೆ ನಡೆಸಲಾಯಿತು.ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಸಚಿನ್ ಸಾವಿಗೆ ಪ್ರಿಯಾಂಕ್ ಖರ್ಗೆ ಸಹಚರರ ಕಿರುಕುಳವೇ ಕಾರಣ. ಕಾಂಗ್ರೆಸ್ ನೇತೃತ್ವದ ಸರ್ಕಾರವು ಆತ್ಮಹತ್ಯೆ ಮತ್ತು ಮಾಫಿಯಾ ಸರ್ಕಾರವಾಗಿದೆ. ಗುತ್ತಿಗೆದಾರರು, ಸರ್ಕಾರಿ ನೌಕರರು ಮತ್ತು ಪ್ರಾಮಾಣಿಕ ವ್ಯಕ್ತಿಗಳು ಅನಗತ್ಯ ಒತ್ತಡ ಮತ್ತು ಬೆದರಿಕೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಸಚಿವರ, ಶಾಸಕರ, ಅವರ ಆಪ್ತ ಸಹಾಯಕರ ಒತ್ತಡ, ಬೆದರಿಕೆಗೆ ಸರ್ಕಾರಿ ನೌಕರರು, ಗುತ್ತಿಗೆದಾರರು, ಸಾಲು ಸಾಲಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಸಚಿವ ಪ್ರಿಯಾಂಕ್ ಖರ್ಗೆಯ ಆಪ್ತರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪ್ರಕರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುವ ಭಯದಿಂದ ಸಿದ್ದರಾಮಯ್ಯ ಮತ್ತು ಭವಿಷ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕೈ ತಪ್ಪಬಹುದು ಎಂಬ ಭಯದಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡುತ್ತಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಅಯ್ಯಳ್ಳಿ ತಿಮ್ಮಪ್ಪ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುವರ್ಣ ಆರುಂಡಿ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ, ಸಂಜೀವ್ ರೆಡ್ಡಿ, ನಗರಸಭೆ ಅಧ್ಯಕ್ಷ ರೂಪೇಶ್, ಉಪಾಧ್ಯಕ್ಷ ರಮೇಶ್ ಗುಪ್ತ, ಪ್ರಮುಖರಾದ ಅಶೋಕ ಜೀರೆ, ಸಾಲಿಸಿದ್ದಯ್ಯ ಸ್ವಾಮಿ, ಜಗದೀಶ್ ಕಾಮಾಟಿಗಿ, ಈಟಿ ಲಿಂಗರಾಜ್, ಶಂಕರ್ ಮೇಟಿ, ಚಂದ್ರು ದೇವಲಾಪುರ ಇದ್ದರು.

ಹೊಸಪೇಟೆಯಲ್ಲಿ ಶನಿವಾರ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ತಹಸೀಲ್ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಲಾಯಿತು.

Share this article