ಕನ್ನಡಪ್ರಭ ವಾರ್ತೆ ತುಮಕೂರು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಸೋಮವಾರ ತುಮಕೂರು ದಸರಾ-2025 ಲಾಂಛನವನ್ನು ಬಿಡುಗಡೆ ಮಾಡಿದರು. ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಕಳೆದ ವರ್ಷ ವಿನ್ಯಾಸಗೊಳಿಸಿದ್ದ ದಸರಾ ಲಾಂಛನವನ್ನೇ ದಸರಾ ಉತ್ಸವದ ಶಾಶ್ವತ ಲಾಂಛನವನ್ನಾಗಿಸಲು ನಿರ್ಣಯಿಸಲಾಗಿದೆ. ಮೈಸೂರು ದಸರಾ ಉತ್ಸವದ ಲಾಂಛನವು ಮಹಾರಾಜರ ಕಾಲದಿಂದಲೂ ಬಳಕೆಯಲ್ಲಿರುವಂತೆ ಜಿಲ್ಲೆಯಲ್ಲಿಯೂ ಕಳೆದ ವರ್ಷದ ಲಾಂಛನವನ್ನೇ ಅಂತಿಮಗೊಳಿಸಿ ಮುಂದಿನ ದಿನಗಳಲ್ಲಿ ಶಾಶ್ವತ ದಸರಾ ಲಾಂಛನವಾಗಿ ಬಳಕೆಯಾಗಲಿದೆ ಎಂದು ತಿಳಿಸಿದರು. ಕಳೆದ ವರ್ಷ 2024ರ ದಸರಾ ಆಚರಣೆ ಸಂದರ್ಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತಾದರೂ ಉತ್ಸವವು ಅಭೂತಪೂರ್ವ ಯಶಸ್ಸು ಕಾಣುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಜಿಲ್ಲೆಯ ಜನತೆಗೆ ನಾಡದೇವಿಯ ಮೇಲಿರುವ ಭಕ್ತಿ, ಪ್ರೀತಿಯೇ ದಸರಾ ಉತ್ಸವದ ಯಶಸ್ಸಿಗೆ ಕಾರಣವಾಯಿತು ಎಂದು ಅಭಿಪ್ರಾಯಪಟ್ಟರು. ಮೈಸೂರು ದಸರಾ ಉತ್ಸವಕ್ಕೆ ತನ್ನದೇ ಆದ ಐತಿಹ್ಯವಿದೆ. ದೇಶ-ವಿದೇಶಗಳಿಂದ ಗಣ್ಯರನ್ನು ಉತ್ಸವಕ್ಕೆ ಆಹ್ವಾನಿಸಿ ಸಾಂಸ್ಕೃತಿಕವಾಗಿ ಜನರನ್ನು ಒಗ್ಗೂಡಿಸುವ ಮೈಸೂರು ಮಹಾರಾಜರ ಆಶಯವೇ ಮೈಸೂರು ದಸರಾ ಜಗತ್ಪ್ರಸಿದ್ಧವಾಗಲು ಕಾರಣವಾಯಿತು ಎಂದು ಮೈಸೂರು ದಸರಾ ಬೆಳೆದು ಬಂದ ದಾರಿಯ ಬಗ್ಗೆ ವಿವರಣೆ ನೀಡಿದರು. ಮೈಸೂರು ದಸರಾ ಮಾದರಿಯಲ್ಲಿಯೇ ತುಮಕೂರಿನಲ್ಲಿಯೂ ಹಲವಾರು ವಿನೂತನ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಾಕರ್ಷಕಗೊಳಿಸಲು ಈಗಾಗಲೇ 21 ಸಮಿತಿಗಳನ್ನು ರಚಿಸಿ ಜಿಲ್ಲಾಡಳಿತ ಕಾರ್ಯತತ್ಪರವಾಗಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ನಡೆಯಲಿರುವ ಜಿಲ್ಲಾ ದಸರಾ ಉತ್ಸವಕ್ಕೆ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 22ರಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು. ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪ್ರತಿ ದಿನ ವಿವಿಧ ಅಲಂಕಾರದಲ್ಲಿ ಪೂಜಿಸಿ ಶಾಸ್ತ್ರೋಕ್ತವಾಗಿ ಹೋಮ-ಹವನಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಈ ಜಿಲ್ಲಾ ದಸರಾ ಉತ್ಸವವನ್ನು ಯಾವುದೇ ಸರ್ಕಾರ, ಯಾವುದೇ ಆಡಳಿತ ವರ್ಗವಿರಲಿ ಪ್ರತಿ ವರ್ಷ ಆಚರಣೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಉತ್ಸವವನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕೇ ಹೊರತು ಒಡಕು-ಕೆಡಕುಗಳಿಗೆ ಅವಕಾಶ ನೀಡಬಾರದು ಎಂದು ಮಾರ್ಮಿಕವಾಗಿ ನುಡಿದರಲ್ಲದೆ,ಯಾವುದೇ ಜಾತಿ, ಧರ್ಮ, ಪಂಥ, ಪಕ್ಷವೆಂದು ಭೇದ-ಭಾವವಿಲ್ಲದೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಳೆದ ಬಾರಿಯಂತೆ ಈ ಬಾರಿಯೂ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.