ಸಚಿವರ ಪ್ರಯತ್ನ ಫಲ: ಪಿಎಲ್ಡಿ ಶಾಖೆ ಮರು ಆರಂಭ

KannadaprabhaNewsNetwork |  
Published : Oct 09, 2025, 02:00 AM IST
ಎಂಸಿಸುಧಾಕರ್  | Kannada Prabha

ಸಾರಾಂಶ

ಇನ್ನು ೨-೩ ತಿಂಗಳಿನಲ್ಲಿ ಪಿಎಲ್‌ಡಿ ಬ್ಯಾಂಕ್‌ ಸಾಮಾನ್ಯ ಸಭೆಯನ್ನು ಕೈಗೊಳ್ಳಲಾಗುವುದು. ಆಗ ಹೆಚ್ಚಿನ ಸಂಖ್ಯೆಯ ರೈತರು, ಷೇರುದಾರರು ಭಾಗವಹಿಸಿ ಬ್ಯಾಂಕ್‌ನ ಪುನಶ್ಚೇತನಕ್ಕೆ ಷೇರನ್ನು ಒದಗಿಸುವುದರ ಜೊತೆಗೆ ಅದನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊರಬೇಕೆಂದರು. ಪುನಶ್ಚೇತನಗೊಳ್ಳುವುದರಿಂದ ರೈತಾಪಿ ವರ್ಗದವರಿಗೆ ಸಾಕಷ್ಟು ಅನುಕೂಲವಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

೧೯೯೯ರಲ್ಲಿ ಪಿಎಲ್‌ಡಿ ಬ್ಯಾಂಕ್ ತನ್ನ ಕಾರ್ಯವನ್ನು ಚಿಂತಾಮಣಿ ಕ್ಷೇತ್ರದಲ್ಲಿ ಸ್ಥಗಿತಗೊಳಿಸಿತ್ತು. ಇದರಿಂದಾಗಿ ರೈತರು ಸಂಕಷ್ಟಕ್ಕೆ ಈಡಾಗೀರುವುದನ್ನು ಪರಿಗಣಿಸಿ ಸತತ ಪ್ರಯತ್ನದ ಬಳಿಕ ಇಂದು ಪಿಎಲ್‌ಡಿ ಬ್ಯಾಂಕ್ ಮತ್ತೆ ಆರಂಭಗೊಂಡಿದೆ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಂತಸ ವ್ಯಕ್ತಪಡಿಸಿದರು.

ನಗರದ ಚೇಳೂರು ರಸ್ತೆಯಲ್ಲಿನ ಟಿಎಪಿಎಂಸಿಎಸ್ ಸಂಕೀರ್ಣದಲ್ಲಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಗಮದ ಚಿಂತಾಮಣಿ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಖೆಯ ಆರಂಭಕ್ಕೆ ಹಿನ್ನಡೆ

ಈ ಹಿಂದೆ ಕೆಲವರು ಇದನ್ನು ಗುಟ್ಟಾಗಿ ಸ್ಥಾಪನೆ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದರು. ಆದರೆ ಆಗಿನ ಸಹಕಾರ ಸಚಿವರಾಗಿದ್ದ ಪುಟ್ಟಸ್ವಾಮಿ ಬಳಿ ಚಿಂತಾಮಣಿಗೆ ನಿಯೋಗ ಭೇಟಿ ನೀಡಿ ಇದನ್ನು ಕಾನೂನಿನ ಅಡಿಯಲ್ಲೇ ಬ್ಯಾಂಕ್ ಸ್ಥಾಪನೆ ಮಾಡಬೇಕೆಂದು ಮನವರಿಕೆ ಮಾಡಿಕೊಟ್ಟಿತ್ತಾದರೂ ನಂತರದ ವರ್ಷಗಳಲ್ಲಿ ಅದರ ಬಗ್ಗೆ ಯಾರು ಗಮನ ಕೊಡದ ಹಿನ್ನಲೆಯಲ್ಲಿ ಅದು ಸ್ಥಗಿತಗೊಂಡಿತ್ತು ಎಂದರು.

ತಮಗೆ ತಿಳಿವಳಿಕೆ ಬಂದಾಗ ಪಿಎಲ್‌ಡಿ ಬ್ಯಾಂಕ್ ಚುನಾವಣೆ ದೊಡ್ಡಮಟ್ಟದಲ್ಲಿ ೧೯೮೯-೯೦ರ ಅವಧಿಯಲ್ಲಿ ನಡೆಯಿತು, ಆ ಸಂದರ್ಭದಲ್ಲಿ ದೊಡ್ಡ ಗಲಭೆಯಾಯಿತು ಆಗ ನನ್ನ ತಂದೆಯವರಾದ ಚೌಡರೆಡ್ಡಿ ಮತ್ತು ಬೈರೈಗೌಡರ ನಡುವೆ ದೊಡ್ಡ ಕಾಳಗ ನಡೆಯಿತು ಮತ್ತು ಲಾಠಿ ಚಾರ್ಜ್ ಜೊತೆಗೆ ಫೈರಿಂಗ್ ಸಹ ನಡೆಯಿತೆಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.

26 ವರ್ಷದ ಬಳಿಕ ಆರಂಭ

ಪಿಎಲ್‌ಡಿ ಶಾಖೆ ಸ್ಥಗಿತಗೊಂಡ ನಂತರ ಮರು ಸ್ಥಾಪನೆಗೆ ೨೬ ವರ್ಷಗಳೇ ಬೇಕಾಯಿತು. ತಾವು ಸಚಿವನಾದ ನಂತರ ರಾಜ್ಯದೆಲ್ಲೆಡೆ ಪಿಎಲ್‌ಡಿ ಬ್ಯಾಂಕ್ ಎಲ್ಲಾ ಕ್ಷೇತ್ರಗಳಲ್ಲಿ ಸೇವೆಯನ್ನು ನೀಡುತ್ತಿರುವುದನ್ನು ಗಮನಿಸಿದೆ. ಆದರೆ ಬ್ಯಾಂಕ್‌ ಕೇವಲ ಚಿಂತಾಮಣಿ ಕ್ಷೇತ್ರದಲ್ಲಿ ಇಲ್ಲದಿರುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮತ್ತೆ ಅದರ ಪುನಶ್ಚೇತನಕ್ಕೆ ಪಣತೊಟ್ಟಿದ್ದರ ಫಲವಾಗಿ ಈಗ ನಗರ ಟಿಎಪಿಎಂಸಿಎಸ್‌ನ ಸಂಕೀರ್ಣದಲ್ಲಿ ಒಂದು ಉಚಿತ ಕೊಠಡಿಯನ್ನು ಒದಗಿಸಿಕೊಟ್ಟು ಅದರ ಮೂಲಕ ಮತ್ತೆ ಅದರ ಪಿಎಲ್‌ಡಿ ಪುನಶ್ಚೇತನಕ್ಕೆ ನಾಂದಿ ಹಾಡಿರುವುದಾಗಿ ನುಡಿದರು.

ಇನ್ನು ೨-೩ ತಿಂಗಳಿನಲ್ಲಿ ಸಾಮಾನ್ಯ ಸಭೆಯನ್ನು ಕೈಗೊಳ್ಳಲಾಗುವುದು. ಆಗ ಹೆಚ್ಚಿನ ಸಂಖ್ಯೆಯ ರೈತರು, ಷೇರುದಾರರು ಭಾಗವಹಿಸಿ ಬ್ಯಾಂಕ್‌ನ ಪುನಶ್ಚೇತನಕ್ಕೆ ಷೇರನ್ನು ಒದಗಿಸುವುದರ ಜೊತೆಗೆ ಅದನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊರಬೇಕೆಂದರು. ಪುನಶ್ಚೇತನಗೊಳ್ಳುವುದರಿಂದ ರೈತಾಪಿ ವರ್ಗದವರಿಗೆ ಸಾಕಷ್ಟು ಅನುಕೂಲವಿದೆ. ಪ್ರತಿಯೊಬ್ಬರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ಪುನಶ್ಚೇತನ ಸಾಧ್ಯವಾಗಲಿದೆಯೆಂದರು.

ಸಕಾಲಕ್ಕೆ ಸಾಲ ಮರುಪಾವತಿಸಿ

ಪಿಎಲ್‌ಡಿ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು, ಸಾಲ ಮರುಪಾವತಿ ಮಾಡಿದಾಗ ಬ್ಯಾಂಕ್ ಬೆಳವಣಿಗೆಯಾಗುತ್ತದೆ ಮತ್ತು ಮತ್ತಷ್ಟು ರೈತಾಪಿ ವರ್ಗದವರಿಗೆ ಸಾಲ ಸಿಗುವಂತಹ ಕಾರ್ಯವನ್ನು ಸಾಲ ಪಡೆದವರು ಮಾಡಬೇಕೇ ಹೊರತು, ಸಾಲ ಪಡೆದು ಸುಮ್ಮನೆ ಇರುವುದಲ್ಲವೆಂದರು.

ಸದಸ್ಯರಾಗಲು ಮನವಿ

ಜಿಲ್ಲಾ ವ್ಯವಸ್ಥಾಪಕ ಬೈರೇಗೌಡ ಮಾತನಾಡಿ ಬ್ಯಾಂಕು ಸ್ಥಗಿತಗೊಂಡಾಗ ಷೇರುದಾರರು ೩೨ ಲಕ್ಷ ಹಣ ಸಂದಾಯವಾಗಬೇಕಾಗಿತ್ತು. ನಂತರ ನಾವು ಷೇರುದಾರರನ್ನು ಭೇಟಿ ಮಾಡಿದಾಗ ಬಡ್ಡಿಮನ್ನಾ ಮಾಡಿ ೭ಲಕ್ಷ ಹಣ ಮರುಪಾವತಿ ಮಾಡಿಸಿಕೊಂಡಿದ್ದು, ಹೊಸ ಸಾಲವನ್ನು ಸಹ ನೀಡಲಾಗುವುದೆಂದರು, ಹೆಚ್ಚು ಸದಸ್ಯತ್ವ ಹೊಂದಬೇಕು, ಹಾಜರಾತಿ ಮತ್ತು ಕನಿಷ್ಠ ಸಹಕಾರ ಇರಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಮುನಿನಾರಾಯಣಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಚಿನ್ನಪ್ಪ, ನಗರಸಭೆ ಅಧ್ಯಕ್ಷ ಆರ್. ಜಗನ್ನಾಥ್ ಸ್ಕೂಲ್ ಸುಬ್ಬಾರೆಡ್ಡಿ, ಟಿಎಪಿಎಂಸಿಎಸ್ ನಾಗೇಶ್, ನಗರ ಯೋಜನಾ ಪ್ರದೇಶ ಪ್ರಾಧಿಕಾರ ಅಧ್ಯಕ್ಷ ಶ್ರೀನಾಥ್, ಮಾದಮಂಗಲ ಚಂದ್ರಪ್ಪ, ಕೋನಪ್ಪಲ್ಲಿ ಶಿವಾರೆಡ್ಡಿ, ಬುಕ್ಕನಹಳ್ಳಿ ಶಿವಣ್ಣ, ನಡಂಪಲ್ಲಿ ಶ್ರೀನಿವಾಸ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರು ವೇಣು, ಜಿಲ್ಲಾ ವ್ಯವಸ್ಥಾಪಕ ಬೈರೇಗೌಡ, ವ್ಯವಸ್ಥಾಪಕ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿ ಉತ್ಸವ ನಾಡಹಬ್ಬದಂತೆ ವಿಜೃಂಭಣೆಯಿಂದ ಆಚರಿಸೋಣ: ಜಮೀರ್ ಅಹಮದ್‌ ಖಾನ್
ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ