ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಗಂಗಾಸ್ನಾನ ಮಾಡಿದ ತಕ್ಷಣ ಅವರು ಮಾಡಿದ ಪಾಪ ಹೋಗುವುದಿಲ್ಲ. ದೇಶದ ವ್ಯವಸ್ಥೆ ಹಾಳು ಮಾಡಿರುವುದು ಪಾಪವಲ್ಲವೇ? ಆ ಪಾಪ ಗಂಗಾಸ್ನಾನ ಮಾಡುವುದರಿಂದ ಹೋಗಲು ಸಾಧ್ಯವೇ? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆ ಮೂಲೆಗುಂಪಾಗಿದೆ. 2 ಲಕ್ಷ ಕಿರಾಣಿ ಅಂಗಡಿ ಮುಚ್ಚಿ ಹೋಗಿವೆ. ಇದನ್ನು ಯಾರಾದರೂ ಮಾತನಾಡುತ್ತಾರೆಯೇ?. ಆದರೆ, ಖರ್ಗೆ ಅವರು ನೀಡಿರುವ ಹೇಳಿಕೆ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಅವರು ದೇಶದ ಸಾಲದ ಬಗ್ಗೆ ಏಕೆ ಮಾತನಾಡುವುದಿಲ್ಲ. ಲೋಕಪಾಲ್‌ಗೆ ಗೌರವ ನೀಡಿದಂತೆ ನಾವು ಲೋಕಾಯುಕ್ತ ಸಂಸ್ಥೆ ನಂಬುತ್ತೇವೆ. ಈ ದೇಶವು ಬಿಜೆಪಿ, ಕಾಂಗ್ರೆಸ್‌ನವರ ಸ್ವತ್ತಲ್ಲ ಎಂಬುದನ್ನು ಅರಿತುಕೊಳ್ಳಲಿ ಎಂದರು
ಗಂಗಾಸ್ನಾನ ಮಾಡಿದರೆ ಪಾಪ ಕಳೆದುಹೋಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.ಬರೀ ಭಾವನಾತ್ಮಕ ಮಾತು:
ಕೇಂದ್ರ ಬಜೆಟ್ ಬಗ್ಗೆ ಏನೂ ನಿರೀಕ್ಷೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಎಂದಿಗೂ ಹಿಂದೂ-ಮುಸ್ಲಿಂ ಭಾವನಾತ್ಮಕತೆ ಕುರಿತು ಮಾತನಾಡುವುದನ್ನು ಬಿಟ್ಟರೆ ಏನು ಇರುವುದಿಲ್ಲ. ಯಾವ ಹಿಂದೂಗಳಿಗೆ ಏನಾಗಿದೆ ಎಂಬುದರ ಕುರಿತು ಬಿಜೆಪಿಯವರು ಸಂಪೂರ್ಣ ಮಾಹಿತಿ ಕೊಡುತ್ತಾರೆಯೇ? ಸದ್ಯದ ಜಿಡಿಪಿ ಸ್ಥಿತಿ ಏನಿದೆ ಎಂಬುದರ ಕುರಿತು ಸ್ಪಷ್ಟೀಕರಣ ಕೊಡುತ್ತಾರೆಯೇ?, ಬಿಜೆಪಿಯವರದು ಈಗ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ನನಗೆ ಟಾಸ್ಕ್ ಕೊಟ್ಟಿಲ್ಲ:
ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆ ತರುವ ಕುರಿತಂತೆ ನನಗೇನೂ ಟಾಸ್ಕ್ ಕೊಟ್ಟಿಲ್ಲ. ನಮ್ಮ ಪಕ್ಷ ಡಬಲ್ ಡೆಕ್ಕರ್ ಬಸ್ ಇದ್ದಂತೆ. ಇಲ್ಲಿಗೆ ಯಾರಾದರೂ ಬರಬಹುದು; ಹೋಗಬಹುದು ಎಂದ ಅವರು, ನಾನು ಮತ್ತು ಮಾಜಿ ಸಚಿವ ಶ್ರೀರಾಮುಲು ಉತ್ತಮ ಸ್ನೇಹಿತರು. ಇತ್ತೀಚಿನ ದಿನಗಳಲ್ಲಿ ನಾನು ಅವರೊಂದಿಗೆ ಮಾತನಾಡಿಲ್ಲ. ಅವರು ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.