ಧಾರವಾಡ:
ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳ ಎರಡೂ ಬದಿಯ ರೈತರ ಜಮೀನುಗಳಿಗೆ ಧಕ್ಕೆ ಆಗದಂತೆ ದುರಸ್ತಿ ಕಾರ್ಯ ನಡೆಸುವುದು ಹಾಗೂ ವೈಜ್ಞಾನಿಕ ಹಾಗೂ ಗುಣಮಟ್ಟದ ಕಾಮಗಾರಿ ಮಾಡುವಂತೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳ ವ್ಯಾಪ್ತಿ ಪ್ರದೇಶಗಳಿಗಳಲ್ಲಿ ಉಂಟಾದ ರೈತರ ಜಮೀನು ಹಾನಿ, ಮನೆಹಾನಿಯನ್ನು ಸೋಮವಾರ ಪರಿಶೀಲಿಸಿದ ಅವರು, ಈ ಹಳ್ಳಗಳ ಹೂಳು ತೆಗೆದು, ಬದುವು ಎತ್ತರಿಸಿದರೆ ಸಾಲದು, ಪಿಂಚಿಂಗ್ ಕಾರ‍್ಯ ಮಾಡಬೇಕು ಎಂದು ಸೂಚಿಸಿದರು.
ಹನಸಿ ಗ್ರಾಮದಲ್ಲಿ ಲಲಿತಾ ಗಂಗಪ್ಪ ಹೆಬ್ಬಳ್ಳಿ, ಗುರಪಾದಪ್ಪ ರುದ್ರಪ್ಪ ಆಯೆಟ್ಟಿ ಹಾಗೂ ಬಸವರಾಜ ಚಂದ್ರಶೇಖರ ಇಂಡಿ ಇವರ ಮನೆಗಳ ಹಾನಿ ಪರಿಶೀಲಿಸಿ ಶೀಘ್ರವೇ ಮನೆ ಹಾನಿ ಪರಿಹಾರ ಒದಗಿಸಲಾಗುವುದೆಂದು ತಿಳಿಸಿದರು. ಹನಸಿ ಹಾಗೂ ಶಿರಕೋಳ ಮಧ್ಯದಲ್ಲಿ ತುಪ್ಪರಿ ಹಳ್ಳ ಹರಿವಿನ ತೀವ್ರತೆ ಹಾಗೂ ಹಾನಿಗೀಡಾದ ಪ್ರದೇಶವನ್ನು ಸಚಿವರು ವೀಕ್ಷಿಸಿದರು. ಬಳ್ಳೂರ ಗ್ರಾಮದಲ್ಲಿ ಮಳೆಹಾನಿಗೊಳಗಾದ ವಾಸುದೇವ ಬೆಳ್ಳಿಕಟ್ಟಿ ಹಾಗೂ ರೇಣ್ಣಪ್ಪ ಕುಂಬಾರ ಮನೆಗಳಿಗೆ ಭೇಟಿ ನೀಡಿದರು. ತಿರ್ಲಾಪುರ ಗ್ರಾಮದಿಂದ ಅಳಗವಾಡಿ ಗ್ರಾಮದ ಮದ್ಯ ತುಪ್ಪರಿ ಹಳ್ಳವು ಬೆಣ್ಣೆ ಹಳಕ್ಕೆ ಕೂಡುವ ಸ್ಥಾಳವನ್ನು ಸೇತುವೆ ಮೇಲಿಂದ ವೀಕ್ಷಿಸಿದರು.ದುರಸ್ತಿ ಮಾಡ್ತೇವೆ:
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 2019ರಲ್ಲಿ ಸರ್ಕಾರ ಒದಗಿಸಿದ ಅನುದಾನದಲ್ಲಿ ಹೂಳು ತೆಗೆಯುವುದು, ಬದು ಎತ್ತರಿಸುವುದು ಹಾಗೂ ತಡೆಗೋಡೆ ಕಾಮಗಾರಿಗಳನ್ನು ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ. ಆದರೂ ಸಹ ನೀರು ಗ್ರಾಮಗಳಿಗೆ ಹಾಗೂ ರೈತರ ಜಮೀನುಗಳಿಗೆ ನುಗ್ಗಿ ಸಾಕಷ್ಟು ಹಾನಿಯಾಗುತ್ತಿದೆ. ವೈಜ್ಞಾನಿಕವಾಗಿ ಮೇಲ್ಸೇತುವೆ ಎತ್ತರಿಸುವುದು ಹಾಗೂ ಹಲವೆಡೆ ಬ್ಯಾರೇಜ್‌ಗಳನ್ನು ನಿರ್ಮಿಸಿ ಮುಂದಿನ ದಿನಮಾನಗಳಲ್ಲಿ ಜನರಿಗೆ ರೈತರಿಗೆ ತೊಂದರೆ ಆಗದಂತೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಮಳೆಗಾಲದ ನಂತರ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.ಗುಣಮಟ್ಟದ ಕಾಮಗಾರಿ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ತಾಕೀತು ಮಾಡಲಾಗುವುದು ಎಂದ ಸಚಿವರು, ತುಪ್ಪರಿಹಳ್ಳ 65 ಕಿಮೀ ಹಾಗೂ ಬೆಣ್ಣಿಹಳ್ಳ 140 ಕಿಮೀ ಹರಿವು ಇದೆ. ಹಳ್ಳಗುಂಟ ಈ ಎರಡು ಹಳ್ಳಗಳು ಹಾನಿ ಮಾಡುತ್ತಿವೆ. ಈ ಉಭಯ ಹಳ್ಳಗಳಲ್ಲಿ ಹರಿಯುವ ನೀರನ್ನು ಹಿಡಿದಿಟ್ಟು ಸದ್ಬಳಕೆ ಯೋಜನೆ ಬಗ್ಗೆ ಚಿಂತಿಸುತ್ತಿದೆ ಮಾಧ್ಯಮದವರ ಪ್ರಶ್ನೆಗೆ ಲಾಡ್ ಉತ್ತರಿಸಿದರು.
ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ತುಪ್ಪರಿಹಳ್ಳಕ್ಕೆ₹ 310 ಕೋಟಿ ಮಂಜೂರಾಗಿದೆ. ಮೊದಲ ಹಂತದಲ್ಲಿ ₹ 150 ಕೋಟಿ ಟೆಂಡರ್ ಆಗಿದೆ. ದ್ವಿತೀಯ ಹಂತದಲ್ಲಿ ₹ 110 ಕೋಟಿ ಟೆಂಡರ್ ಆಗಬೇಕಿದೆ. ಉಪ್ಪಿನಬೆಟಗೇರಿಯಿಂದ ಪ್ರಾರಂಭವಾಗುವ ಬೆಣ್ಣೆಹಳ್ಳ ನವಲಗುಂದ ವರೆಗೆ ಹರಿಯಲಿದೆ. ಈ ನೀರು ನೀರಾವರಿ ಬಳಕೆಗೆ ಯೋಜನೆ ರೂಪಿಸಲಿದೆ. ಈ ಬಗ್ಗೆ ವಿಸ್ಕೃತ ಯೋಜನಾ ವರದಿ ತಯಾರಿಸುವ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.ಬಾಗಲಕೋಟಿ, ಹಾವೇರಿ, ಧಾರವಾಡ ಜಿಲ್ಲೆಗಳು ಒಳಗೊಳ್ಳುವ ಈ ಬೆಣ್ಣಿಹಳ್ಳ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ನೀರಾವರಿಗೆ ಒಳಪಡಿಸುವಂತೆ ಘೋಷಿಸಿದ್ದು, ₹ 1600 ಕೋಟಿಗೆ ಡಿಪಿಆರ್ ಸಹ ಆಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ, ನೀರು ಸಂಗ್ರಹಿಸಲು ಜಾಗದ ಕೊರತೆ ಇರುವ ಕಾರಣಕ್ಕೆ ಈ ನೀರು ಕೆರೆಗಳಿಗೆ ತುಂಬಿಸಿ, ಪಂಪ್ ಮಾಡಿಯೇ ಬಳಸುವ ಯೋಜನೆ ರೂಪಿಸುವ ಕಾರ್ಯ ನಡೆದಿದೆ. ಇದು ಮೂರು ಹಂತದಲ್ಲಿ ಜರುಗಲಿದೆ ಎಂದು ತಿಳಿಸಿದರು.