ಮಂಗಳೂರು: ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ದಕ್ಷಿಣ ಕನ್ನಡದ ಸ್ವಸಹಾಯ ಗುಂಪುಗಳ ಒಕ್ಕೂಟಗಳಿಗೆ 70 ಕೋಟಿ ರು. ಬಂಡವಾಳ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ರುದ್ರಪ್ಪ ಪಾಟೀಲ್ ತಿಳಿಸಿದ್ದಾರೆ.
ಮಹಿಳೆಯರು ತಮ್ಮ ಕುಟುಂಬದ ಏಳಿಗೆಗೆ ಪೂರಕವಾಗಿ ಹಣ ವಿನಿಯೋಗಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಹಿಳಾ ಕೇಂದ್ರಿತ ಯೋಜನೆಗಳಿಗೆ ಒತ್ತು ನೀಡಿದೆ. ಪ್ರತಿ ವರ್ಷ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟಗಳಿಗೆ ಸುತ್ತುನಿಧಿ ಬಂಡವಾಳ ಒದಗಿಸಲಾಗುತ್ತಿದೆ. ಪ್ರತಿ ಸಂಘಕ್ಕೆ 1.50 ಲಕ್ಷ ರು. ಬಂಡವಾಳ ನೀಡಲಾಗುತ್ತದೆ. ರಾಜ್ಯದಲ್ಲಿ 5 ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟಗಳಿದ್ದು, ಅವುಗಳ ಮೂಲಕ ಸಬಲೀಕರಣದ ಕಾರ್ಯ ನಡೆಯುತ್ತಿದೆ. ದಕ್ಷಿಣ ಕನ್ನಡಕ್ಕೆ ಸುಮಾರು 70 ಕೋಟಿ ರು. ಒದಗಿಸಲಾಗಿದೆ ಎಂದು ಹೇಳಿದರು.
ಪ್ರತಿ ವರ್ಷ ಈ ವಸ್ತು ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಬೆಂಗಳೂರು ಮಾತ್ರವಲ್ಲದೆ ಬೇರೆ ಜಿಲ್ಲೆಗಳಲ್ಲೂ ಆಯೋಜಿಸಬೇಕೆಂಬ ಹಿನ್ನೆಲೆಯಲ್ಲಿ ಕಳೆದ ವರ್ಷ ಕಲಬುರಗಿಯಲ್ಲಿ ಮೇಳ ನಡೆಸಲಾಗಿತು. ಈ ವರ್ಷ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಶಕ್ತಿ ತುಂಬುವ ಈ ಮೇಳ ವ್ಯಾಪಾರದ ವೇದಿಕೆ ಮಾತ್ರವಲ್ಲ, ಸ್ವಸಹಾಯ ಸಂಘಗಳ ಶಕ್ತಿ, ಸ್ವಾವಲಂಬನೆಯ ಶಕ್ತಿ ತೋರಿಸುವ ಕಾರ್ಯಕ್ರಮ ಎಂದರು.ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನ, ಎನ್‌ಆರ್‌ಎಲ್‌ಎಂ ಮಿಷನ್ ನಿರ್ದೇಶಕಿ ಜ್ಯೋಶ್ನಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕಾರ್ಭಾರಿ ಮತ್ತಿತರರು ಇದ್ದರು.
‘ಸರಸ್ ಮೇಳ’ದ ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಣ್ಣಿನ ಪಾತ್ರೆಗಳು, ಸೀರೆ ಹಾಗೂ ಅಕ್ಕ ಆಹಾರ ಮಳಿಗೆಗಳಲ್ಲಿ ಜನಜಂಗುಳಿ ಕಂಡುಬಂದಿತ್ತು. ಒರಿಸ್ಸಾ, ಚಂಡೀಗಡ, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಲ, ತೆಲಂಗಾಣ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಸ್ವಸಹಾಯ ಸಂಘಗಳ ಗುಂಪುಗಳ ಉತ್ಪನ್ನಗಳು ಪ್ರದರ್ಶನದಲ್ಲಿವೆ. ಸುಮಾರು 100ಕ್ಕೂ ಅಧಿಕ ಮಳಿಗೆಗಳಿವೆ. ಬಗೆಬಗೆಯ ಸೀರೆಗಳು, ಕೈಮಗ್ಗ ಉತ್ಪನ್ನಗಳು, ಇತರ ಗೃಹೋಪಯೋಗಿ ಮತ್ತು ಆಹಾರ ಉತ್ಪನ್ನಗಳು, ಚೆನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಗ್ರಿಗಳು, ಇಳಕಲ್ ಸೀರೆ, ನಾರಿನ ಉತ್ಪನ್ನಗಳು ಪ್ರದರ್ಶದಲ್ಲಿವೆ. ಮೇಳ ಫೆ.28ರವರೆಗೆ ನಡೆಯಲಿದೆ.