ಕನ್ನಡಪ್ರಭವಾರ್ತೆ, ಹಾಸನ
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಮುಖ್ಯಮಂತ್ರಿಯವರು ವಿಧಾನಸಭೆ ಸೇರಿ ವಿವಿಧ ಸಂದರ್ಭಗಳಲ್ಲಿ ಹಣ ಮಾಡುವ ಉದ್ದೇಶವಿಲ್ಲ, ಉತ್ತಮ ಕೆಲಸ ಮಾಡಿ ಸಾಕ್ಷಿಗುಡ್ಡೆ ಬಿಟ್ಟು ಹೋಗಬೇಕು ಹಾಗೂ ಯಾರಾದರೂ ಲಂಚ ಕೇಳಿದರೆ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ. ಆದರೆ ಶಿವಲಿಂಗೇಗೌಡರು ಇತ್ತೀಚೆಗೆ ಸಕಲೇಶಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಯೊಬ್ಬರು ವ್ಯಕ್ತಿಯಿಂದ ೨ ಲಕ್ಷ ಲಂಚ ಪಡೆದಿರುವ ಆರೋಪದ ಕುರಿತು ಗೌರವದಿಂದ ಅಥವಾ ಧರ್ಮದಿಂದ ಏನನ್ನಾದರೂ ಕೊಟ್ಟು ಕೆಲಸ ಮಾಡಿಸಿಕೊಳ್ಳುವಂತೆ ಹೇಳಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಸಚಿವರ ಹೇಳಿಕೆ ಲಂಚದ ವ್ಯವಸ್ಥೆ ಸಮರ್ಥಿಸುವಂತಿದೆ ಎಂದು ಟೀಕಿಸಿದರು.
ಹಾಸನ ಜಿಲ್ಲಾ ಪಂಚಾಯಿತಿ ಲೆಕ್ಕ ಶೀರ್ಷಿಕೆ ೬೧ರ ಅಡಿಯಲ್ಲಿ ಶಾಲೆಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಅಗತ್ಯ ವಸ್ತುಗಳ ಖರೀದಿಗೆ ಮೀಸಲಾದ ಹಣದ ಬಳಕೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪವನ್ನು ಮಾಡಿದರು. ೫೮ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಬೋಧನೆಗೆ ಟಿವಿ ಅಳವಡಿಸುವ ಉದ್ದೇಶದಿಂದ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರ ಮೇಲೆ ಒತ್ತಡ ಹೇರಿ ಖಾಲಿ ಚೆಕ್‌ಗಳನ್ನು ಪಡೆದು ತಲಾ ೫೫ ಸಾವಿರ ಹಣ ಡ್ರಾ ಮಾಡಲಾಗಿದೆ. ಆದರೆ ಸುಮಾರು ೨೪ ಸಾವಿರ ಮೌಲ್ಯದ ಕಳಪೆ ಗುಣಮಟ್ಟದ ‘ಕೂಕಾ’ ಕಂಪನಿ ಟಿವಿಗಳನ್ನು ಸರಬರಾಜು ಮಾಡಲಾಗಿದೆ. ಈ ಸಂಬಂಧ ಡಿಡಿಪಿಐಗೆ ದೂರು ನೀಡಲಾಗಿದ್ದು, ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.ಈ ಕುರಿತು ಸಚಿವ ಕೆ.ಎಂ. ಶಿವಲಿಂಗೇಗೌಡರು ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಅವರು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಲೋಕೇಶ್, ದಿನೇಶ್, ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.