ಯಶಸ್ಸಿನತ್ತ ಮುಖ ಮಾಡಿ: ವಿದ್ಯಾರ್ಥಿಗಳಿಗೆ ಟೈಗರ್ ಅಶೋಕ್ ಕುಮಾರ್‌ ಕರೆ

KannadaprabhaNewsNetwork |  
Published : Sep 23, 2026, 01:45 AM IST
22ಎಚ್ಎಸ್ಎನ್16 :  | Kannada Prabha

ಸಾರಾಂಶ

ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಶೌರ್ಯ ಮೆರೆದ ಕ್ಯಾಪ್ಟನ್ ವಿಜಯಂತ್ ಥಾಪರ್ ಅವರಂತಹ ವೀರ ಸೈನಿಕರು ವಿದ್ಯಾರ್ಥಿಗಳ ನಿಜವಾದ ಹೀರೋಗಳಾಗಬೇಕು ಎಂದರು. ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕರು, ಅನ್ನ ನೀಡುವ ರೈತರು, ಜ್ಞಾನ ನೀಡುವ ಗುರುಗಳು ಹಾಗೂ ತಮ್ಮ ಬದುಕನ್ನು ಮುಡಿಪಾಗಿಟ್ಟ ತಂದೆ-ತಾಯಿಯೇ ಜೀವನದ ನಿಜವಾದ ಹೀರೋಗಳು. ವಿದ್ಯಾರ್ಥಿಗಳು ಸಿಗರೇಟ್, ಮದ್ಯಪಾನ ಸೇರಿದಂತೆ ಎಲ್ಲ ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದರು.

ಕನ್ನಡಪ್ರಭವಾರ್ತೆ, ಹಾಸನ

ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ತಮ್ಮ ಭವಿಷ್ಯದತ್ತ ಗಮನಹರಿಸಿ ಪ್ರತಿದಿನ ಯಶಸ್ಸಿನ ಕಡೆಗೆ ಹೆಜ್ಜೆ ಇಡಬೇಕು ಎಂದು ನಿವೃತ್ತ ಎಸಿಪಿ ಹಾಗೂ “ಟೈಗರ್” ಖ್ಯಾತಿ ಬಿ.ಬಿ. ಅಶೋಕ್ ಕುಮಾರ್ ಹೇಳಿದರು.

ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಸನ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಟೈಗರ್ ಅಶೋಕ್ ಕುಮಾರ್ ಅವರ ಖಾಕಿ ಬದುಕಿನ ರೋಚಕ ಅನುಭವಗಳು” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಶೌರ್ಯ ಮೆರೆದ ಕ್ಯಾಪ್ಟನ್ ವಿಜಯಂತ್ ಥಾಪರ್ ಅವರಂತಹ ವೀರ ಸೈನಿಕರು ವಿದ್ಯಾರ್ಥಿಗಳ ನಿಜವಾದ ಹೀರೋಗಳಾಗಬೇಕು ಎಂದರು. ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕರು, ಅನ್ನ ನೀಡುವ ರೈತರು, ಜ್ಞಾನ ನೀಡುವ ಗುರುಗಳು ಹಾಗೂ ತಮ್ಮ ಬದುಕನ್ನು ಮುಡಿಪಾಗಿಟ್ಟ ತಂದೆ-ತಾಯಿಯೇ ಜೀವನದ ನಿಜವಾದ ಹೀರೋಗಳು. ವಿದ್ಯಾರ್ಥಿಗಳು ಸಿಗರೇಟ್, ಮದ್ಯಪಾನ ಸೇರಿದಂತೆ ಎಲ್ಲ ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅವಧಿಯ ರೋಚಕ ಅನುಭವಗಳನ್ನು ಹಂಚಿಕೊಂಡ ಅಶೋಕ್ ಕುಮಾರ್, “ಆಪರೇಷನ್ ಟೈಗರ್” ಸಂದರ್ಭದಲ್ಲಿ ಸರಗಳ್ಳರನ್ನು ಬೈಕ್‌ನಲ್ಲಿ ಬೆನ್ನಟ್ಟಿ ಹಿಡಿಯುವ ವೇಳೆ ಕೈಗೆ ಚಾಕುವಿನಿಂದ ಇರಿತವಾದರೂ ಕರ್ತವ್ಯದಿಂದ ಹಿಂದೆ ಸರಿಯದೆ ಆರೋಪಿಗಳನ್ನು ಬಂಧಿಸಿದ ಘಟನೆ ವಿವರಿಸಿದರು. ಈ ಘಟನೆಯ ನಂತರ ತಮಗೆ “ಟೈಗರ್ ಅಶೋಕ್” ಎಂಬ ಹೆಸರು ಪ್ರಸಿದ್ಧಿಯಾಯಿತು ಎಂದು ತಿಳಿಸಿದರು. ಕುಖ್ಯಾತ ಕಾಡುಗಳ್ಳ ವೀರಪ್ಪನ್‌ನನ್ನು ಹಿಡಿಯುವ ಕಾರ್ಯಾಚರಣೆಯಲ್ಲಿಯೂ ಹಲವು ಕಷ್ಟಕರ ಅನುಭವಗಳನ್ನು ಎದುರಿಸಿದ್ದಾಗಿ ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ದಕ್ಷ ಹಾಗೂ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ತಮಗೆ ಮೂರು ರಾಷ್ಟ್ರಪತಿ ಪದಕಗಳು ಲಭಿಸಿರುವುದಾಗಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪಾದಕ ಮಂಜುನಾಥ ದತ್ತ ಅವರು, ಅಶೋಕ್ ಕುಮಾರ್ ತಮ್ಮ ಬಾಲ್ಯದ ಸ್ನೇಹಿತರಾಗಿದ್ದು, ಬಾಲ್ಯದಿಂದಲೇ ಗಟ್ಟಿ ನಿಲುವು ಹಾಗೂ ಧೈರ್ಯ ಹೊಂದಿದ್ದವರು. ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಸಾಧನೆ ಮಾಡಿರುವುದು ಹಾಸನ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಡಾ. ತೇಜಸ್ವಿ ಮಾತನಾಡಿ, ಅಶೋಕ್ ಕುಮಾರ್ ಅವರ ಪೊಲೀಸ್ ಸೇವೆಯ ವಿವಿಧ ಘಟನೆಗಳು ಹಾಗೂ ಸಂದರ್ಶನಗಳನ್ನು ನೋಡಿದ್ದೇವೆ. ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು. ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್ ಮಾತನಾಡಿ, ಅಶೋಕ್ ಕುಮಾರ್‌ರಂತಹ ಸಾಧಕರನ್ನು ಕಾಲೇಜಿಗೆ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಅವರ ಅನುಭವಗಳನ್ನು ಹಂಚಿಕೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಡಿ.ಪಿ.ಮಾತನಾಡಿ, ಟೈಗರ್ ಅಶೋಕ್ ಕುಮಾರ್ ಅವರ “ಖಾಕಿ ಬದುಕಿನ ರೋಚಕ ಅನುಭವಗಳು” ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದ ಸಂಗತಿ. ವಿದ್ಯಾರ್ಥಿಗಳು ಅವರ ಅನುಭವಗಳನ್ನು ಕುತೂಹಲ ಮತ್ತು ಸಂಯಮದಿಂದ ಆಲಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ರೆಡ್ ಕ್ರಾಸ್ ಸಂಸ್ಥೆಯ ಅಮ್ಜದ್ ಖಾನ್, ಮಮತಾ ಪಾಟೀಲ್, ಶಬ್ಬೀರ್ ಅಹ್ಮದ್, ಜಯೇಂದ್ರ ಕುಮಾರ್, ಮಾಜಿ ರಾಜ್ಯಸಭಾ ಸದಸ್ಯ ಎಚ್.ಕೆ. ಜವರೇಗೌಡ, ಅಶೋಕ್ ಕುಮಾರ್ ಅವರ ಸ್ನೇಹಿತ ಜಾನಿ, ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕರಾದ ಕೆ.ಟಿ. ಜಯಶ್ರೀ, ಸುಬ್ಬಸ್ವಾಮಿ, ಉದಯ್ ಕುಮಾರ್, ಗಿರಿ ಗೌಡ, ಭೀಮರಾಜ್, ಬಿ.ಇ. ಶಿವರಾಮೇಗೌಡ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಗಣ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಆದಷ್ಟು ಬೇಗ ಪೂರ್ಣಗೊಳಿಸಿ
ಪಡಿತರ ಪದಾರ್ಥ ಪಡೆಯಲು ದೂರದ ಊರಿಗೆ ಹೋಗಬೇಕಿಲ್ಲ: ಸಚ್ಚಿನ್ ಚಲುವರಾಯಸ್ವಾಮಿ