ಕನಕಗಿರಿ: ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪುಷ್ಪ ನಮನ ಸಲ್ಲಿಸಿ, ಅದ್ಧೂರಿ ಮೆರವಣಿಗೆಗೆ ಶನಿವಾರ ಚಾಲನೆ ನೀಡಿದರು.
ಮೆರವಣಿಗೆಯುದ್ದಕ್ಕೂ ಕನ್ನಡ ನಾಡು, ನುಡಿ, ಕವಿಗಳ ಘೋಷಣೆ ಮೊಳಗಿದವು. ಮೆರವಣಿಗೆ ನಡೆಯುವ ಬೀದಿಯಲ್ಲಿ ನಿರ್ಮಿಸಲಾಗಿದ್ದ ವೆಂಕೋಬ ಆಚಾರ್ ಜೋಶಿ, ಜಯತೀರ್ಥ ರಾಜಪುರೋಹಿತ, ಜೆಮ್ಲಾ ನಾಯಕ ನವಲಿ ತಾಂಡಾ, ಸಾವಿತ್ರಮ್ಮ ಭುವನೇಶ್ವರಯ್ಯಶ್ರೀ, ನಾರಾಯಣರೆಡ್ಡಿ ಶಿವನಗುಂಡಿ, ರಾಮಚಂದ್ರಪ್ಪ ತುಪ್ಪದ, ಮಹಾಂತಯ್ಯಸ್ವಾಮಿ, ರಾಜಾ ಉಡಚಪ್ಪ ನಾಯಕ ಮಹಾದ್ವಾರಗಳು ನೋಡುಗರ ಗಮನ ಸೆಳೆದವು.
ಧ್ವಜಾರೋಹಣ ಕಾರ್ಯಕ್ರಮ: ಸಮ್ಮೇಳನ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಾರೋಹಣವನ್ನು ತಹಸೀಲ್ದಾರ್ ಚಂದ್ರಶೇಖರ ಗಾಳಿ ನೆರವೇರಿಸಿದರು. ಪರಿಷತ್ತಿನ ಧ್ವಜಾರೋಣವನ್ನು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಹಾಗೂ ನಾಡಧ್ವಜಾರೋಹಣವನ್ನು ತಾಲೂಕು ಕಸಾಪ ಅಧ್ಯಕ್ಷ ಮೆಹಬೂಬಹುಸೇನ ನೆರವೇರಿಸಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿ ಗೌರವ ಸಲ್ಲಿಸಿದರು. ದೈಹಿಕ ಶಿಕ್ಷಕರಾದ ತಿಪ್ಪಣ್ಣ, ಸುನೀತಾ ಪತ್ತಾರ, ಶಿವರೆಡ್ಡಿ ಮಣ್ಣೂರು, ಶಾಮೀದಸಾಬ ಇದ್ದರು.