ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಮತ್ತು ವಿವೇಕಾನಂದ ಮಹಾವಿದ್ಯಾಲಯದ ಆಶ್ರಯದಲ್ಲಿ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಸಾವರ್ಕರ್ ಸಭಾಭವನದಲ್ಲಿ ನಡೆದ ಅಬ್ಬಕ್ಕ-೫೦೦ ರಾಷ್ಟ್ರೀಯ ವಿಚಾರ ಸಂಕಿರಣ
ಪುತ್ತೂರು: ಯಾವ ಇತಿಹಾಸದಿಂದ ನಮ್ಮ ಮಕ್ಕಳು ಪ್ರೇರಣೆ ಪಡೆಯಬೇಕೋ, ಯಾವ ಇತಿಹಾಸದಿಂದ ಮುಂದಿನ ಪೀಳಿಗೆಯನ್ನು ಬೆಳೆಸಬೇಕಿತ್ತೋ ಅಂಥ ಭವ್ಯ ಇತಿಹಾಸವನ್ನು ನಾವು ಮರೆತಿದ್ದೇವೆ. ಶಿವಾಜಿಯನ್ನು ಒಂದು ಜಾತಿ, ಭಾಷೆಗೆ ಸೀಮಿತಗೊಳಿಸಿದ್ದೇವೆ. ಅಬ್ಬಕ್ಕ ರಾಣಿಯನ್ನು ಒಂದು ಭಾಗಕ್ಕೆ ಸೀಮಿತಗೊಳಿಸಿದ್ದೇವೆ. ಬೆನ್ನಿಗೆ ನಿಂತವರೇ ಬೆನ್ನಿಗೆ ಚೂರಿ ಹಾಕಿದ ಘಟನೆ ನಡೆದರೂ ಅಬ್ಬಕ್ಕ ರಾಣಿ ಪೋರ್ಚುಗೀಸರ ವಿರುದ್ಧ ತನ್ನ ತಾಯ್ನಾಡನ್ನು ರಕ್ಷಿಸಲು ಪಣತೊಟ್ಟವಳು. ಅಬ್ಬಕ್ಕನ ಸ್ಮರಣೆಯೇ ನಮಗೆ ಪ್ರೇರಣೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.ಸೋಮವಾರ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಮತ್ತು ವಿವೇಕಾನಂದ ಮಹಾವಿದ್ಯಾಲಯದ ಆಶ್ರಯದಲ್ಲಿ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಸಾವರ್ಕರ್ ಸಭಾಭವನದಲ್ಲಿ ನಡೆದ ಅಬ್ಬಕ್ಕ-೫೦೦ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರ‍್ಯಕ್ಕೆ ೧೦೦ ವರ್ಷ ತುಂಬುವಾಗ ವಿಕಸಿತ ಭಾರತ ನಿರ್ಮಾಣವಾಗಬೇಕೆಂಬುದು ಪ್ರಧಾನಿ ಮೋದಿ ಕನಸು. ಈ ಕನಸು ನನಸಾಗಬೇಕಾದರೆ ಕೇವಲ ಮೋದಿ ಒಬ್ಬರಿಂದ ಸಾಧ್ಯವಿಲ್ಲ. ದೇಶವಾಸಿಗಳೆಲ್ಲ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ವಿಕಸಿತ ಭಾರತ ತಲೆ ಎತ್ತಲು ಸಾಧ್ಯ ಎಂದು ಅವರು ಹೇಳಿದರು.೨೦೪೭ರ ಹೊತ್ತಿಗೆ ಭಾರತ ಪ್ರಪಂಚದ ಮಧ್ಯೆ ತಲೆ ಎತ್ತಿ ನಿಲ್ಲಬೇಕು. ವಿಕಸಿತ ಭಾರತ ಘೋಷಣೆ ವ್ಯಕ್ತಿಗತವಾದುದಲ್ಲ. ಇವತ್ತಿನ ಕಾಲೇಜಿನ ವಿದ್ಯಾರ್ಥಿಗಳು ೨೦ ವರ್ಷಗಳ ನಂತರದ ವಿಕಸಿತ ಭಾರತದ ಶಿಲ್ಪಿಗಳಾಗಬೇಕು. ಇದು ಸಾಧ್ಯವಾಗಬೇಕಾದರೆ ಮೊದಲು ನಮ್ಮೆಲ್ಲರಲ್ಲೂ ದೇಶಭಕ್ತಿಯ ತಾಕತ್ತು ಇರಬೇಕು. ಪರಕೀಯರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ಅಹಲ್ಯಾ ಭಾಯಿ ಹೋಳ್ಕರ್ ಅವರ ದೇಶಪ್ರೇಮ, ಕೆಚ್ಚು ನಮ್ಮಲ್ಲಿ ಮೂಡಬೇಕು. ಈ ವೀರ ವನಿತೆಯರಿಗೆ ಯಾವುದೇ ಜಾತಿ, ಧರ್ಮ, ಭಾಷೆ ಮುಖ್ಯವಾಗಿರಲಿಲ್ಲö. ಭಾರತ ಮಾತೆಯೇ ಅವರ ಧರ್ಮವಾಗಿತ್ತು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಭಾರತದಲ್ಲಿ ಮಹಿಳೆಯರಿಗೆ ದೇವತೆಯ ಸ್ಥಾನ ನೀಡಿ ಮಹತ್ವವನ್ನು ಕಲ್ಪಿಸಿದ್ದೇವೆ. ದೇಶಕ್ಕಾಗಿ ಮಹಿಳೆಯರು ಹೋರಾಡಿದ ನಿದರ್ಶನ ನಮ್ಮ ದೇಶದಲ್ಲಿದೆ. ನಮ್ಮ ದೇಶದಲ್ಲಿ ನೆಲೆ ಕಂಡುಕೊಂಡು ಸಕಲ ಸೌಲಭ್ಯಗಳನ್ನು ಪಡೆದಾಗ ದೇಶಕ್ಕಾಗಿ ಏನಾದರೂ ಸಲ್ಲಿಸುವ ಮನ ಮಾಡಬೇಕು ಎಂದರು.ದೆಹಲಿಯ ಯುಜಿಸಿಯ ಸಹ ಕಾರ್‍ಯದರ್ಶಿ ಅಸೀಮಾ ಮಂಗಳ ಮಾತನಾಡಿ, ಅಬ್ಬಕ್ಕ ಶತ್ರುಗಳನ್ನು ಎದುರಿಸಿದ್ದರಲ್ಲಿ ನಮ್ಮವರ ಮೇಲಿನ ಕಾಳಜಿಗಾಗಿ ಎಂದು ತಿಳಿಯುತ್ತದೆ. ಐತಿಹಾಸಿಕ ಕ್ಷಣಗಳನ್ನು ನೆನಪಿಸುವ ಅಬ್ಬಕ್ಕಳ ಕುರಿತಾದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸುವುದರ ಬಗ್ಗೆ ಹೆಮ್ಮೆ ಇದೆ ಇಂತಹ ಕಾರ್‍ಯಕ್ರಮಗಳಿಂದ ನಾವು ನಡೆದ ಕ್ರಾಂತಿಗಳ ಬಗೆಗೂ ತಿಳಿಯುತ್ತೇವೆ. ಶಿಕ್ಷಣ ಸಂಸ್ಥೆಗಳು ದೇಶದ ಹೆಮ್ಮೆಯ ಸಂಸ್ಕೃತಿಯನ್ನು ತಿಳಿಯಪಡಿಸುವ ಕೇಂದ್ರಗಳಾಗಬೇಕು ಎಂದು ಹೇಳಿದರು.ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾ ಸಂಘದ (ಎಬಿಆರ್‌ಎಸ್‌ಎಂ) ರಾಷ್ಟ್ರೀಯ ಸಂಘಟನಾ ಕಾರ್‍ಯದರ್ಶಿ ಗುಂಟ ಲಕ್ಷ್ಮಣ್, ವಿವೇಕಾನಂದ ಮಹಾ ವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಶುಭ ಹಾರೈಸಿದರು. ಮೂಡುಬಿದರೆ ಚೌಟರ ಅರಮನೆಯ ಕುಲದೀಪ ಎಂ. ಚೌಟ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆಆರ್‌ಎಂಎಸ್‌ಎಸ್) ಮಂಗಳೂರು ವಿಭಾಗದ ಡಾ. ಆಶಾಲತಾ, ವಿವೇಕಾನಂದ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್ ಎಂ.ಜಿ., ಪ್ರಿನ್ಸಿಪಾಲ್ ಶ್ರೀಕೃಷ್ಣ ಗಣರಾಜ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ಮಾಧವ ಎಂ.ಕೆ. ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ವಾಣಿ ಯು.ಎಸ್. ವಂದಿಸಿದರು.ವಿಚಾರ ಮಂಡನೆ: ಉದ್ಘಾಟನಾ ಕಾರ್‍ಯಕ್ರಮದ ಬಳಿಕ ಸಮಕಾಲೀನ ಸಂದರ್ಭದಲ್ಲಿ ರಾಣಿ ಅಬ್ಬಕ್ಕಳ ಪ್ರಸ್ತುತತೆ ಎಂಬ ವಿಚಾರದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿದರು. ೨ನೇ ವಿಚಾರಗೋಷ್ಠಿಯಲ್ಲಿ ಭಾರತದ ಇತಿಹಾಸ- ರಾಣಿ ಅಬ್ಬಕ್ಕಳ ಕೊಡುಗೆ ಎಂಬ ವಿಚಾರದಲ್ಲಿ ಬಂಟ್ವಾಳ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ ಮಾತನಾಡಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಷ್ಟ್ರೀಯ ಸಹ ಸಂಘಟನಾ ಕಾರ್‍ಯದರ್ಶಿ ಎ.ಬಿ.ಆರ್.ಎಸ್.ಎಂ. ನವದೆಹಲಿ ಲಕ್ಷ್ಮಣ ಗುಂಟ ಮಾತನಾಡಿ, ಇಂತಹ ಕಾರ್‍ಯಕ್ರಮಗಳಿಂದ ನಾವುಗಳು ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಕೇವಲ ಶಿಕ್ಷಣಕ್ಕೆ ಮಾತ್ರ ನಮ್ಮನ್ನು ಸೀಮಿತವಾಗಿರಿಸದೆ ಹೊರಗಿನ ಶೈಕ್ಷಣಿಕೇತರ ಕಾರ್ಯಗಳಲ್ಲಿ ನಾವು ತೊಡಗಿಸಿಕೊಳ್ಳಬೇಕಿದೆ ಎಂದರು.ಕಾರ್‍ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಕಾರ್‍ಯದರ್ಶಿ ಹಾಗೂ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಕೆ.ಎಂ. ಕೃಷ್ಣ ಭಟ್ ಮಾತನಾಡಿ, ಇತಿಹಾಸದ ಪುಟದಿಂದ ವಿಸ್ಮೃತಿಗೊಂಡ ಅಬ್ಬಕ್ಕನನ್ನು ನೆನಪಿಸಿಕೊಳ್ಳುವಂತಹ ಈ ಕಾರ್‍ಯಕ್ರಮ ವಿಶೇಷವಾದುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನ ಇದರಲ್ಲಿ ಸಾಧನೆಗೈದ ಶಾರ್ಟ್ ಆಫ್ ಲಿವಿಂಗ್ ಮಂಗಳೂರು ಇಲ್ಲಿನ ಶಿಕ್ಷಕಿ ಕೆ.ಎನ್. ದೀಪಿಕಾ, ಕರ್ನಾಟಕ ಶಿಕ್ಷಕ ಸಂಘದ ಪ್ರತಿನಿಧಿ ಮತ್ತು ಜಂಟಿ ಕಾರ್‍ಯದರ್ಶಿ ಮಾಧವ ಕೆ. ಅವರನ್ನು ಸನ್ಮಾನಿಸಲಾಯಿತು.
ಶಿವಪೂಜಿ ಕೋಟಿ ಸಂಚಾಲಕ ಎಬಿಆರ್ ಎಸ್.ಎಂ. ಕರ್ನಾಟಕ, ಪ್ರೊ. ರೋಹಿಣಿ ಕುಮಾರ್ ಹಿಲ್ಲಿ ಪ್ರಧಾನ ಕಾರ‍್ಯದರ್ಶಿ ಕೆಆರ್ ಎಂಎಸ್ ಎಸ್ ಬೆಂಗಳೂರು, ಡಾ.ಸಿ.ವಿ. ಮರಿದೇವರ ಮಠ ಸಂಘಟನಾ ಕಾರ‍್ಯದರ್ಶಿ ಕೆಆರ್ ಎಂಎಸ್ ಎಸ್ ಬೆಂಗಳೂರು, ಪ್ರೊ. ಸುರೇಂದ್ರ ಶೆಟ್ಟಿ, ಅಧ್ಯಕ್ಷರು ಕೆಆರ್ ಎಂಎಸ್ ಎಸ್ ಉಡುಪಿ, ಪ್ರೊ. ವಾಣಿ ಅಧ್ಯಕ್ಷರು ಮಂಗಳೂರು, ಡಾ. ಆಶಾಲತಾ ಕಾರ‍್ಯಕ್ರಮ ಸಂಯೋಜಕಿ ಉಪಸ್ಥಿತರಿದ್ದರು
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜೇಶ್ ವಂದಿಸಿ, ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಶಿಕ್ಷಕಿ ಕಾಜಲ್ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.