ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು(ವಿಟಿಯು) ಲಕ್ಷಾಂತರ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ, ಪ್ರಾಯೋಗಿಕ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ಸಜ್ಜುಗೊಳಿಸಲು ದೇಶದ ಅತ್ಯುನ್ನತ ಸರ್ಚ್‌ ಎಂಜಿನ್‌ ಗೂಗಲ್‌ ಸೇರಿದಂತೆ ವಿವಿಧ ಕಂಪನಿಗಳೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

 ಬೆಂಗಳೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು(ವಿಟಿಯು) ಲಕ್ಷಾಂತರ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ, ಪ್ರಾಯೋಗಿಕ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ಸಜ್ಜುಗೊಳಿಸಲು ದೇಶದ ಅತ್ಯುನ್ನತ ಸರ್ಚ್‌ ಎಂಜಿನ್‌ ಗೂಗಲ್‌ ಸೇರಿದಂತೆ ವಿವಿಧ ಕಂಪನಿಗಳೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಗೂಗಲ್‌ ಕಂಪನಿಯೊಂದಿಗಿನ ಒಪ್ಪಂದ ಇದೇ ಮೊದಲ ಬಾರಿ

ಗೂಗಲ್‌ ಕಂಪನಿಯೊಂದಿಗಿನ ಒಪ್ಪಂದ ಇದೇ ಮೊದಲ ಬಾರಿಯಾಗಿದ್ದು, ವಿಟಿಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಹಾಗೂ ಕುಲಸಚಿವ (ಆಡಳಿತ) ಪ್ರೊ.ಪ್ರಸಾದ ಬಿ. ರಾಂಪುರೆ ಮತ್ತು ಗೂಗಲ್‌ ಫಾರ್‌ ಎಜುಕೇಷನ್‌ ಇಂಡಿಯಾ ಕಂಪನಿಯ ಮುಖ್ಯಸ್ಥ ಸಂಜಯ್‌ ಜೈನ್‌ ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಕ್ಯೂಸ್ಪೈಡರ್‌ ಕಂಪನಿಯ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಿದರು.

ಎಐ ಕೌಶಲ್ಯ, ಬೋಧಕರಿಗೆ ಕೌಶಲ್ಯ ಶಿಕ್ಷಣ,

ಎಐ ಕೌಶಲ್ಯ, ಬೋಧಕರಿಗೆ ಕೌಶಲ್ಯ ಶಿಕ್ಷಣ, ಕ್ಲೌಡ್‌ ಕಂಪ್ಯೂಟಿಂಗ್‌, ಡೇಟಾ ಸೈನ್ಸ್‌, ಸೈಬರ್‌ ಸೆಕ್ಯೂರಿಟಿ, ಕೈಗಾರಿಕೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು, ಉದ್ಯೋಗವಕಾಶಗಳನ್ನು ಪಡೆಯಲು ಬೇಕಾದ ತರಬೇತಿ ನೀಡುವ ಉದ್ದೇಶದಿಂದ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದೇ ರೀತಿ ಕ್ವಾಲ್ಕಮ್, ಭಾರತ್ ಸ್ಕಿಲ್ ಇನ್‌ಸ್ಟಿಟ್ಯೂಟ್ ಫೌಂಡೇಷನ್, ಸೀಲ್ ಕಂಪನಿಗಳ ಜತೆಗೂ ಒಪ್ಪಂದ ಮಾಡಿಕೊಂಡಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌, ವಿಟಿಯು 220 ಎಂಜಿನಿಯರಿಂಗ್‌ ಕಾಲೇಜುಗಳನ್ನು ಹೊಂದಿದೆ. ಇಲ್ಲಿ 3 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕೈಗಾರಿಕೆಗಳು ಬಯಸುವ ರೀತಿಯಲ್ಲಿ ಸಿದ್ಧರಾಗಿರಬೇಕಾಗುತ್ತದೆ. ಇದಕ್ಕೆ ಸೂಕ್ತ ತರಬೇತಿಯ ಅವಶ್ಯಕತೆ ಇದೆ. ಹೀಗಾಗಿ ನಾವು ಗೂಗಲ್‌ ಕಂಪನಿ ಸೇರಿದಂತೆ ಹಲವಾರು ಕಂಪನಿಗಳ ಜತೆಗೆ ಕೈ ಜೋಡಿಸಿದ್ದೇವೆ. ಕಂಪನಿಗಳು ಕೌಶಲ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದರು.

ಗೂಗಲ್‌ ಫಾರ್‌ ಎಜುಕೇಷನ್‌ ಇಂಡಿಯಾ ಕಂಪನಿಯ ಮುಖ್ಯಸ್ಥ ಸಂಜಯ್‌ ಜೈನ್‌ ಮಾತನಾಡಿದರು. ಈ ವೇಳೆ ವಿಟಿಯು ವಿಶೇಷಾಧಿಕಾರಿ ಡಾ.ಅಜಿತ್‌ ಪದ್ಯಾಣ, ವಿಟಿಯು ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ.ಎಚ್.ಆರ್‌.ಸುದರ್ಶನ ರೆಡ್ಡಿ, ಕ್ಯೂಸ್ಪೈಡರ್‌ ಕಂಪನಿಯ ಸಿಇಒ ಗಿರೀಶ್‌ ರಾಮಣ್ಣ ಇತರರು ಇದ್ದರು.