ಜೆಜಿ ಹಳ್ಳಿ ಹೋಬಳಿಯ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ರೈತರು ದಂಗೆ ಏಳಲಿದ್ದಾರೆ: ಕೆ.ಟಿ.ತಿಪ್ಪೇಸ್ವಾಮಿಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಜೆಜಿ ಹಳ್ಳಿಯ ಗಾಯಿತ್ರಿ ಜಲಾಶಯ ಸೇರಿದಂತೆ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಳೆದ 253 ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನಮ್ಮ ಹೋರಾಟದತ್ತ ತಲೆ ಹಾಕಿಲ್ಲ ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಕಿಡಿಕಾರಿದರು.ತಾಲೂಕಿನ ಜೆಜಿ ಹಳ್ಳಿಯಲ್ಲಿ ನಡೆಯುತ್ತಿದ್ದ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಗರದ ತಾಲೂಕು ಕಚೇರಿ ಮುಂಭಾಗಕ್ಕೆ ವರ್ಗಾಯಿಸಿ ಅಹೋರಾತ್ರಿ ಧರಣಿ ಆರಂಭಿಸಿ ಅವರು ಮಾತನಾಡಿದರು.
ಗಾಯಿತ್ರಿ ಜಲಾಶಯ ಸೇರಿದಂತೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಉರುಳು ಸೇವೆ, ಪಂಜಿನ ಮೆರವಣಿಗೆ, ಬಾರುಕೋಲು ಚಳುವಳಿ, ಟ್ರ್ಯಾಕ್ಟರ್ ಚಳುವಳಿ, ಎತ್ತಿನಗಾಡಿ ಚಳುವಳಿ ಸೇರಿದಂತೆ ಅನೇಕ ರೀತಿಯ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೆರಡು ದಿನಗಳಲ್ಲಿ ಸಂಬಂಧಪಟ್ಟ ಸಚಿವರನ್ನು ಧರಣಿ ಸ್ಥಳಕ್ಕೆ ಕರೆಸಿ ರೈತರ ಸಮಸ್ಯೆ ಬಗಹರಿಸಿದಿದ್ದರೆ ರೈತರು ದಂಗೆ ಏಳಲಿದ್ದಾರೆ. ಇದಕ್ಕೆ ಸಚಿವರು, ಜಿಲ್ಲಾ ಮತ್ತು ತಾಲೂಕು ಆಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದರು.ನಮ್ಮ ತಾಲೂಕಿನ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಚಿವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಇಂದಿನಿಂದ ಅಹೋರಾತ್ರಿ ಧರಣಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದ್ದು, ನಾವು ಪ್ರಾಣವನ್ನು ಬೇಕಾದರೂ ಬಿಟ್ಟೆವು ಹೋರಾಟ ಮಾತ್ರ ಬಿಡುವುದಿಲ್ಲ. ಸಚಿವರು ತಾಲೂಕಿಗೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬರುತ್ತಿದ್ದಾರೆ. ವಾಣಿ ವಿಲಾಸ ಜಲಾಶಯದಿಂದ ವೇದಾವತಿ ನದಿ ಮೂಲಕ 0.25 ಟಿಎಂಸಿ ನೀರು ಹರಿಸಬೇಕು ಎಂದು ಯಾವುದೇ ಹೋರಾಟ ಇಲ್ಲದೆ ಚಳ್ಳಕೆರೆಯವರು ನೀರು ಹರಿಸುವ ಆದೇಶ ಮಾಡಿಸಿಕೊಳ್ಳುತ್ತಾರೆ. ಹೋರಾಟ ಮಾಡೋಕೆ ನಾವು ಬೇಕು. ನೀರು ತೆಗೆದುಕೊಂಡು ಹೋಗೋದು ಮಾತ್ರ ಬೇರೆಯವರು. ಇದೀಗ ಬೇಸಿಗೆ ಆರಂಭಗೊಂಡಿದೆ. ಕೆರೆ ಕಟ್ಟೆಗಳು ಬತ್ತಿ ಹೋಗುತ್ತಿವೆ. ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸಚಿವರ ನಿರ್ಲಕ್ಷ್ಯದಿಂದ ನಮಗೆ ಅನ್ಯಾಯವಾಗುತ್ತಿದೆ ಎಂದರು. ಈ ಹಿಂದೆ ಡಿ.ಸುಧಾಕರ್ ಅವರು ಶಾಸಕರಾಗಿದ್ದ ವೇಳೆ ಭದ್ರಾದಿಂದ ವಿವಿ ಸಾಗರ ಡ್ಯಾಂಗೆ 5 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ಆದರೆ ಆನಂತರ 5 ರಲ್ಲಿ 3 ಟಿಎಂಸಿ ನೀರನ್ನು ಕಡಿತಗೊಳಿಸಿ 2 ಟಿಎಂಸಿಗೆ ಇಳಿಸಿದರು. ಆಗ ಸುಧಾಕರ್ ಅವರು ತುಟಿ ಬಿಚ್ಚಲಿಲ್ಲ. ರೈತರ ಕಣ್ಣೊರೆಸುವ ಮಾತುಗಳನ್ನು ಆಡುತ್ತಿದ್ದಾರೆ. ಈ ಬಜೆಟ್‌ನಲ್ಲಿ ನಮ್ಮ ನೀರಿಗಾಗಿ ಅನುದಾನ ಮೀಸಲಿಟ್ಟು ಭದ್ರಾ ಜಲಾಶಯದಿಂದ ವಿವಿ ಸಾಗರ ಡ್ಯಾಂಗೆ ನೀರು ಹರಿಸಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಅರಳಿಕೆರೆ ತಿಪ್ಪೇಸ್ವಾಮಿ ಮಾತನಾಡಿ, ತಾಲೂಕು ನೀರಿನ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 7 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ ಎಂದರು.ರೈತರು ಟ್ಯಾಂಕರ್ ಮೂಲಕ ನೀರು ಹರಿಸಿಕೊಂಡು ತೋಟ ಉಳಿಸಿಕೊಳ್ಳಲು ಮುಂದಾಗಿದ್ದಾರೆ ಈಗಾಗಲೇ ನಾಲ್ಕಾರು ವರ್ಷಗಳಿಂದ ನಮ್ಮ ಜಲಾಶಯಕ್ಕೆ ಹೆಚ್ಚಿನ ನೀರು ಬೇಕೆಂದು ಎಚ್ಚರಿಸುತ್ತಾ ಇದ್ದೇವೆ. ಆದರೆ ನಮ್ಮ ಕೂಗು ಹಿಂದಿನ ಮತ್ತು ಈಗಿನ ಸರ್ಕಾರಕ್ಕೆ ಮುಟ್ಟಲಿಲ್ಲ. ಈ ತಾಲೂಕಿನ ಶಾಸಕರು ಜನರನ್ನು ಮುಠ್ಠಾಳರು ಎಂದುಕೊಂಡಿದ್ದಾರೆ. ಮುಂದಿನ ನಮ್ಮ ಪೀಳಿಗೆ ನಮಗೆ ನೀರಿನ ವಿಚಾರದಲ್ಲಿ ಶಾಪ ಕೊಡುವ ಪರಿಸ್ಥಿತಿ ಬರುತ್ತದೆ. ಜಲಾಶಯ ನಮ್ಮದು, ನೀರು ನಮ್ಮದು. ಆದರೆ ನಮ್ಮ ತಾಲೂಕಿಗೇ ಹೆಚ್ಚಿನ ಅನ್ಯಾಯ ಆಗಿದೆ. ಮೊಳಕಾಲ್ಮೂರು, ಚಳ್ಳಕೆರೆ, ಕುದಾಪುರ ಎಲ್ಲಾ ಕಡೆಗೂ ನೀರು ತೆಗೆದುಕೊಂಡು ಹೋಗುತ್ತಾರೆ. ಆದರೆ ನಮ್ಮ ತಾಲೂಕಿನ ಜನರು ಬೀದಿಯ ಧೂಳು ಕುಡಿದು ನೀರು ಕೊಡಿ ಎಂದು ಹೋರಾಟ ಮಾಡುತ್ತಿರುವುದು ವಿಪರ್ಯಾಸ ಎಂದರು.
ಈ ವೇಳೆ ಈರಣ್ಣ, ರಾಮಣ್ಣ, ಕೆ.ಆರ್.ಹಳ್ಳಿ ರಾಜಪ್ಪ, ಶಿವಣ್ಣ, ನಂದಿಹಳ್ಳಿ ರಂಗಸ್ವಾಮಿ, ಸಣ್ಣ ತಿಮ್ಮಣ್ಣ, ರಾಜ್‌ಕುಮಾರ್, ಜೆಡಿಎಸ್ ಮುಖಂಡ ಜೆಜಿ ಹಳ್ಳಿ ಮಂಜಣ್ಣ, ಮಂಜುನಾಥ್, ರಾಮಕೃಷ್ಣ, ಬಾಲಕೃಷ್ಣ, ಸಿದ್ದಮ್ಮ, ಜಯರಾಮಪ್ಪ, ಶ್ರೀರಂಗಮ್ಮ, ಹಟ್ಟಿಗೌಡ ಈರಣ್ಣ, ತಿಮ್ಮಾರೆಡ್ಡಿ, ಬಿಆರ್. ರಂಗಸ್ವಾಮಿ, ಚಂದ್ರಪ್ಪ, ದೊರೆಸ್ವಾಮಿ, ಗೌಡನಹಳ್ಳಿ ರಮೇಶ್ ಮುಂತಾದವರು ಹಾಜರಿದ್ದರು.ರೈತರ ಕಣ್ಣೀರು ಒರೆಸಲು ಮುಂದಾಗಿ:
ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ತಾಲೂಕಿನಲ್ಲಿ ನೀರಿಗಾಗಿ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ಸಚಿವ ಡಿ.ಸುಧಾಕರ್ ಅವರು ಜಾಣ ಕುರುಡುತನ ಪ್ರದರ್ಶಿಸಿಕೊಂಡು ಅನ್ನದಾತನ ಹೋರಾಟವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸಚಿವರಿಗೆ ರೈತರ ಬಗ್ಗೆ ಆಸಕ್ತಿ, ಕಾಳಜಿ ಇದ್ದರೆ ಕೂಡಲೇ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡಿಸಬೇಕು. ಕಲ್ಲು ಮತ್ತು ಗುಡ್ಡಗಳಿಂದ ಕೂಡಿರುವ ಕಲ್ಲುವಳ್ಳಿ ಭಾಗಕ್ಕೆ ನೀರು ಹರಿಸಿ ಆ ಭಾಗದ ರೈತರ ಕಣ್ಣೀರು ಒರೆಸಲು ಮುಂದಾಗಬೇಕು ಎಂದರು.